ಅಜೀಜಅಹ್ಮದ ಬಳಗಾನೂರ
ಜನ ಮರುಳೋ ಜಾತ್ರೆ ಮರುಳೋ ಎಂಬಂತೆ ಹೀಗೊಂದು ಗಾಳಿಸುದ್ದಿ ನಮ್ಮ ಉತ್ತರ ಕರ್ನಾಟಕ ಭಾಗದಲ್ಲಿ ಹರಡಿದೆ. ಈ ಸುದ್ದಿ ಹರಡಿದ್ದೇ ತಡ ಜನರು ಸೀರೆ ಅಂಗಡಿಗಳಿಗೆ ಮುಗಿಬೀಳುತ್ತಿದ್ದಾರೆ.
ಒಂದು ವಾರದಿಂದ ಎಲ್ಲೆಂದರಲ್ಲಿ ಇದೇ ಸುದ್ದಿ. ಗ್ರಾಮೀಣ ಭಾಗದಲ್ಲಂತೂ ಬಲು ಜೋರು ಚರ್ಚೆ. ಆದರೆ, ಇದನ್ನು ಯಾರು ಹೇಳಿದರು? ಏಕೆ ಆಚರಿಸಬೇಕು ಎಂಬ ಪ್ರಶ್ನೆಗಳಿಗೆ ಮಾತ್ರ ಉತ್ತರವಿಲ್ಲ.ಧಾರವಾಡ, ಗದಗ, ಕೊಪ್ಪಳ, ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಹಲವು ಜಿಲ್ಲೆಗಳಲ್ಲಿ ವದಂತಿ ಹರಿದಾಡುತ್ತಿದೆ. ಇದು ಜನರನ್ನು ಭಯಗೊಳಿಸುವ ತಂತ್ರವೋ ಅಥವಾ ಬಟ್ಟೆ ಅಂಗಡಿ ವ್ಯಾಪಾರಿಗಳ ಗಿಮಿಕ್ ಗೊತ್ತಿಲ್ಲ. ಇನ್ನು ನೇಕಾರರು ನೂಲಿಗೆ ಬಣ್ಣ ಹಾಕುವ ವೇಳೆ ಬಣ್ಣ ಕೆಟ್ಟರೆ ಇಂತಹ ಗಾಳಿ ಸುದ್ದಿ ಹರಡಿಸುತ್ತಾರೆ ಎಂಬುದು ಕೆಲವು ಹಿರಿಯರು ಹೇಳುವ ಮಾತು.
ಬಾಂಧವ್ಯ ಗಟ್ಟಿಗೊಳ್ಳಲು ಸಹಕಾರಿ: ಈ ರೀತಿಯ ನೆಪದಲ್ಲಾದರೂ ಹೆಣ್ಣು ಮಗಳು ತವರು ಮನೆಗೆ ಬಂದು ಅಲ್ಲಿ ನೀಡುವ ಉಡುಗೊರೆ ತೆಗೆದುಕೊಂಡು ತವರು ಮನೆಗೆ ಒಳಿತಾಗಲಿ ಎಂದು ಹರಸಿ ಹೋಗುತ್ತಾಳೆ. ಇದರಿಂದಾಗಿ ತವರು ಮನೆಯ ಸಂಬಂಧ ಗಟ್ಟಿಗೊಳ್ಳುತ್ತವೆ ಎಂಬುದು ಹಿರಿಯರ ಮಾತು.
ಆಚರಣೆ ತಪ್ಪೇನಿಲ್ಲ: ಕೆಲವರು ಇಂತಹ ಆಚರಣೆ ಮೌಢ್ಯವೆನ್ನುತ್ತಾರೆ. ಆದರೆ, ಇಂದಿನ ಆಧುನಿಕ ದಿನಮಾನಗಳಲ್ಲಿ ಮಕ್ಕಳಿಗೆ ಸಂಬಂಧಗಳ ಬೆಲೆ ಗೊತ್ತಿಲ್ಲದಂತಾಗಿದೆ. ಬಂಧು-ಬಾಂಧವರನ್ನು ಒಂದೆಡೆ ಸೇರಿಸಿ ಎಲ್ಲರೂ ಸೇರಿ ಸಂಭ್ರಮಿಸಲು ಇಂತಹ ಆಚರಣೆ ಸಹಕಾರಿಯಾಗುತ್ತವೆ. ಹಾಗಾಗಿ ಇಂತಹ ಆಚರಣೆ ಮಾಡುವುದರಲ್ಲಿ ತಪ್ಪೇನಿಲ್ಲ ಎಂದು ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಲಕ್ಷ್ಮಪ್ಪ ಕೊರವರ, ಶಾರದಾ ಕೊರವರ ದಂಪತಿ ಹೇಳುವ ಮಾತು.
ವದಂತಿಯ ಬಗ್ಗೆ ನಮಗೆ ಹೆಚ್ಚಿನ ಮಾಹಿತಿಯಿಲ್ಲ. ಕಳೆದೊಂದು ವಾರದಿಂದ ಅಂಗಡಿಗೆ ಬರುವವರು ಹಸಿರು ಸೀರೆಗಳನ್ನೇ ಹೆಚ್ಚಾಗಿ ಕೇಳುತ್ತಿದ್ದಾರೆ. ಕಳೆದ ಬಾರಿಗಿಂತ ಈಗ ಹಸಿರು ಬಣ್ಣದ ಬಗೆಬಗೆಯ ಸೀರೆ ಹೆಚ್ಚಾಗಿ ತರಿಸಿದ್ದೇವೆ ಎಂದು ಹುಬ್ಬಳ್ಳಿಯ ಗಂಗಾವತಿ ಸಿಲ್ಕ್ ಪ್ಯಾಲೇಸ್‌ನ ಸಿಬ್ಬಂದಿ ವೀರೇಶ ಹೇಳಿದರು.