ಕನ್ನಡಪ್ರಭ ವಾರ್ತೆ ಶಿಕಾರಿಪುರ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನದಿಂದಾಗಿ ರಾಜ್ಯದ ಜನಸಾಮಾನ್ಯರ ನೆಮ್ಮದಿಯ ಬದುಕಿಗೆ ಸಹಕಾರಿಯಾಗಿದೆ ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್. ಬಂಗಾರಪ್ಪ ಹೇಳಿದರು.
ಈ ಎಲ್ಲಾ ಗ್ಯಾರೆಂಟಿ ಯೋಜನೆಗಳ ಸೌಲಭ್ಯಗಳು ಅರ್ಹರಾದ ಎಲ್ಲಾ ಪಲಾನುಭವಿಗಳಿಗೆ ಯಾವುದೇ ಮಧ್ಯವರ್ತಿಗಳಿಲ್ಲದೆ ತಲುಪುತ್ತಿರುವುದು ಹರ್ಷವೆನಿಸಿದೆ. ರಾಜ್ಯದ ಪ್ರತಿ ಪಂಚಾಯಿತಿಗೆ ವಾರ್ಷಿಕವಾಗಿ ಸುಮಾರು ₹9 ಕೋಟಿಗೂ ಅಧಿಕ ಮೊತ್ತ ನೇರವಾಗಿ ತಲುಪುತ್ತಿದೆ. ಈ ಎಲ್ಲಾ ಯೋಜನೆಗಳು ಶೇ. 99ರಷ್ಟು ಯಶಸ್ವಿಯಾಗಿರುವುದು ಪ್ರಸ್ತುತ ಸರ್ಕಾರದ ಹೆಗ್ಗಳಿಕೆ ಎಂದರು.
ಈ ಎಲ್ಲಾ ಗ್ಯಾರಂಟಿ ಯೋಜನೆಗಳ ಸೌಲಭ್ಯವನ್ನು ಜಾತ್ಯತೀತವಾಗಿ, ಪಕ್ಷತೀತವಾಗಿ ನೀಡಲಾಗುತ್ತಿದೆ. ಅರ್ಹರಾದ ಯಾರೊಬ್ಬರೂ ಈ ಯೋಜನೆಗಳ ಸೌಲಭ್ಯದಿಂದ ವಂಚಿತರಾಗದಂತೆ ಗಮನಿಸಲಾಗುವುದು. ಅಂತೆಯೇ ಎರಡು -ಮೂರು ದಶಗಳ ಹಿಂದೆ ಮಾಜಿ ಮುಖ್ಯಮಂತ್ರಿ ಬಂಗಾರಪ್ಪರವರು ಜನಸಾಮಾನ್ಯರ ಸಂಕಷ್ಟಗಳನ್ನು ಅರಿತು ಕೃಷಿ ಚಟುವಟಿಕೆಗಳಿಗೆ ಬಳಸುವ ವಿದ್ಯುತ್ ಆನ್ನು ಅಂದೇ ಉಚಿತವಾಗಿ ನೀಡಿದ್ದರು ಎಂದು ತಿಳಿಸಿದರು.ಅಲ್ಲದೆ ಅಂದು ಜಾರಿಗೆ ತಂದಿದ್ದ ಆಶ್ರಯ, ಆರಾಧನಾ, ಗ್ರಾಮೀಣ ಕೃಪಾಂಕ ಮುಂತಾದ ಜನಪ್ರಿಯ ಯೋಜನೆಗಳು ಇಂದಿಗೂ ಜನಮಾನಸದಲ್ಲಿವೆ. ಆ ಪರಂಪರೆ ಇಂದಿಗೂ ಮುಂದುವರೆದಿದೆ. ಮುಂದೆಯೂ ಮುಂದುವರೆಯಲಿದೆ ಎಂದ ಅವರು, ಸರ್ಕಾರದ ಇಂತಹ ಯೋಜನೆಗಳ ಲಾಭ ಪಡೆದ ಸಾರ್ವಜನಿಕರು ಜನಪ್ರತಿನಿಧಿಗಳಿಗೆ ಬೆಂಬಲವಾಗಿ ನಿಲ್ಲಬೇಕು. ಶೇ. 100ರಷ್ಟು ಅಂಕ ನೀಡಿ ಉತ್ತೀರ್ಣಗೊಳಿಸಬೇಕು ಎಂದು ನುಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಭೂಪಾಲ್, ರಾಜ್ಯ ಭೋವಿ ನಿಗಮದ ಅಧ್ಯಕ್ಷ ರವಿಕುಮಾರ್, ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ನಾಗರಾಜ ಗೌಡ, ಪಾರಿವಾಳದ ಶಿವರಾಂ, ಭಂಡಾರಿ ಮಾಲತೇಶ್, ನಗರದ ಮಹದೇವಪ್ಪ, ಪಾಲಾಕ್ಷಪ್ಪ ಗೌಡ, ತಹಸೀಲ್ದಾರ್ ಮಲ್ಲೇಶಪ್ಪ ಪೂಜಾರ್ ಸೇರಿದಂತೆ ಅನೇಕ ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು.