ಕನ್ನಡಪ್ರಭ ವಾರ್ತೆ ಬೆಳಗಾವಿ
ಸಾಧಕರ ಸುದೀರ್ಘ ಸೇವೆ ಗುರುತಿಸಿ ಅವರನ್ನು ಸತ್ಕರಿಸುವುದು ಪ್ರಸ್ತುತ ಯುವ ಜನಾಂಗಕ್ಕೆ ಮಾರ್ಗದರ್ಶಿಯಾಗುವುದರ ಜೊತೆಗೆ ಅವರ ಸತ್ಕಾರ್ಯಕ್ಕೆ ಇನ್ನಷ್ಟು ಹುರುಪು ಸಿಕ್ಕಂತಾಗುವುದು ಎಂದು ಪೃಥ್ವಿ ಫೌಂಡೇಶನ್ ಅಧ್ಯಕ್ಷೆ ಡಾ.ಹೇಮಾವತಿ ಸೋನೋಳ್ಳಿ ಹೇಳಿದರು.ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಪೃಥ್ವಿ ಫೌಂಡೇಶನ್ ವತಿಯಿಂದ ಹಮ್ಮಿಕೊಳ್ಳಲಾದ ಅನುಪಮ ಸೇವಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಧಕರನ್ನು ಸನ್ಮಾನಿಸಿ ಮಾತನಾಡಿದ ಅವರು, ಆ ನಿಟ್ಟಿನಲ್ಲಿ ನಮ್ಮ ಫೌಂಡೇಶನ್ ವತಿಯಿಂದ ಎಲೆ ಮರೆ ಕಾಯಿಯಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವ ಮಹನೀಯರನ್ನು ಗುರುತಿಸಿ ಅವರ ಸೇವೆಯನ್ನು ನೆನೆಯುವ ಕಾರ್ಯ ಕಳೆದ 9 ವರ್ಷಗಳಿಂದ ಸಾಗುತ್ತ ಬಂದಿದೆ ಎಂದರು.ಇತ್ತೀಚಿನ ದಿನಗಳಲ್ಲಿ ಲಾಭಕ್ಕಾಗಿ ಸೇವೆ ಮಾಡುತ್ತಿರುವವರ ಸಂಖ್ಯೆ ಹೆಚ್ಚಿರುವಾಗ ಸಾಹಿತ್ಯ, ಸಮಾಜ ಸೇವೆ, ಶಿಕ್ಷಣ, ಸಾಂಸ್ಕೃತಿಕ ರಂಗದಲ್ಲಿ ತಮ್ಮದೇ ಆದ ಕಾರ್ಯಗಳಲ್ಲಿ ಮನಃಪೂರ್ವಕವಾಗಿ ಸೇವೆ ಸಲ್ಲಿಸಿ ಆಯಾ ಕ್ಷೇತ್ರಗಳಲ್ಲಿ ಗಣನೀಯ ಬದಲಾವಣೆ ಮತ್ತು ಸಾಮಾಜಿಕ ಅರಿವುಂಟು ಮಾಡುವಲ್ಲಿ ಪ್ರಾಮಾಣಿಕ ಸೇವೆ ಮಾಡಿರುವ ಮಹನೀಯರನ್ನು ಫೌಂಡೇಶನ್ ವತಿಯಿಂದ ಸತ್ಕರಿಸುತ್ತಿರುವುದು ಒಂದು ಸೌಭಾಗ್ಯದ ಕೆಲಸ. ಅವರ ಈ ಕಾಯಕ ನಿರಂತರವಾಗಿ ಮುಂದುವರೆಯಲಿ ಎಂದು ಶುಭ ಹಾರೈಸಿದರು.ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ ನೀಡುವ ಸುವರ್ಣ ಕನ್ನಡಿಗ ಪ್ರಶಸ್ತಿ ಪುರಸ್ಕೃತ ಅಪ್ಪಸಾಹೇಬ ಅಲಿಬಾದಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ನಮ್ಮ ಕಾರ್ಯವನ್ನು ನೆನಪಿಸಿ ಸತ್ಕರಿಸುತ್ತಿರುವುದು ನಮ್ಮ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದರು.ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅಪ್ಪಾಸಾಹೇಬ ಅಲಿಬಾದಿ, ಭಾರತಿ ಅಲಿಬಾದಿ, ಮಹಾನಂದಾ ಪರುಶೆಟ್ಟಿ, ಶ್ರೀದೇವಿ ನರಗುಂದ, ಮೀನಾಕ್ಷಿ ಸೂಡಿ, ಸುಮಂಗಲಾ ದೊಡಮನಿ, ಹೇಮಾ ಬರಬರಿ, ಭಾರತಿ ತೋರಗಲರವರಿಗೆ ಅವರ ಸಾಧನೆ ಗುರುತಿಸಿ ಅನುಪಮ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಾಹಿತಿ ಹಮೀದಾ ಬೇಗಂ ದೇಸಾಯಿ ಜನಪದ ಜೀವನ ಶೈಲಿ ಕುರಿತು ವಿಶೇಷ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಫೌಂಡೇಶನ್ ಸದಸ್ಯರಿಂದ ಜನಪದ ನೃತ್ಯ, ಜನಪದ ಹಾಡು ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ಡಾ.ನೀಲಗಂಗಾ ಚರಂತಿಮಠ, ಮಹಾನಂದಾ ಪರುಶಟ್ಟಿ ಇಂದಿರಾ ಮೂಟೆಬೆನ್ನೂರ, ಸ.ರಾ.ಸುಳಕೂಡೆ, ಸುರೇಶ ಹಂಜಿ, ಆರ್.ಬಿ.ಬನಶಂಕರಿ, ಶಿವಾನಂದ ತಲ್ಲೂರ, ಎಸ್.ಬಿ.ನಾಗರಾಜ, ಮಹಾದೇವಿ ಹಿರೇಮಠ, ಶೈಲಜಾ ಹಿರೇಮಠ, ರಶ್ಮಿ ಪಾಟೀಲ ಸೇರಿದಂತೆ ಫೌಂಡೇಶನ್ ಸದಸ್ಯರು ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಶ್ರೀದೇವಿ ನರಗುಂದ ಸ್ವಾಗತಿಸಿದರು. ಹೇಮಾ ಬರಬರಿ ಪ್ರಾರ್ಥಿಸಿದರು. ಆಶಾ ಯಮಕನಮರಡಿ ನಿರೂಪಿಸಿದರು. ಭುವನೇಶ್ವರಿ ಪೂಜೇರಿ ವಂದಿಸಿದರು.