ಕನ್ನಡಪ್ರಭ ಮಡಿಕೇರಿ
ಕ್ರೀಡಾಕೂಟಗಳಿಂದ ಸಮಾಜದಲ್ಲಿ ಸೌಹಾರ್ದತೆಯ ಸಮಾಜ ಸೃಷ್ಟಿಸಲು ಸಾಧ್ಯ ಎಂದು ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಆಲ್ ಸ್ಟಾರ್ ಯೂತ್ ಕ್ಲಬ್ ಗೌರವಾಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಅಭಿಪ್ರಾಯಪಟ್ಟಿದ್ದಾರೆ.ಗೋಣಿಕೊಪ್ಪ ದುರ್ಗಬೋಜಿ ಸಭಾಂಗಣದಲ್ಲಿ ಆಲ್ ಸ್ಟಾರ್ ಯೂತ್ ಕ್ಲಬ್, ಕೊಡಗು ವರ್ಲ್ಡ್ ಕಪ್ ಫುಟ್ಬಾಲ್ ಪಂದ್ಯಾವಳಿಯ ಅಂಗವಾಗಿ ಆಲ್ ಸ್ಟಾರ್ ತಂಡದ ನೂತನ ಜೆರ್ಸಿ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಫುಟ್ಬಾಲ್ ಕ್ರೀಡೆಗೆ ಯಥೇಚ್ಛವಾಗಿ ಆಯೋಜನೆಗೊಳುತ್ತಿದೆ.ವಿಶೇಷವಾಗಿ ಗೋಣಿಕೊಪ್ಪಲಿನಲ್ಲಿ ಫುಟ್ಬಾಲ್, ಕ್ರಿಕೆಟ್ ಹಾಗೂ ಕಬಡ್ಡಿ ಪಂದ್ಯಾಟಗಳು ನಡೆಯುತ್ತಿದೆ. ಇದೀಗ ಜಿಲ್ಲೆಯ ಫುಟ್ಬಾಲ್ ಇತಿಹಾಸದಲ್ಲಿ ಎರಡು ಲಕ್ಷ ರು. ನಗದು ಬಹುಮಾನ ನೀಡಿ ಆಲ್ ಸ್ಟಾರ್ ಯೂತ್ ಕ್ಲಬ್ ಮೇ 1ರಿಂದ 4 ರವರೆಗೆ ಗೋಣಿಕೊಪ್ಪಲಿನ ಜಿ.ಎಂ.ಪಿ ಶಾಲಾ ಮೈದಾನದಲ್ಲಿ ಆಯೋಜಿಸಿದೆ ಎಂದರು.
ಕ್ರೀಡೆಗಳು ಎಲ್ಲಾ, ಜಾತಿ ಧರ್ಮಗಳನ್ನು ಒಂದುಗೂಡಿಸಿ ಒಂದೇ ವೇದಿಕೆಗೆ ಕರೆತರುತ್ತದೆ. ಇತ್ತೀಚಿನ ದಿನಗಳಲ್ಲಿ ಯುವಕರು ಮಾದಕ ವಸ್ತುಗಳಿಗೆ ಬಲಿಯಾಗುತ್ತಿದ್ದಾರೆ. ಅದಲ್ಲದೇ ಮೊಬೈಲ್ ಗೀಳಿಗೆ ದಾಸರಾಗಿದ್ದಾರೆ ಎಂದರು.ಆಲ್ ಸ್ಟಾರ್ ಯೂತ್ ಕ್ಲಬ್ ಇದರ ಸಲಹೆಗಾರ್ತಿ ಶೀಲಾ ಬೋಪಣ್ಣ ಮಾತನಾಡಿ ಆಲ್ ಸ್ಟಾರ್ ಯುವಕರ ತಂಡವು ಕ್ರೀಡಾಕೂಟದ ಮೂಲಕ ಸಮಾಜಕ್ಕೆ ಮಾರಕವಾಗಿರುವ ಮಾದಕ ವಸ್ತುಗಳ ವಿರುದ್ಧ ಜನಜಾಗೃತಿ ಮೂಡಿಸುತ್ತಿದೆ.
ಅದಲ್ಲದೇ ವಿಶೇಷವಾಗಿ ಕೊಡಗು ವರ್ಲ್ಡ್ ಕಪ್ ಫುಟ್ಬಾಲ್ ಪಂದ್ಯಾವಳಿ ಆಯೋಜಿಸಿ ಬಾಕಿ ಉಳಿದ ಸಂಪನ್ಮೂಲದಲ್ಲಿ ಜಿಲ್ಲೆಯ ಇಬ್ಬರು ಬಡಹೆಣ್ಣು ಮಕ್ಕಳ ವಿವಾಹವನ್ನು, ಆಲ್ ಸ್ಟಾರ್ ತಂಡವು ನಡೆಸಿಕೊಡಲು ತೀರ್ಮಾನಿಸಿದೆ. ಆದ್ದರಿಂದ ಕೊಡಗು ಜಿಲ್ಲೆಯ ದಾನಿಗಳು ಕೊಡಗು ವರ್ಲ್ಡ್ ಕಪ್ ಫುಟ್ಬಾಲ್ ಪಂದ್ಯಾವಳಿಗೆ ಕೈ ಜೋಡಿಸಬೇಕೆಂದು ಮನವಿ ಮಾಡಿದರು.ಕಾರ್ಯಕ್ರಮಕ್ಕೆ ಕೊಡಗು ಜಿಲ್ಲೆಯ ಪ್ರತಿಷ್ಠಿತ ಫುಟ್ಬಾಲ್ ಗಳನ್ನು ಆಹ್ವಾನಿಸಲಾಗಿತ್ತು.
ಆಲ್ ಸ್ಟಾರ್ ಯೂತ್ ಕ್ಲಬ್ ಅಧ್ಯಕ್ಷ ಸುಧಾಕರ್ ರೈ(ಚುಮ್ಮಿ ರೈ) ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಲೋಕೇಶ್ ಕಾರ್ಯಪ್ಪ, ದುರ್ಗ ಬೋಜಿ ಮಾಲೀಕ ಕಿಲನ್ ಗಣಪತಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮಂಜುಳಾ ಮತ್ತಿತರರು ಭಾಗವಹಿಸಿದ್ದರು.
ರಫೀಜ್ ಮೂಡಬಿದಿರೆ ನಿರೂಪಿಸಿದರು. ಆಲ್ ಸ್ಟಾರ್ ಸ್ಟಾರ್ ಸದಸ್ಯೆ ಮೋನಿಕಾ ಸ್ವಾಗತಿಸಿ,ರಂಸೀನಾ ವಂದಿಸಿದರು.