ದಾಂಡೇಲಿ: ರಾಷ್ಟ್ರದ ಸಮರ್ಗ ಅಭಿವೃದ್ಧಿಗೆ ಆರೋಗ್ಯವಂತ ಸಮಾಜ ಅತೀ ಅಗತ್ಯವಾಗಿ ಬೇಕು. ಆರೋಗ್ಯವಂತ ಸಮಾಜದಿಂದ ಮಾತ್ರ ರಾಷ್ಟ್ರದ ಪ್ರಗತಿ ಸುಲಭ ಸಾಧ್ಯ ಎಂದು ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಕಾರ್ಯನಿವಾಹಕ ನಿದೇರ್ಶಕ ರಾಜೇಂದ್ರ ಜೈನ ಹೇಳಿದರು.
ಭಾನುವಾರ ವೆಸ್ಟ್ ಕೊಸ್ಟ್ ಕಾಗದ ಕಾರ್ಖಾನೆಯ ಮತ್ತು ಹುಬ್ಬಳ್ಳಿಯ ಜಯಪ್ರಿಯಾ ಮೆಡಿಕಲ್ ಫೌಂಡೇಶನ್ ಆಶ್ರಯದಡಿ ಕಾಗದ ಕಾರ್ಖಾನೆಯ ಆವರಣದಲ್ಲಿರುವ ಔದ್ಯೋಗಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಕಣ್ಣು, ಕಿವಿ, ಮೂಗು, ಗಂಟಲು ಉಚಿತ ತಪಾಸಣೆ, ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.ನಾವೆಲ್ಲರೂ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ನಮ್ಮೆಲ್ಲ ಸಾಧನೆಗಳಿಗೂ ಸದೃಢ ಆರೋಗ್ಯವೇ ಮೂಲ ಕಾರಣ. ಆರೋಗ್ಯ ಸುರಕ್ಷಾ ನೇಮಗಳನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿ ಈ ಶಿಬಿರದ ಪ್ರಯೋಜನವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.ಮುಖ್ಯ ಅತಿಥಿಗಳಾಗಿ ಕಾಗದ ಕಾರ್ಖಾನೆಯ ತಾಂತ್ರಿಕ ವಿಭಾಗದ ಅಧ್ಯಕ್ಷ ಅನುಜ ದಯಾಲ, ಕಾರ್ಖಾನೆಯ ಹಣಕಾಸು ವಿಭಾಗದ ಉಪಾಧ್ಯಕ್ಷ ಅಶೋಕ ಶರ್ಮಾ, ಕಾರ್ಖಾನೆಯ ನಿವರ್ಹಣಾ ವಿಭಾಗದ ಉಪಾಧ್ಯಕ್ಷ ಭೂಪೇಂದ್ರ ಕುಮಾರ ಅವರು ಭಾಗವಹಿಸಿ ಶಿಬಿರಕ್ಕೆ ಶುಭಕೋರಿದರು.
ಜಯಪ್ರಿಯಾ ಮೆಡಿಕಲ್ ಫೌಂಡೇಶನ್‌ನ ಡಾ. ವೆಂಕಟರಾಮ ಕಟ್ಟಿ ಅವರು ಶಿಬಿರದ ಉದ್ದೇಶ ಮತ್ತು ಅಗತ್ಯತೆ ಕುರಿತು ವಿವರಿಸಿದರು.ಈ ಸಂದರ್ಭದಲ್ಲಿ ಡಾ. ಭಂಡಾರಿ, ಔದ್ಯೋಗಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಜ್ಞಾನದೀಪ ಗಾಂವಕರ, ವೈದ್ಯರಾದ ಡಾ. ಸುಮಿತ ಅಗ್ನಿಹೋತ್ರಿ, ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ ತಿವಾರಿ, ಖಲೀಲ್ ಕುಲಕರ್ಣಿ, ಪ್ರಸಾದ, ರಾಜು ರೋಸಯ್ಯ, ಬಸೀರ ಶೇಖ್, ಚೇತನ ಶರ್ಮಾ, ಶಿವಲೀಲಾ, ರಾಜು ಮೊದಲಾದವರು ಉಪಸ್ಥಿತರಿದ್ದರು.
ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ ತಿವಾರಿ ನಿರೂಪಿಸಿದರು.