ಮಹಾವೀರರ ಪಂಚಶೀಲ ತತ್ವ ಪಾಲನೆಯಿಂದ ಸ್ವಸ್ಥ ಸಮಾಜ: ಸುರೇಶ ಅಗಡಿ

KannadaprabhaNewsNetwork | Published : Apr 11, 2025 12:35 AM

ಸಾರಾಂಶ

ದಾಂಡೇಲಿ ನಗರದ ಅಂಬೇವಾಡಿಯಲ್ಲಿರುವ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ತಾಲೂಕಾಡಳಿತ ಮತ್ತು ದಾಂಡೇಲಿ ಜೈನ ಸಮಾಜ ಸೇವಾ ಟ್ರಸ್ಟ್ ಆಶ್ರಯದಡಿ ಭಗವಾನ್ ಶ್ರೀ ಮಹಾವೀರ ಜಯಂತಿಯನ್ನು ಗುರುವಾರ ಆಚರಿಸಲಾಯಿತು.

ದಾಂಡೇಲಿ: ನಗರದ ಅಂಬೇವಾಡಿಯಲ್ಲಿರುವ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ತಾಲೂಕಾಡಳಿತ ಮತ್ತು ದಾಂಡೇಲಿ ಜೈನ ಸಮಾಜ ಸೇವಾ ಟ್ರಸ್ಟ್ ಆಶ್ರಯದಡಿ ಭಗವಾನ್ ಶ್ರೀ ಮಹಾವೀರ ಜಯಂತಿಯನ್ನು ಗುರುವಾರ ಆಚರಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ಭಗವಾನ್ ಶ್ರೀ ಮಹಾವೀರದ ಭಾವಚಿತ್ರಕ್ಕೆ ಆರತಿ ಬೆಳಗಿ ಪುಷ್ಪ ಗೌರವ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಿರಸ್ತೇದಾರ್‌ ಸುರೇಶ ಅಗಡಿ, ದಾಂಡೇಲಿ ಜೈನ ಸಮಾಜ ಸೇವಾ ಟ್ರಸ್ಟಿನ ಅಧ್ಯಕ್ಷ ಸಂದೇಶ್ ಎಸ್. ಜೈನ, ಪ್ರಧಾನ ಕಾರ್ಯದರ್ಶಿ ಮಹಾವೀರ ನೆರ್ಲೇಕರ ಅವರು ಭಗವಾನ್‌ ಮಹಾವೀರರು ಅಹಿಂಸೆಯ ಪ್ರತಿಪಾದಕರಾಗಿದ್ದು, ವಿಶ್ವದಲ್ಲಿ ಶಾಂತಿ ಮತ್ತು ಅಹಿಂಸೆಯನ್ನು ಬಯಸಿ ತ್ಯಾಗ ಮತ್ತು ತಪಸ್ಸು ಮಾಡಿದವರು. ಮಹಾವೀರರು ಬೋಧಿಸಿದ ಪಂಚಶೀಲ ತತ್ವಗಳಾದ ಸತ್ಯ, ಅಹಿಂಸೆ, ಅಪರಿಗ್ರಹ, ಕ್ಷಮೆ ಮತ್ತು ಬ್ರಹ್ಮಚರ್ಯವನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಸ್ವಾಸ್ಥ್ಯ ಸಮಾಜ ನಿರ್ಮಾಣ ಸುಲಭ ಸಾಧ್ಯ ಎಂದರು.

ತಾಲೂಕಾಡಳಿತದ ಪರವಾಗಿ ಜೈನ ಸಮಾಜದ ಹಿರಿಯರಾದ ಮಹಾವೀರ ಬಂಡಿ ಮತ್ತು ಎಸ್.ಕೆ. ಬನ್ಸಾಲಿ ಅವರನ್ನು ಸನ್ಮಾನಿಸಲಾಯಿತು. ವಿದ್ಯಾಸಾಗರ ಮುನಿ ಮಹಾರಾಜರ ಪ್ರೀತಿಗೆ ಪಾತ್ರರಾಗಿದ್ದ ಮತ್ತು ಛತ್ತಿಸಘಡದ ಡೊಂಗರಘಡದಲ್ಲಿ ವಿದ್ಯಾಸಾಗರ ಮುನಿ ಮಹಾರಾಜರ ಕಲ್ಪನೆಯ ಬಸದಿ ನಿರ್ಮಾಣದ ಮರದ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ದಾಂಡೇಲಿಯ ಉದ್ಯಮಿ ಪ್ರೇಮಾನಂದ ಗವಸ ಅವರನ್ನು ದಾಂಡೇಲಿ ಜೈನ ಸಮಾಜ ಸೇವಾ ಟ್ರಸ್ಟ್ ವತಿಯಿಂದ ಗೌರವಿಸಲಾಯಿತು.

ಆಹಾರ ನಿರೀಕ್ಷಕ ಗೋಪಿ ಚವ್ಹಾಣ, ಕಂದಾಯ ನಿರೀಕ್ಷಕ ರಾಘವೇಂದ್ರ ಪಾಟೀಲ್, ತಹಸೀಲ್ದಾರ್ ಕಾರ್ಯಾಲಯದ ಮುಕುಂದ ಬಸವಮೂರ್ತಿ, ದಾಂಡೇಲಿ ಜೈನ ಸಮಾಜ ಸೇವಾ ಟ್ರಸ್ಟಿನ ಕಾರ್ಯಾಧ್ಯಕ್ಷ ನಾಗೇಂದ್ರನಾಥ ಉಪಸ್ಥಿತರಿದ್ದರು.

ಪ್ರಕಾಶ ಜೈನ ಮತ್ತು ಪದ್ಮಾವತಿ ಘಾಳಿ ಪ್ರಾರ್ಥನೆ ಗೀತೆ ಹಾಡಿದರು. ಪದ್ಮಾವತಿ ಘಾಳಿ ಕಾರ್ಯಕ್ರಮ ನಿರೂಪಿಸಿದರು. ತಹಸೀಲ್ದಾರ್‌ ಕಾರ್ಯಾಲಯದ ಸರಸ್ವತಿ ನಾಯ್ಕ ಸ್ವಾಗತಿಸಿದರು. ಅಜಿತ್ ಕರಡೆನ್ನವರ‌ ಮತ್ತು ಅಭಯ ಸದಲಗಿ ವಂದಿಸಿದರು. ಆನಂತರ ಜೈನ ಸಮಾಜ ಬಾಂಧವರಿಂದ ಜಿನ ಭಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

Share this article