ಗದಗ: ಉತ್ತಮ ಪರಿಸರ ನಿರ್ಮಾಣದಿಂದ ಆರೋಗ್ಯವಂತ ಸಮಾಜ ನಿರ್ಮಾಣವಾಗುತ್ತದೆ. ಆದ್ದರಿಂದ ಗ್ರಾಮಸ್ಥರು ತಮ್ಮ ಮನೆಯ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಿಕೊಂಡು ಪ್ರತಿಯೊಬ್ಬರೂ ಹಸಿರು ಪರಿಸರವನ್ನು ನಿರ್ಮಿಸುವಲ್ಲಿ ಮುಂದಾಗಬೇಕೆಂದು ಜಿಲ್ಲಾ ನೌಕರರ ಸಂಘದ ಮಾಜಿ ಅಧ್ಯಕ್ಷ ರವಿ ಎಲ್. ಗುಂಜೀಕರ್ ಹೇಳಿದರು. ತಾಲೂಕಿನ ಲಕ್ಕುಂಡಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಸ್ವಚ್ಛ ಭಾರತ ಮಿಷನ್(ಗ್ರಾಮೀಣ) ಯೋಜನೆಯ ಸಹಯೋಗದಿಂದ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸಂಚಾಲಕಿ ಬಿ.ಕೆ. ಸರೋಜಕ್ಕ ಮಾತನಾಡಿ, ಪರಮಾತ್ಮನ ಜ್ಞಾನವನ್ನು ಅಳವಡಿಸಿಕೊಳ್ಳುವುದರ ಮೂಲಕ ಪರಿಸರದ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿರುತ್ತದೆ. ಎಲ್ಲಿ ಪರಿಸರ ಧನಾತ್ಮಕವಾಗಿ ಕೂಡಿರುತ್ತದೆಯೂ ಅಲ್ಲಿ ಪರಮಾತ್ಮ ನೆಲೆಸಿರುತ್ತಾನೆ ಎಂದರು.
ಜಿಲ್ಲಾ ಎಸ್.ಸಿ, ಎಸ್ಟಿ ದೌರ್ಜನ್ಯ ನಿಯಂತ್ರಣ ಸಮಿತಿಯ ಸದಸ್ಯ ಬಸವರಾಜ ಮುಳ್ಳಾಳ, ಭಾರತೀಯ ಕಿಸಾನ ಸಂಘದ ತಾಲೂಕು ಘಟಕದ ಅಧ್ಯಕ್ಷ ವೆಂಕಟೇಶ ದೊಂಗಡೆ, ಗ್ರಾಪಂ ಮಟ್ಟದ ಮಹಿಳಾ ಸಂಜೀವಿನ ಒಕ್ಕೂಟದ ಅಧ್ಯಕ್ಷೆ ಕಸ್ತೂರೆವ್ವ ಗುಂಜಳ, ಚಂದ್ರಕಲಾ ಮಾಡಲಗೇರಿ, ಶೈಲಾ ಅಂಬಕ್ಕಿ ಹಾಗೂ ಆಶಾ, ಅಂಗನವಾಡಿ, ಗ್ರಾಪಂ ಸಿಬ್ಬಂದಿ ಇದ್ದರು. ಪಿಡಿಒ ಅಮೀರನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಪಂ ಕಾರ್ಯದರ್ಶಿ ಪ್ರದೀಪ ಆಲೂರ ಸ್ವಾಗತಿಸಿದರು. ಎಂ.ಎ.ಗಾಜಿ ವಂದಿಸಿದರು.