ಕನ್ನಡಪ್ರಭ ವಾರ್ತೆ ಬೇಲೂರುಇತ್ತೀಚೆಗೆ ನಿಧನರಾದ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪನವರ ನಿಧನಕ್ಕೆ ತಾಲೂಕಿನ ವೀರಶೈವ ಸಮಾಜದ ವತಿಯಿಂದ ಸಂತಾಪ ಸೂಚಿಸಿ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಶ್ರದ್ಧಾಂಜಲಿ ಸಭೆಯು ಪಟ್ಟಣದ ಶ್ರೀ ಬಸವೇಶ್ವರ ವೃತ್ತದ ಬಳಿ ನಡೆಯಿತು. ಈ ಕಾರ್ಯಕ್ರಮವು ಶ್ರೀ ಪುಷ್ಪಗಿರಿ ಮಹಾ ಸಂಸ್ಥಾನ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ನೆರವೇರಿತು. ಈ ವೇಳೆ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿಗಳು ಮಾತನಾಡಿ, ಶಾಮನೂರು ಶಿವಶಂಕರಪ್ಪನವರು ಕೇವಲ ಒಬ್ಬ ರಾಜಕಾರಣಿಯಾಗಿರಲಿಲ್ಲ, ಅವರು ಸಮಾಜದ ವಿವಿಧ ಕ್ಷೇತ್ರಗಳಿಗೆ ಅದರಲ್ಲೂ ಶಿಕ್ಷಣ ಮತ್ತು ಧಾರ್ಮಿಕ ಚಟುವಟಿಕೆಗಳಿಗೆ ನೀಡಿದ ಕೊಡುಗೆ ಅಪಾರ. ಅವರಂತಹ ಹಿರಿಯ ಚೇತನದ ನಿಧನದಿಂದ ವೀರಶೈವ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಸಮಾಜ ಅವರನ್ನು ಸದಾ ಸ್ಮರಿಸುತ್ತದೆ ಎಂದು ತಿಳಿಸಿ, ದಿವಂಗತರ ಆತ್ಮಕ್ಕೆ ಶಾಂತಿ ಕೋರಿದರು.ಬೇಲೂರು ತಾಲೂಕು ವೀರಶೈವ ಸಮಾಜದ ಅಧ್ಯಕ್ಷರಾದ ಮತ್ತು ಇತರ ಪದಾಧಿಕಾರಿಗಳು ಹಾಗೂ ಸದಸ್ಯರು ಈ ಸಂದರ್ಭದಲ್ಲಿ ದಿವಂಗತ ಶಾಮನೂರು ಶಿವಶಂಕರಪ್ಪನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು. ನೆರೆದಿದ್ದ ಎಲ್ಲರೂ ಮೌನ ಆಚರಿಸುವ ಮೂಲಕ ಸಂತಾಪ ಸೂಚಿಸಿದರು.ಕಾರ್ಯಕ್ರಮದಲ್ಲಿ ಬೇಲೂರು ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಎ ಎಸ್ ಬಸವರಾಜು, ಪುರಸಭೆ ಮಾಜಿ ಅಧ್ಯಕ್ಷ ಎಚ್ ಎಮ್ ದಯಾನಂದ್, ಬಲ್ಲೇನಹಳ್ಳಿ ರವಿಕುಮಾರ್, ರಾಜೇಗೌಡ, ಲಿಂಗರಾಜು, ಯೋಗೇಶ್ ಬೆಣ್ಣೂರು, ಮದನ್ ಬಳ್ಳೂರು, ಕೊರಟಿಗೆರೆ ರಾಜಣ್ಣ, ಆರಾಧ್ಯ,ಬೆಣ್ಣೂರು ರೇಣುಕುಮಾರ್, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಬಿ ಬಿ ಶಿವರಾಜ್, ಪದಾಧಿಕಾರಿಗಳು, ಮುಖಂಡರು, ಸದಸ್ಯರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.