ಮದ್ಯದಂಗಡಿ ಬಾಗಿಲು ತೆರೆದಿದ್ದರೂ, ಕಪಾಟಿನಲ್ಲಿರುವ ಬಾಟಲಿಗಳು ಕಾಣಿಸದ ಕಾರಣ ಮದ್ಯಪ್ರಿಯರು ‘ಕಿಕ್’ ಬದಲು ನಿರಾಸೆಯೊಂದಿಗೆ ಮನೆಗೆ ಮರಳುವಂತಾಗಿದೆ.
ರಾಘು ಕಾಕರಮಠ
ಅಂಕೋಲಾ: ಭಟ್ಕಳದಲ್ಲಿ ಇತ್ತೀಚೆಗೆ ಗಣೇಶೋತ್ಸವ ವೇಳೆ ನಡೆದ ಕಲ್ಲು ತೂರಾಟದ ಬಿಸಿ ಕರಾವಳಿಯ ಮದ್ಯದಂಗಡಿಗಳಿಗೂ ತಟ್ಟಿದೆ. ಕಾರಣ, ಕರಾವಳಿ ಭಾಗದ ತಾಲೂಕುಗಳಿಗೆ ಸಾರಾಯಿ ಮಳಿಗೆಗಳಿಗೆ ಮದ್ಯದ ಸರಬರಾಜು ಆಗದೆ, ‘ಕಿಕ್’ಗಾಗಿ ಅಂಗಡಿಗೆ ಬಂದ ಮದ್ಯಪ್ರಿಯರು ಖಾಲಿ ಕೈಯಲ್ಲಿ ಮರಳುವಂತಾಗಿದೆ.ಗಣೇಶೋತ್ಸವದ ಹಿನ್ನೆಲೆ ಮೂರು ದಿನ ಮದ್ಯದಂಗಡಿಗಳು ಬಂದ್ ಆಗಿದ್ದವು. ಹೀಗಾಗಿ ಮದ್ಯಪ್ರಿಯರು ಮೂರು ದಿನಗಳ ಕಾಲ ‘ಡ್ರೈ ಡೇ’ ಅನುಭವಿಸಿದ್ದರು. ಸೋಮವಾರ ಅಂಗಡಿಗಳು ತೆರೆದ ಬಳಿಕವಾದರೂ ತಮ್ಮ ನೆಚ್ಚಿನ ಬಾಟಲಿ ಸಿಗಬಹುದು ಎಂದು ಖುಷಿಯಿಂದ ಬಂದವರಿಗೆ ಮತ್ತೊಂದು ಶಾಕ್ ಕಾದಿತ್ತು. ಅಂಗಡಿ ತೆರೆದಿತ್ತು, ಆದರೆ ದಾಸ್ತಾನು ಇರಲಿಲ್ಲ.ಭಟ್ಕಳದಲ್ಲಿ ನಡೆದ ಕಲ್ಲು ತೂರಾಟದ ಘಟನೆಯ ಹಿನ್ನೆಲೆ ಹೊನ್ನಾವರದಲ್ಲಿ ಇರುವ ಮದ್ಯದ ದಾಸ್ತಾನು ಗೋದಾಮಿನಿಂದ ಮದ್ಯ ಸರಬರಾಜು ಸ್ಥಗಿತಗೊಂಡಿದೆ ಎನ್ನಲಾಗುತ್ತಿದೆ. ಇದರ ಪರಿಣಾಮ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾರ ಹಾಗೂ ಭಟ್ಕಳದ ಒಟ್ಟು 77 ಸಾರಾಯಿ ಸನ್ನದು ಅಂಗಡಿಗಳ ಮದ್ಯದ ಲಭ್ಯತೆ ಮೇಲೆ ಪರಿಣಾಮ ಬೀರಿದೆ ಎಂದು ತಿಳಿದುಬಂದಿದೆ.
ಘಟನೆ ನಡೆದಿರುವ ಭಟ್ಕಳದಲ್ಲಿ ಮದ್ಯ ಮಾರಾಟಕ್ಕೆ ನಿರ್ಬಂಧ ಹೇರಿದರೆ ಅರ್ಥವಿದೆ. ಆದರೆ ಅದರ ಪರಿಣಾಮ ಕರಾವಳಿಯ ಇತರೆ ತಾಲೂಕುಗಳಿಗೂ ಯಾಕೆ?’ ಎಂದು ಮದ್ಯಪ್ರಿಯರು ಪ್ರಶ್ನಿಸುತ್ತಿದ್ದಾರೆ. ಇನ್ನೊಂದೆಡೆ ಮದ್ಯ ಮಾರಾಟಗಾರರೂ ಸರಬರಾಜು ಸ್ಥಗಿತದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರ ಮದ್ಯ ಮಾರಾಟಕ್ಕೆ ಗುರಿ ನಿಗದಿಪಡಿಸಿ, ಅದನ್ನು ಸಾಧಿಸುವಂತೆ ಒತ್ತಡ ಹೇರುತ್ತದೆ. ಆದರೆ ಮತ್ತೊಂದೆಡೆ ಅಂಗಡಿಗಳಿಗೆ ಬೇಕಾದಷ್ಟು ಮದ್ಯವನ್ನೇ ಸರಬರಾಜು ಮಾಡದಿದ್ದರೆ ಗುರಿ ತಲುಪುವುದಾದರೂ ಹೇಗೆ ಎಂಬುದು ಅವರ ಪ್ರಶ್ನೆಯಾಗಿದೆ.
ಮದ್ಯದಂಗಡಿ ಬಾಗಿಲು ತೆರೆದಿದ್ದರೂ, ಕಪಾಟಿನಲ್ಲಿರುವ ಬಾಟಲಿಗಳು ಕಾಣಿಸದ ಕಾರಣ ಮದ್ಯಪ್ರಿಯರು ‘ಕಿಕ್’ ಬದಲು ನಿರಾಸೆಯೊಂದಿಗೆ ಮನೆಗೆ ಮರಳುವಂತಾಗಿದೆ.
ಅಕ್ರಮ ಮಾರಾಟಕ್ಕೆ ಅಸ್ಪದ: ಅಬಕಾರಿ ಇಲಾಖೆಯ ನಿರ್ಲಕ್ಷ್ಯದ ಪರಿಣಾಮ ಮದ್ಯ ಸರಬರಾಜು ಸ್ಥಗಿತಗೊಂಡಿದೆ. ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ವಸ್ತುಸ್ಥಿತಿಯ ಮಾಹಿತಿ ನೀಡಬೇಕಾದ ಜವಾಬ್ದಾರಿ ಅಬಕಾರಿ ಇಲಾಖೆಯದಾಗಿತ್ತು. ಆದರೆ ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದಂತೆ, ಭಟ್ಕಳದಲ್ಲಿ ಆದ ಘಟನೆಗೆ ಕರಾವಳಿಯ ಇತರೆ ತಾಲೂಕಿನ ಪರಿಣಾಮ ಹೇರಿರುವುದು ಸರಿಯಲ್ಲ. ಮದ್ಯದ ಸರಬರಾಜು ಸ್ಥಗಿತಗೊಂಡಿದ್ದರಿಂದ ಗೋವಾದ ಅಕ್ರಮ ಸಾರಾಯಿ ಮಾರಾಟಕ್ಕೆ ಸರ್ಕಾರವೆ ಆಸ್ಪದ ಮಾಡಿ ಕೊಟ್ಟಂತಾಗಿದೆ ಎಂದು ಬಾರ್ ಆ್ಯಂಡ್ ವೈನ್ಸ್ ಅಸೋಷಿಯೇಶನ್ ಜಿಲ್ಲಾಧ್ಯಕ್ಷ ನಾಗರಾಜ್ ಹಿತ್ತಲಮಕ್ಕಿ ತಿಳಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.