ರವಿ ಕಾಂಬಳೆ
ಕನ್ನಡಪ್ರಭ ವಾರ್ತೆ ಹುಕ್ಕೇರಿಗ್ರಾಮೀಣ ಗ್ರಂಥಾಲಯಗಳ ಉನ್ನತೀಕರಣದ ಭಾಗವಾಗಿ ಓದುಗ ಸ್ನೇಹಿ ಡಿಜಿಟಲ್ ಲೈಬ್ರರಿ ರೂಪಿಸಲು ವಿಶೇಷ ಯೋಜನೆ ಸಿದ್ಧಪಡಿಸಲಾಗಿದೆ. ಗ್ರಾಮೀಣ ಗ್ರಂಥಾಲಯಗಳನ್ನು ಪುನರುಜ್ಜೀವನಗೊಳಿಸಲು ಸರ್ಕಾರ ಇದೀಗ ಮುಂದಾಗಿದ್ದು, ಹಳೆ ಕಟ್ಟಡಗಳಿಗೆ ಮುಕ್ತಿ ನೀಡುವ ಉದ್ದೇಶ ಹೊಂದಿದೆ.
ಹುಕ್ಕೇರಿ ತಾಲೂಕಿನ ಯಮಕನಮರಡಿಯಲ್ಲಿ ಡಿಜಿಟಲ್ ಲೈಬ್ರರಿ ರೂಪಿಸಲು ವಿಶೇಷ ಯೋಜನೆ ರೂಪಿಸಲಾಗಿದ್ದು, ಇಲ್ಲಿನ ಗ್ರಂಥಾಲಯಕ್ಕೆ ಮರುಜೀವ ಪಡೆಯುವ ಸುಯೋಗ ಒದಗಿ ಬಂದಿದೆ. ಯಮಕನಮರಡಿಯಲ್ಲಿ ಗ್ರಂಥಾಲಯಕ್ಕೆ ಹೊಸ ಕಟ್ಟಡ ನಿರ್ಮಿಸುವುದರೊಂದಿಗೆ ಡಿಜಿಟಲ್ ಸ್ಪರ್ಶ ನೀಡಿ ಹೈಟೆಕ್ ಲೈಬ್ರರಿಯನ್ನಾಗಿ ರೂಪಿಸಲು ನೀಲನಕ್ಷೆ ಅಣಿಗೊಂಡಿದೆ.2023-24ನೇ ಸಾಲಿನ ಲೋಕೋಪಯೋಗಿ ಇಲಾಖೆಯ 4059-ಇಲಾಖಾ ಕಟ್ಟಡ ಲೆಕ್ಕ ಶೀರ್ಷಿಕೆಯಡಿ ಯಮಕನಮರಡಿಯಲ್ಲಿ ಹೈಟೆಕ್ ಗ್ರಂಥಾಲಯ ಕಟ್ಟಡ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಇದಕ್ಕಾಗಿ ₹1.50 ಕೋಟಿ ಕಾಯ್ದಿರಿಸಲಾಗಿದೆ. ಇದರೊಂದಿಗೆ ನಗರ ಪ್ರದೇಶದಂತೆ ಗ್ರಾಮೀಣ ಗ್ರಂಥಾಲಯಗಳನ್ನೂ ಸದೃಢಗೊಳಿಸುವ ಕಾರ್ಯ ಸಾಗಿದೆ. ಈ ದಿಸೆಯಲ್ಲಿ ಓದುಗರ ಅಭಿರುಚಿಗೆ ತಕ್ಕಂತೆ ವಿವಿಧ ವಿಭಾಗಗಳನ್ನು ಸೃಷ್ಟಿಸಲು ರೂಪುರೇಷೆ ಸಿದ್ಧಪಡಿಸಲಾಗಿದೆ.
ವಿಶಾಲವಾದ ಪ್ರದೇಶದಲ್ಲಿ ಗ್ರಂಥಾಲಯದ ಹೊಸ ಕಟ್ಟಡ ನಿರ್ಮಾಣ ಕಾಮಗಾರಿಗೆ ವೇಗ ನೀಡಲಾಗಿದೆ. ವಿಧಾನಸಭೆ ಕ್ಷೇತ್ರ ಸ್ಥಾನಮಾನ ಹೊಂದಿರುವ ಕೇಂದ್ರ ಸ್ಥಾನದಲ್ಲಿಯೇ ಹೈಟೆಕ್ ಗ್ರಂಥಾಲಯ ನಿರ್ಮಿಸಲಾಗುತ್ತಿದೆ. ಈ ಮೂಲಕ ತಾಲೂಕಿನಲ್ಲಿಯೇ ಮೊಟ್ಟಮೊದಲ ಡಿಜಿಟಲ್ ಗ್ರಂಥಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.ಇನ್ನು ಓದುಗ ಸ್ನೇಹಿ ಡಿಜಿಟಲ್ ಲೈಬ್ರರಿ ರೂಪಿಸಲು ಕ್ಷೇತ್ರದ ಶಾಸಕರೂ ಆಗಿರುವ ಲೋಕೋಪಯೋಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ವಿಶೇಷ ಆಸಕ್ತಿ ತೋರಿಸಿದ್ದಾರೆ. ಆಗಾಗ ವಿಭಿನ್ನ ಮತ್ತು ವಿಶಿಷ್ಟ ಕಾರ್ಯಶೈಲಿ, ವೈಚಾರಿಕ ಚಿಂತನೆಗಳಿಂದ ರಾಜ್ಯದ ಗಮನ ಸೆಳೆಯುವ ಸತೀಶ ಜಾರಕಿಹೊಳಿ, ಕ್ಷೇತ್ರದ ಜನತೆಯ ಜ್ಞಾನದ ಹಸಿವು ನೀಗಿಸಲು ಈ ಹೈಟೆಕ್ ಲೈಬ್ರರಿ ನಿರ್ಮಾಣಕ್ಕೆ ಪಣ ತೊಟ್ಟಿದ್ದಾರೆ.
ಈ ಹೊಸ ಕಟ್ಟಡದಲ್ಲಿ ನೆಲಮಹಡಿ, ಮೊದಲ ಮಹಡಿ ಇರಲಿದೆ. ರೀಡಿಂಗ್ ರೂಮ್, ಸಾಮಾನ್ಯ ಕೊಠಡಿ, ಕಂಪ್ಯೂಟರ್ ಕೊಠಡಿ, ಶೌಚಾಲಯ, ಸ್ಟೋರ್ ರೂಮ್, ಸುದ್ದಿಪತ್ರಿಕೆಗಳ ವಿಭಾಗ, ದಾಖಲೆಗಳ ಕೊಠಡಿ, ಸರ್ವರ್ ರೂಮ್, ಚಿಕ್ಕ ಮಕ್ಕಳ ವಿಭಾಗ, ಕಚೇರಿ ಸೇರಿದಂತೆ ಮತ್ತಿತರ ವಿಭಾಗಗಳನ್ನು ಸೃಷ್ಟಿಸಲಾಗುತ್ತಿದೆ.ಅತ್ಯಾಧುನಿಕ ಸೌಲಭ್ಯ:ಅತ್ಯಾಧುನಿಕ ಸೌಲಭ್ಯವುಳ್ಳ ಈ ಜ್ಞಾನಾರ್ಜನೆ ಕೇಂದ್ರಕ್ಕೆ ಅಂತರ್ಜಾಲ ವ್ಯವಸ್ಥೆ, ಆಧುನಿಕ ಸೌಲಭ್ಯ ಕಲ್ಪಿಸಲು ಉದ್ದೇಶಿಸಲಾಗಿದೆ. ತನ್ಮೂಲಕ ಗ್ರಾಮೀಣ ಭಾಗದ ಆಸಕ್ತರಿಗೆ ಜ್ಞಾನದ ಹಸಿವು ನೀಗಿಸಲು ಮತ್ತು ಓದುಗರನ್ನು ತನ್ನತ್ತ ಸೆಳೆಯಲು ಹೊಸ ಹೊಸ ಯೋಜನೆ ರೂಪಿಸಲಾಗಿದೆ. ಕೆಎಎಸ್, ಐಎಎಸ್, ಐಪಿಎಸ್, ಎಸ್‌ಡಿಎ, ಎಫ್‌ಡಿಎ ಸೇರಿದಂತೆ ಸ್ಪರ್ಧಾತ್ಮಕ ಪುಸ್ತಕಗಳು ಪರೀಕ್ಷೆಗಳು ತಯಾರಿ ಮಾಡಿಕೊಳ್ಳುವವರಿಗೆ ಈ ಲೈಬ್ರರಿ ವರದಾನವಾಗಲಿದೆ.
ಕಥೆ, ಕಾದಂಬರಿ, ದೈನಂದಿನ, ವಾರ, ಮಾಸಿಕ ಪತ್ರಿಕೆಗಳ ವಿಭಾಗ, ಪ್ರತಿನಿತ್ಯ ಜನರು ಓದುವ ಹವ್ಯಾಸ ಬೆಳೆಸುವ ಉದ್ದೇಶದಿಂದ ಹೊಸ ಕಟ್ಟಡ ನಿರ್ಮಿಸಲಾಗುತ್ತಿದೆ. ಚರಿತ್ರೆ, ಸಾಮಾಜಿಕ, ಪತ್ತೇದಾರಿ ಕಥೆ, ಕಾದಂಬರಿಗಳು, ಸೇರಿದಂತೆ ಸಾವಿರಾರು ಪುಸ್ತಕಗಳು ಓದುಗರಿಗೆ ಸಿಗಲಿವೆ. ಓದುಗರನ್ನು ಆಕರ್ಷಿಸಲು ಅತ್ಯಾಕರ್ಷಕ ಬರಹ, ಚಿತ್ರಗಳನ್ನು ಬಿಡಿಸುವ ಉದ್ದೇಶ ಹೊಂದಲಾಗಿದೆ.ಗ್ರಾಮೀಣ ಗ್ರಂಥಾಲಯಗಳು ಓದುಗರಿಗೆ, ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಹೆಚ್ಚು ಸಹಕಾರಿಯಾಗಿವೆ. ಡಿಜಿಟಲ್ ಲೈಬ್ರರಿಯಿಂದ ಜನರಿಗೆ ಓದಲು ಮತ್ತಷ್ಟು ಅನುಕೂಲವಾಗಲಿದೆ.- ಸತೀಶ ಜಾರಕಿಹೊಳಿ, ಸಚಿವಗ್ರಾಮೀಣ ಪ್ರದೇಶದಲ್ಲಿ ಗ್ರಂಥಾಲಯಗಳ ಬಳಕೆಯಿಂದ ಜನ ದೂರ ಸರಿಯುತ್ತಿರುವ ಈ ಹೊತ್ತಿನಲ್ಲಿ ಯಮಕನಮರಡಿಯಲ್ಲಿ ಡಿಜಿಟಲ್ ಲೈಬ್ರರಿ ತಲೆ ಎತ್ತಲಿರುವುದು ಸಂತಸ ತಂದಿದೆ.
- ಕಿರಣ ರಜಪೂತ, ಯುವ ಮುಖಂಡ