ಹುಕ್ಕೇರಿ ಗ್ಯಾರಂಟಿ ಅಧ್ಯಕ್ಷರಿಗೆ ಹೈಟೆಕ್ ಕೊಠಡಿ!

KannadaprabhaNewsNetwork |  
Published : Jun 07, 2025, 01:21 AM ISTUpdated : Jun 07, 2025, 01:22 AM IST
ರವಿ ಕಾಂಬಳೆ | Kannada Prabha

ಸಾರಾಂಶ

ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಹುಕ್ಕೇರಿ ತಾಲೂಕು ಅಧ್ಯಕ್ಷ ಶಾನೂಲ್ ತಹಶೀಲ್ದಾರ ಅವರ ಕೊಠಡಿ ನವೀಕರಣಕ್ಕೆ ಲಕ್ಷಾಂತರ ರು. ವ್ಯಯಿಸಲಾಗಿದೆ.

ರವಿ ಕಾಂಬಳೆ

ಕನ್ನಡಪ್ರಭ ವಾರ್ತೆ ಹುಕ್ಕೇರಿ

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪಂಚಗ್ಯಾರಂಟಿ ಯೋಜನೆಗಳು ಬಡ ಜನರಿಗೆ ಆರ್ಥಿಕ ಹಾಗೂ ಸಾಮಾಜಿಕವಾಗಿ ಶಕ್ತಿ ತುಂಬುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿವೆ. ಆದರೆ, ಈ ನಡುವೆ ಇಲ್ಲಿನ ಗ್ಯಾರಂಟಿ ಯೋಜನೆಗಳ ತಾಲೂಕು ಮಟ್ಟದ ಅನುಷ್ಠಾನ ಪ್ರಾಧಿಕಾರ ಸಮಿತಿಯ ಅಧ್ಯಕ್ಷರು ಐಷಾರಾಮಿ ಸೌಲಭ್ಯವುಳ್ಳ ಹೈಟೆಕ್ ಕೊಠಡಿ ಹೊಂದಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಬಡವರ ಸ್ವಾವಲಂಬನೆಯ ಬದುಕಿಗೆ ಆಸರೆಯಾಗಿರುವ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಹುಕ್ಕೇರಿ ತಾಲೂಕು ಅಧ್ಯಕ್ಷ ಶಾನೂಲ್ ತಹಶೀಲ್ದಾರ ಅವರ ಕೊಠಡಿ ನವೀಕರಣಕ್ಕೆ ಲಕ್ಷಾಂತರ ರೂ,ಗಳನ್ನು ವ್ಯಯಿಸಲಾಗಿದೆ. ಇದರೊಂದಿಗೆ ಸಾರ್ವಜನಿಕರ ತೆರಿಗೆ ಹಣವನ್ನು ಬೇಕಾಬಿಟ್ಟಿಯಾಗಿ ದುಂದುವೆಚ್ಚ ಮಾಡಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿ ಬಂದಿವೆ.

ಹುಕ್ಕೇರಿ ತಾಲೂಕು ಪಂಚಾಯತಿ ಆವರಣದಲ್ಲಿರುವ ಹಳೇ ಸಭಾಭವನಕ್ಕೆ ಹೊಂದಿಕೊಂಡಿರುವ ಕೊಠಡಿಯೊಂದನ್ನು ಗ್ಯಾರಂಟಿ ಯೋಜನೆ ಅಧ್ಯಕ್ಷರಿಗೆ ಹಂಚಿಕೆ ಮಾಡಲಾಗಿದೆ. ಈ ಕೊಠಡಿಯನ್ನು ತಾಲೂಕು ಪಂಚಾಯಿತಿಯ ಕಚೇರಿ ನಿರ್ವಹಣೆ-090 ಲೆಕ್ಕ ಶೀರ್ಷಿಕೆಯಡಿ ಲಕ್ಷಾಂತರ ರುಪಾಯಿ ವೆಚ್ಚ ಮಾಡಿ ನವೀಕರಣಗೊಳಿಸಲಾಗಿದೆ. ಆದರೆ, ತಾಲೂಕಿನ ಅನೇಕ ಮಹತ್ವದ ಯೋಜನೆಗಳು ಅನುದಾನದ ಬರ ಎದುರಿಸುತ್ತಿರುವ ನಡುವೆಯೂ ಗ್ಯಾರಂಟಿ ಯೋಜನೆ ಅಧ್ಯಕ್ಷರ ಕೊಠಡಿಗೆ ಭರ್ಜರಿ ಸೌಕರ್ಯ ಕಲ್ಪಿಸಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನು ಸರಳತೆಯ ಪ್ರತಿಬಿಂಬದಂತಿರುವ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ಕಟ್ಟಾ ಅನುಯಾಯಿಯೂ ಆಗಿರುವ ಗ್ಯಾರಂಟಿ ಯೋಜನೆ ಅಧ್ಯಕ್ಷ ಶಾನೂಲ್ ತಹಶೀಲ್ದಾರ ಇದೀಗ ಅತ್ಯಾಧುನಿಕ ಐಷಾರಾಮಿ ಸೌಲಭ್ಯ ಹೊಂದುವ ಮೂಲಕ ಜಾರಕಿಹೊಳಿ ಅವರಿಗೆ ತದ್ವಿರುದ್ಧ ಎನಿಸಿದ್ದಾರೆ. ಅಷ್ಟೇ ಅಲ್ಲದೇ ಈ ಪ್ರದೇಶದಲ್ಲಿರುವ ಹುಕ್ಕೇರಿ ಕ್ಷೇತ್ರದ ಶಾಸಕ ನಿಖಿಲ್ ಕತ್ತಿ ಅವರ ಕಚೇರಿಯನ್ನೇ ಶಿಥಿಲಾವಸ್ಥೆಯ ನೆಪವೊಡ್ಡಿ ಸ್ಥಗಿತಗೊಳಿಸಿರುವ ತಾಲೂಕು ಪಂಚಾಯಿತಿ ಅಧಿಕಾರಿಗಳ ನಡೆಗೆ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಜೊತೆಗೆ ಸಾಕಷ್ಟು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

ಬಡ, ಮಧ್ಯಮ ವರ್ಗಗಳಿಗೆ ಸವಾಲು ಎನಿಸಿರುವ ತಮ್ಮ ಆದಾಯ ಮತ್ತು ಖರ್ಚುಗಳನ್ನು ಸರಿದೂಗಿಸಲು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಮಾದರಿ ಎನಿಸಬೇಕಿದೆ. ಆದರೆ, ಈ ಪ್ರಾಧಿಕಾರದ ಅಧ್ಯಕ್ಷರ ಕೊಠಡಿಗೆ ಅತ್ಯಾಧುನಿಕ ಸೌಲಭ್ಯ ಒದಗಿಸಲಾಗಿದೆ. ಹಳೆಯ ಕುರ್ಚಿ, ಟೇಬಲ್ ಬದಲಿಸಿ ಹೊಸ ಪೀಠೋಪಕರಣಗಳನ್ನು ಖರೀದಿಸಲಾಗಿದೆ. ಇಡೀ ಕೊಠಡಿಯನ್ನೇ ಪಿಒಪಿಯಿಂದ ಮರುಸೃಷ್ಟಿಸಲಾಗಿದೆ. ಮೇಲ್ಛಾವಣಿಗೆ ಹೊಸ ಹೆಂಚುಗಳನ್ನು ಹೊದಿಸಲಾಗಿದೆ. ಆದ್ದರಿಂದ ಈ ಅನುದಾನವನ್ನೇ ಒಂದೆರೆಡು ಶಿಥಿಲ ಶಾಲಾ-ಅಂಗನವಾಡಿಗಳನ್ನು ದುರಸ್ತಿ ಮಾಡಬಹುದಾಗಿತ್ತು ಎನ್ನುವ ಅಭಿಪ್ರಾಯಗಳು ಕೇಳಿ ಬಂದಿವೆ.

ಹುಕ್ಕೇರಿ ತಾಲೂಕಿನ ವಿವಿಧೆಡೆಯಿಂದ ಪಂಚ ಗ್ಯಾರಂಟಿ ಯೋಜನೆಗಳ ಮಾಹಿತಿಗಾಗಿ ಬರುವ ಜನರಿಗಾಗಿ ಕಚೇರಿ ಸ್ಥಾಪಿಸಲಾಗಿದೆ. ಹಳೆಯದಾದ ತಮ್ಮ ಕೊಠಡಿಗೆ ಸೌಲಭ್ಯ ಕಲ್ಪಿಸುವಂತೆ ಕೋರಿಕೊಳ್ಳಲಾಗಿತ್ತು. ಅದರನ್ವಯ ತಾಲೂಕು ಪಂಚಾಯಿತಿಯಿಂದ ಸೌಕರ್ಯ ಒದಗಿಸಲಾಗಿದೆ.

ಶಾನೂಲ್ ತಹಸೀಲ್ದಾರ್‌, ಅಧ್ಯಕ್ಷರು ಗ್ಯಾರಂಟಿ ಯೋಜನೆಗಳ ತಾಲೂಕು ಮಟ್ಟದ ಅನುಷ್ಠಾನ ಸಮಿತಿ ಹುಕ್ಕೇರಿ

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ