ಸೊರಬದಲ್ಲಿ ಐತಿಹಾಸಿ ಪಳೆಯುಳಿಕೆ ಅಧ್ಯಯನ ಅಗತ್ಯ

KannadaprabhaNewsNetwork |  
Published : Nov 13, 2024, 12:03 AM IST
ಫೋಟೊ:೧೨ಕೆಪಿಸೊರಬ-೦೧ : ಸೊರಬ ತಾಲೂಕಿನ ಯಲಸಿ ಗ್ರಾಮದಲ್ಲಿ ಅಪೂರ್ವ ಮತ್ತು ವಿರಳ ಶಿಲ್ಪವೊಂದನ್ನು ರಾಜ್ಯ ಪುರಾತತ್ವ ಇಲಾಖೆ ಹಂಪಿಯ ನಿರ್ದೇಶಕ ಡಾ. ಆರ್. ಶೇಜೇಶ್ವರ ವೀಕ್ಷಿಸಿದರು. | Kannada Prabha

ಸಾರಾಂಶ

ತಾಲೂಕಿನಲ್ಲಿ ಐತಿಹಾಸಿಕ ವಿಶಿಷ್ಟ ಪಳೆಯುಳಿಕೆ ಹುದುಗಿಸಿಕೊಂಡಿದ್ದು ಸಮಗ್ರ ಅಧ್ಯಯನದ ಮೂಲಕ ಇನ್ನಷ್ಟು ಬೆಳಕಿಗೆ ಬರಬೇಕಿದೆ ಎಂದು ರಾಜ್ಯ ಪುರಾತತ್ವ ಇಲಾಖೆ ಹಂಪಿಯ ನಿರ್ದೇಶಕ ಡಾ. ಆರ್. ಶೇಜೇಶ್ವರ ಹೇಳಿದರು.

ಕನ್ನಡಪ್ರಭ ವಾರ್ತೆ ಸೊರಬ

ತಾಲೂಕಿನಲ್ಲಿ ಐತಿಹಾಸಿಕ ವಿಶಿಷ್ಟ ಪಳೆಯುಳಿಕೆ ಹುದುಗಿಸಿಕೊಂಡಿದ್ದು ಸಮಗ್ರ ಅಧ್ಯಯನದ ಮೂಲಕ ಇನ್ನಷ್ಟು ಬೆಳಕಿಗೆ ಬರಬೇಕಿದೆ ಎಂದು ರಾಜ್ಯ ಪುರಾತತ್ವ ಇಲಾಖೆ ಹಂಪಿಯ ನಿರ್ದೇಶಕ ಡಾ. ಆರ್. ಶೇಜೇಶ್ವರ ಹೇಳಿದರು.ಮಂಗಳವಾರ ತಾಲೂಕಿನ ಯಲಸಿ ಗ್ರಾಮದಲ್ಲಿ ಪುರಾತತ್ವ ಕ್ಷೇತ್ರಾಧ್ಯಯನ ನಡೆಸಿ ಗ್ರಾಮದ ಅಪೂರ್ವ ಮತ್ತು ವಿರಳ ಶಿಲ್ಪವೊಂದನ್ನು ವೀಕ್ಷಿಸಿ ಮಾತನಾಡಿದರು.ಐತಿಹಾಸಿಕ ಮತ್ತು ಇತಿಹಾಸದ ಅನ್ವೇಷಣೆಯಲ್ಲಿ ಸೊರಬ ತಾಲೂಕು ಹಲವು ಮೊದಲುಗಳಿಗೆ ಕಾರಣವಾಗಿದೆ. ಯಲಸಿ ಗ್ರಾಮದ ಕವಡಿಯ ಸತಿಸಹಗಮನ ಶಾಸನ, ಮಾವಲಿ ಗ್ರಾಮದ ಒಂದು ಶಾಸನ, ತೆಲಗುಂದಿಯ ಐದನೇ ಶತಮಾನದ ಶಾಸನ, ಕುಪ್ಪಗಡ್ಡೆ ಹತ್ತನೇ ಶತಮಾನದ ಶಾಸನ ಮಹತ್ವಪೂರ್ಣ ಹೊಂದಿ ಚರಿತ್ರೆಯನ್ನು ಬಿಂಬಿಸುತ್ತವೆ ಎಂದರು.ಈಗಾಗಲೇ ಇದೇ ತಾಲೂಕಿನ ಹಿರಿಯ ಸಂಶೋಧಕ ಶ್ರೀಪಾದ ಬಿಚ್ಚುಗತ್ತಿ ಅಧ್ಯಯನ ನಡೆಸಿದ್ದು, ಸ್ಥಳೀಯ ಅರಸು ಮನೆತನಗಳು, ಕೆರೆಗಳು, ಜೈನ ಸ್ಮಾರಕ, ರಾಷ್ಟ್ರಕೂಟರ ಶಾಸನ, ಶಿಲ್ಪಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಈಚೆಗೆ ರಮೇಶ್ ಹಿರೇಜಂಬೂರು ಹಾಗೂ ಮಂಜಪ್ಪ ಚುರ್ಚುಗುಂಡಿ ಹಲವು ಶಿಲ್ಪ ಶಾಸನಗಳನ್ನು ಪತ್ತೆ ಹಚ್ಚಿದ್ದಾರೆ. ಆದಾಗ್ಯ ಇನ್ನೂ ಅಪಾರ ಸಂಖ್ಯೆಯ ಪಳೆಯುಳಿಕೆಗಳು ಅಧ್ಯಯನಕ್ಕೆ ಪೂವಕವಾಗಿವೆ ಎಂದರು.ಯಲಸಿಯ ಧೂತರ ವಿಗ್ರಹ ತೀರಾ ಅಪರೂಪದ್ದಾಗಿದ್ದು, ಹೊನ್ನಾವರ ಹೈಗುಂದದ ಶಿಲ್ಪಗಳನ್ನು ಹೋಲುತ್ತಿದೆ. ಬಹುತೇಕ ಕದಂಬ ಪೂರ್ವದ ವಿಗ್ರಹವಾಗಿರುವ ಇದು ವಿಶಿಷ್ಟ ಶಿಲ್ಪವಾಗಿದೆ. ಗ್ರಾಮದವರು ಈ ಶಿಲ್ಪಗಳೂ ಸೇರಿದಂತೆ ಗ್ರಾಮದ ಅನೇಕ ಅಮೂಲ್ಯ ಇತಿಹಾಸದ ಕುರುಹುಗಳನ್ನು ಕಾಪಾಡಿಕೊಂಡು ಬಂದಿರುವುದು ಸಂತಸದ ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದರು.ನಂತರ ತಾಲೂಕಿನ ಹೆಚ್ಚೆ, ಚಂದ್ರಗುತ್ತಿ ಪ್ರದೇಶಗಳಲ್ಲಿ ಕ್ಷೇತ್ರಾಧ್ಯಯನ ನಡೆಸಿದರು.

ಹಲವು ಪ್ರಥಮಗಳ ದಾಖಲೆ ಹೊಂದಿರುವ ಸೊರಬ ತಾಲೂಕು ಪ್ರಚಾರದ ಕೊರತೆ, ಪ್ರವಾಸೋದ್ಯಮದ ನಿರಾಸಕ್ತಿಯಿಂದಾಗಿ ಸೊರಗಿದೆ. ಯಲಸಿಯ ಧೂತರ ಶೈಲಿ, ಛರ್ಯೆ ರಾಜ್ಯದ ಯಕ್ಷ ಪ್ರತಿಮೆಗಳಿಗಿಂತ ಭಿನ್ನವಾಗಿದ್ದು, ಆದಿ ಕದಂಬ ಕಾಲದ ಲಕ್ಷಣವನ್ನು ಹೊಂದಿದೆ. ಯಲಸಿಯಲ್ಲಿ ಈ ಹಿಂದೆ ಆದಿ ಕದಂಬ ಕಾಲದ ಮೃಣ್ ಪಾತ್ರೆ, ಸಣ್ಣಸಣ್ಣ ವಿಗ್ರಹಗಳು, ಇಟ್ಟಿಗೆಗಳು ಪತ್ತೆಯಾಗಿವೆ.

ಶ್ರೀಪಾದ ಬಿಚ್ಚುಗತ್ತಿ ಯಲಸಿ, ಇತಿಹಾಸ ಸಂಶೋಧಕ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅತಿವೇಗ ಎಂದರೆ ನಿರ್ಲಕ್ಷ್ಯದ ಚಾಲನೆ ಅಲ್ಲ: ಹೈಕೋರ್ಟ್‌
‘ಜಾಹೀರಾತಲ್ಲಿ ಗಾಂಧೀಜಿ ಬಳಕೆ ಗಾಂಧೀಜಿಯರ ಮೌಲ್ಯಗಳ ಹತ್ಯೆ’