ನಾಳೆ ಸುವರ್ಣ ವಿಧಾನಸೌಧದಲ್ಲಿ ಬೃಹತ್‌ ಗಾಂಧಿ ಪ್ರತಿಮೆ ಅನಾವರಣ

KannadaprabhaNewsNetwork | Published : Dec 26, 2024 1:01 AM

ಸಾರಾಂಶ

ಮಹಾತ್ಮ ಗಾಂಧೀಜಿ ಅಧ್ಯಕ್ಷತೆ ವಹಿಸಿದ್ದ 1924ರ ಕಾಂಗ್ರೇಸ್ ಅಧಿವೇಶನಕ್ಕೆ ನೂರು ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಶತಮಾನೊತ್ಸವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಮಹಾತ್ಮ ಗಾಂಧೀಜಿಯವರ ತತ್ವಾದರ್ಶಗಳನ್ನು ದೇಶದ ಪ್ರತಿಯೊಬ್ಬರಿಗೆ ಪರಿಚಯಿಸುವ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಮಹಾತ್ಮ ಗಾಂಧೀಜಿ ಅಧ್ಯಕ್ಷತೆ ವಹಿಸಿದ್ದ 1924ರ ಕಾಂಗ್ರೇಸ್ ಅಧಿವೇಶನಕ್ಕೆ ನೂರು ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಶತಮಾನೊತ್ಸವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಮಹಾತ್ಮ ಗಾಂಧೀಜಿಯವರ ತತ್ವಾದರ್ಶಗಳನ್ನು ದೇಶದ ಪ್ರತಿಯೊಬ್ಬರಿಗೆ ಪರಿಚಯಿಸುವ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.

ಬೆಳಗಾವಿ ಸುವರ್ಣಸೌಧ ಆವರಣದಲ್ಲಿ ಬುಧವಾರ ಮಹಾತ್ಮ ಗಾಂಧೀಜಿಯವರ ಪುತ್ಥಳಿ ಅನಾವರಣ ಸಮಾರಂಭದ ಪೂರ್ವಸಿದ್ಧತೆ ಪರಿಶೀಲಿಸಿ ಅವರು‌ ಮಾತನಾಡಿದರು. ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ 1924ರಲ್ಲಿ ಜರುಗಿದ ಅಧಿವೇಶನ ಕೇವಲ ಪಕ್ಷದ ಅಧಿವೇಶನವಾಗಿರದೆ, ಸಾಮಾಜಿಕ‌ ಸುಧಾರಣೆಯ ಅಸ್ತ್ರವಾಗಿತ್ತು ಎಂದು ಬಣ್ಣಿಸಿದರು.

ಸಮಾಜದಲ್ಲಿನ‌ ಅಸ್ಪ್ರಶ್ಯತೆ ನಿವಾರಿಸಿ ಭ್ರಾತೃತ್ವ ಭಾವನೆ ಬೆಸೆಯುವುದರ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಶಕ್ತಿ ತುಂಬಲಾಯಿತು.

1924ರಲ್ಲಿ ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ಜರುಗಿದ ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ಆಚರಿಸುವ ಮೂಲಕ ಇತಿಹಾಸ ಮರುಕಳಿಸುವ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಪಾಟೀಲ ವಿವರಿಸಿದರು.

ಗಾಂಧೀಜಿ ತತ್ವಾದರ್ಶಗಳನ್ನು ದೇಶದ ಪ್ರತಿಯೊಬ್ಬರಿಗೂ ಪರಿಚಯಿಸುವ ಉದ್ದೇಶದೊಂದಿಗೆ ಶತಮಾನೋತ್ಸವ ಅಂಗವಾಗಿ ರಾಜ್ಯ ಸರ್ಕಾರ 41 ಕಾರ್ಯಕ್ರಮ ಘೋಷಣೆ ಮಾಡಿ ವರ್ಷಪೂರ್ತಿ ಕಾರ್ಯಕ್ರಮ ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

ಸುವರ್ಣ ವಿಧಾನಸೌಧದಲ್ಲಿನ ಮಹಾತ್ಮ ಗಾಂಧೀಜಿ ಅವರ ಬೃಹತ್‌ ಪ್ರತಿಮೆಯನ್ನು ಡಿ.27ರಂದು ಬೆಳಗ್ಗೆ 10 ಗಂಟೆಗೆ ಅನಾವರಣಗೊಳಿಸಲಾಗುವುದು. ಈ ಬೃಹತ್‌ ಕಾರ್ಯಕ್ರಮಕ್ಕೆ ಸರ್ವ ಪಕ್ಷದ ನಾಯಕರು, ಸ್ವಾತಂತ್ರ್ಯ ಹೊರಾಟಗಾರರನ್ನು, ಆಹ್ವಾನಿಸಲಾಗಿದೆ. ಡಿ.26ರಂದು ನಗರದ‌ ವೀರಸೌಧದಲ್ಲಿನ ಗಾಂಧೀಜಿಯವರ ಪ್ರತಿಮೆ ಹಾಗೂ ರಾಮತೀರ್ಥ ನಗರದಲ್ಲಿನ ಗಂಗಾಧರ್ ರಾವ್ ದೇಶಪಾಂಡೆ ಅವರ ಸ್ಮಾರಕ ಭವನ ಉದ್ಘಾಟಿಸಲಾಗುವುದು ಎಂದವರು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ‌ ಮುಖ್ಯ ಮುಖ್ಯಮಂತ್ರಿ ವೀರಪ್ಪ‌ ಮೊಯಿಲಿ, ಮಾಜಿ ಸಭಾಪತಿ ಬಿ.ಎಲ್. ಶಂಕರ್‌, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ‌ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಮತ್ತಿತರು ಉಪಸ್ಥಿತರಿದ್ದರು.

Share this article