ಆನೇಕಲ್‌ ಪುರಸಭೆ ಚುನಾವಣೆಯಲ್ಲಿ ಭಾರಿ ಹೈಡ್ರಾಮಾ : ಕಾಂಗ್ರೆಸ್‌ ಸದಸ್ಯರ ಬಲದಿಂದ ಬಿಜೆಪಿಗೆ ಜಯ

KannadaprabhaNewsNetwork |  
Published : Sep 01, 2024, 01:53 AM ISTUpdated : Sep 01, 2024, 05:40 AM IST
ಆನೇಕಲ್‌ | Kannada Prabha

ಸಾರಾಂಶ

ಆನೇಕಲ್ ಪುರಸಭೆಯ ಉಳಿಕೆ ಅವಧಿಗೆ ನಡೆದ ಚುನಾವಣೆಯಲ್ಲಿ ಭಾರಿ ಹೈಡ್ರಾಮಾ ನಡೆದಿದೆ. ಕಾಂಗ್ರೆಸ್‌ ಸದಸ್ಯರ 13 ಮತಗಳನ್ನು ಪಡೆದು ಬಿಜೆಪಿ ಅಭ್ಯರ್ಥಿ ಸುಧಾ ನಿರಂಜನ್‌ ಗೆದ್ದಿದ್ದಾರೆ.

 ಆನೇಕಲ್‌ :  ಆನೇಕಲ್ ಪುರಸಭೆಯ ಉಳಿಕೆ ಅವಧಿಗೆ ನಡೆದ ಚುನಾವಣೆಯಲ್ಲಿ ಭಾರಿ ಹೈಡ್ರಾಮಾ ನಡೆದಿದೆ. ಕಾಂಗ್ರೆಸ್‌ ಸದಸ್ಯರ 13 ಮತಗಳನ್ನು ಪಡೆದು ಬಿಜೆಪಿ ಅಭ್ಯರ್ಥಿ ಸುಧಾ ನಿರಂಜನ್‌ ಗೆದ್ದಿದ್ದಾರೆ. ಹಾಗೆಯೇ ಕಾಂಗ್ರೆಸ್ ಅಭ್ಯರ್ಥಿ ಭುವನ ದಿನೇಶ್ ಉಪಾಧ್ಯಕ್ಷೆಯಾಗಿ ಆಯ್ಕೆಯಾದರು. ಇದೇ ವೇಳೆ ಸಂಸದ ಡಾ. ಸಿ.ಎನ್‌ ಮಂಜುನಾಥ್‌ ಅವರ ಕಾರನ್ನು ಕಾಂಗ್ರೆಸ್ ಕಾರ್ಯಕರ್ತರು ಅಡ್ಡಗಟ್ಟಿದರು. ಈ ವೇಳೆ ಡಿವೈಎಸ್‌ಪಿ ಮೋಹನ್ ಅವರು ಪತ್ರಕರ್ತರನ್ನು ಚಿತ್ರೀಕರಿಸುವುದರಿಂದ ತಡೆದು ಅವಾಚ್ಯ ಶಬ್ದಗಳನ್ನು ಆಡಿ ನಿಂದಿಸಿದರು.

ಶನಿವಾರ ನಡೆದ ಚುನಾವಣೆಗೆ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಇಬ್ಬರು ಮತ್ತು ಕಾಂಗ್ರೆಸ್‌ನಿಂದ ಒಬ್ಬರು ನಾಮಪತ್ರ ಸಲ್ಲಿಸಿದ್ದರು. ನಂತರದ ಪ್ರಕ್ರಿಯೆಯಲ್ಲಿ ಕಾಂಗ್ರೆಸ್‌ನ ಭಾರತಿ ವಿರೂಪಾಕ್ಷಪ್ಪ ತಮ್ಮ ನಾಮಪತ್ರ ವಾಪಸ್ ಪಡೆದರು. ಅಂತಿಮವಾಗಿ ಬಿಜೆಪಿಯ ಶ್ಯಾಮಲಾ ಮತ್ತು ಸುಧಾ ಅವರು ಕಣದಲ್ಲಿ ಉಳಿದರು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕ ಬಿ. ಶಿವಣ್ಣ ಹಾಗೂ ಬಿಜೆಪಿ ಸಂಸದ ಡಾ. ಮಂಜುನಾಥರವರು ಪಾಲ್ಗೊಂಡರು. ಬಿಜೆಪಿಯ ಶ್ಯಾಮಲಾ 13 ಮತಗಳು ಪಡೆದು ಪರಾಜಿತರಾದರೆ, ಸುಧಾ ನಿರಂಜನ್ ಕಾಂಗ್ರೆಸ್‌ನ 13 ಮತ್ತು ಬಿಜೆಪಿಯ 2 ಮತ ಸೇರಿ 15 ಮತ ಪಡೆದು ಜಯಗಳಿಸಿದರು.

ಲಾಠಿ ಪ್ರಹಾರ:

ಕಾಂಗ್ರೆಸ್‌ನ ರವಿ ಚೇತನ್ ಬಿಜೆಪಿ ಸಂಸದರ ಜೊತೆ ಪುರಸಭೆಗೆ ಬಂದಾಗ ಕೆಲಕಾಲ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ತಳ್ಳಾಟ ಮಾತಿನ ಘರ್ಷಣೆ ನಡೆಯಿತು. ಎಚ್ಚರಗೊಂಡ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿ ಗುಂಪನ್ನು ಚದುರಿಸಿದರು. ಮತದಾನಕ್ಕೆ ಕೈ ಎತ್ತುವ ಮೂಲಕ ಅಭಿಪ್ರಾಯ ಸೂಚಿಸಬೇಕೆಂದು ಚುನಾವಣಾಧಿಕಾರಿ ಶಶಿಧರ್ ಮಧ್ಯಾಲ್ ತಿಳಿಸಿದರು.

ಪತ್ರಕರ್ತರನ್ನು ನಿಂದಿಸಿದ ಡಿವೈಎಸ್ಪಿ: ಠಾಣೆ ಎದುರು ಮುಷ್ಕರ

ಚುನಾವಣಾ ವರದಿ ಮಾಡಲು ತೆರಳಿದ್ದ ಪತ್ರಕರ್ತರನ್ನು ಡಿವೈಎಸ್ಪಿ ನಿಂದಿಸಿದ ಕಾರಣ ಸ್ವಲ್ಪ ಕಾಲ ಬಿಗುವಿನ ವಾತಾವರಣ ಉಂಟಾಯಿತು. ಸಂಘದ ಅಧ್ಯಕ್ಷ ಅಂಬರೀಷ್ ಹಾಗೂ ಡಿವೈಎಸ್ಪಿ ನಡುವೆ ವಾಗ್ವಾದ ನಡೆಯಿತು. ‘ನಾವು ಪತ್ರಕರ್ತರು. ನಮ್ಮ ಕೆಲಸ ಮಾಡಲು ಬಿಡಿ. ತಾವು ಪೊಲೀಸರು ಕಾನೂನು ಸುವ್ಯವಸ್ಥೆ ಬಗ್ಗೆ ನಿಗಾ ಇಡಿ’ ಎಂದರು. ಲಘು ಲಾಠಿ ಪ್ರಹಾರ ನಡೆಯುವ ವೇಳೆ ಚಿತ್ರೀಕರಣ ಮಾಡುವಾಗ ಮಾತಿನ ಚಕಮಕಿಯಲ್ಲಿ ಉಂಟಾಯಿತು. ಇದರಿಂದ ಬೇಸರಗೊಂಡ ಪತ್ರಕರ್ತರು ಠಾಣೆ ಎದುರು ಮುಷ್ಕರ ಕುಳಿತರು. ಪರಿಸ್ಥಿತಿ ತಿಳಿಯಾದ ನಂತರ ಡಿವೈಎಸ್ಪಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿ, ಸಂಸದರು ಬಂದಾಗ ಘರ್ಷಣೆ ಆಗದಂತೆ ರಕ್ಷಣೆ ನೀಡುವುದು ನಮ್ಮ ಕರ್ತವ್ಯ. ಆ ಗಲಿಬಿಲಿಯಲ್ಲಿ ಅಚಾನಕ್ ಹೀಗಾಗಿದೆ ಎಂದು ವೃತ್ತ ನಿರೀಕ್ಷಕ ತಿಪ್ಪೇಸ್ವಾಮಿ, ಜಗದೀಶ್‌ ಸಂಧಾನ ಮಾಡಿ ಮುಷ್ಕರ ನಿಲ್ಲಿಸಿದರು.

PREV

Recommended Stories

‘ಚಾಮುಂಡೇಶ್ವರಿ ಬಗ್ಗೆ ಬಾನು ತಮ್ಮ ಗೌರವ ಸ್ಪಷ್ಟಪಡಿಸಲಿ’ : ವಿಜಯೇಂದ್ರ
ಗ್ಯಾರಂಟಿ ಯೋಜನೆಗಳ ಜತೆ ರಾಜ್ಯವು ಅಭಿವೃದ್ಧಿ