ವೈರಮುಡಿ ಉತ್ಸವ ಜನತೆ ಕಣ್ತುಂಬಿಕೊಳ್ಳಲು ಬೃಹತ್ ಎಲ್ ಇಡಿ ಪರದೆ ಅಳವಡಿಸಿ

KannadaprabhaNewsNetwork | Published : Apr 3, 2025 12:31 AM

ಸಾರಾಂಶ

ವೈರಮುಡಿ ಕಿರೀಟಧಾರಣ ಮಹೋತ್ಸವವು ಐತಿಹಾಸಿಕ ಸಂಭ್ರಮಕ್ಕೆ ಸಾಕ್ಷಿಯಾಗುವಂತೆ ಆಚರಿಸಲು ಕ್ರಮ ವಹಿಸಬೇಕು. ಉತ್ಸವವನ್ನು ಜನತೆ ಕಣ್ತುಂಬಿಕೊಳ್ಳಲು ಗ್ರಾಪಂ, ಜಿಲ್ಲಾ, ತಾಲೂಕು ಕೇಂದ್ರ, ಬಸ್ ನಿಲ್ದಾಣಗಳಲ್ಲಿ ಬೃಹತ್ ಎಲ್ ಇಡಿ ಪರದೆಗಳನ್ನು ಅಳವಡಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ ಅಧಿಕಾರಿಗಳಿಗೆ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ವೈರಮುಡಿ ಕಿರೀಟಧಾರಣ ಮಹೋತ್ಸವವು ಐತಿಹಾಸಿಕ ಸಂಭ್ರಮಕ್ಕೆ ಸಾಕ್ಷಿಯಾಗುವಂತೆ ಆಚರಿಸಲು ಕ್ರಮ ವಹಿಸಬೇಕು. ಉತ್ಸವವನ್ನು ಜನತೆ ಕಣ್ತುಂಬಿಕೊಳ್ಳಲು ಗ್ರಾಪಂ, ಜಿಲ್ಲಾ, ತಾಲೂಕು ಕೇಂದ್ರ, ಬಸ್ ನಿಲ್ದಾಣಗಳಲ್ಲಿ ಬೃಹತ್ ಎಲ್ ಇಡಿ ಪರದೆಗಳನ್ನು ಅಳವಡಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ ಅಧಿಕಾರಿಗಳಿಗೆ ಸೂಚಿಸಿದರು.

ವಿವಿಧ ಅಧಿಕಾರಿಗಳೊಂದಿಗೆ ವೈರಮುಡಿ ಉತ್ಸವದ ಪೂರ್ವಸಿದ್ಧತೆ ಕುರಿತು ಪರಿಶೀಲಿಸಿ ಮಾತನಾಡಿ, ಉತ್ಸವ ಬೀದಿ ಕಲ್ಯಾಣಿ ಹಾಗೂ ಯೋಗಾನರಸಿಂಹಸ್ವಾಮಿ ಬೆಟ್ಟಕ್ಕೆ ಅತ್ಯಾಕರ್ಷಕವಾಗಿ ದೀಪಾಲಂಕಾರ ಮಾಡಬೇಕು ಎಂದರು.

ದೇವಾಲಯದ ಆವರಣ, ಉತ್ಸವ ಆವರಣ, ರಾಜಗೋಪುರದ ಮುಂಭಾಗ ವಿಶೇಷವಾದ ರೀತಿಯಲ್ಲಿ ಪುಷ್ಪಾಲಂಕಾರ, ಮಹಾರಾಜರು ದರ್ಶನ ಮಾಡುತ್ತಿದ್ದ ದೇವಾಲಯದ ಮುಂಭಾಗ ಸ್ಥಳದಲ್ಲಿ ಈ ವರ್ಷ ಪುಷ್ಪಮಂಟಪ ನಿರ್ಮಾಣ, ದೇವಾಲಯದ ಎಡಭಾಗದ ಮಂಟಪದಲ್ಲಿ ವೈದ್ಯಕೀಯ ಸೇವೆಯ ಕೌಂಟರ್ ತೆರೆಯಬೇಕು ಎಂದು ಹೇಳಿದರು.

ವೈರಮುಡಿ ಉತ್ಸವದ ಸಂಭ್ರಮದ ಕ್ಷಣಗಳನ್ನು ಜಿಲ್ಲಾದ್ಯಂತ ಭಕ್ತರು ಕಣ್ತುಂಬಿಕೊಳ್ಳಲು ಜಕ್ಕನಹಳ್ಳಿ, ಬೆಳ್ಳಾಳೆ, ಮಹದೇಶ್ವರಪುರ, ಕೆನ್ನಾಳು ಪ್ರಮುಖ ಸ್ಥಳಗಳಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಬೃಹತ್ ಪರದೆಗಳನ್ನು ಅಳವಡಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಕೇಂದ್ರ, ತಾಲೂಕು ಕೇಂದ್ರಗಳಲ್ಲಿ ನಗರಸಭೆಯ ಎಲ್.ಇ.ಡಿ ಪರದೆಗಳನ್ನೇ ಬಳಸಿ ವೈರಮುಡಿ ಉತ್ಸವ ನೇರಪ್ರಸಾರ ಬಿತ್ತರಿಸಬೇಕು. ಉತ್ಸವ ಬೀದಿಗಳಲ್ಲಿ ಹೆಚ್ಚು ಬೃಹತ್ ಪರದೆಗಳನ್ನು ಅಳವಡಿಸಬೇಕು. ಬಸ್ ನಿಲ್ದಾಣದ ಬಳಿ ಸಹ ಹೆಚ್ಚುವರಿಯಾಗಿ ಎಲ್.ಇ.ಡಿ ಪರದೆಗಳನ್ನು ಅಳವಡಿಸಬೇಕು ಎಂದು ಸೂಚನೆ ನೀಡಿದರು.

ಭಕ್ತರ ವಾಹನಗಳಿಗೆ ವ್ಯವಸ್ಥಿತ ಪಾರ್ಕಿಂಗ್ ಸೌಲಭ್ಯ, ಉತ್ತಮ ಬೆಳಕಿನ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು. ವಿವಿಧ ಪುರಸಭೆ ಮತ್ತು ನಗರಸಭೆಗಳಿಂದ ಪೌರಕಾರ್ಮಿಕರೊಂದಿಗೆ ಸ್ವಚ್ಛತೆ ಕಾಪಾಡಬೇಕು. ಜಿಲ್ಲಾ ಉಸ್ತುವಾರಿ ಸಚಿವರ ಸಭೆಯ ನಿರ್ಣಯದಂತೆ ವಿವಿಧ ಇಲಾಖಾಧಿಕಾರಿಗಳು ಎರಡು ದಿನಗಳಲ್ಲಿ ಸಿದ್ದತೆ ಮಾಡಬೇಕು ಎಂದು ಹೇಳಿದರು.

ಏ.11 ರಂದು ರಾತ್ರಿ ಕಲ್ಯಾಣಿಯಲ್ಲಿ ನಡೆಯುವ ರಾಜಮುಡಿ ತೆಪ್ಪೋತ್ಸವವನ್ನು ಶ್ರೀವೈಷ್ಣವ ಸಂಪ್ರದಾಯದಂತೆ ಸಾಂಸ್ಕೃತಿಕ ವಿಶೇಷದೊಂದಿಗೆ ಆಚರಿಸಲಾಗುತ್ತದೆ. ಕರ್ನಾಟಕ ಶಾಸ್ತ್ರೀಯ ಸಂಗೀತ, ಮ್ಯಾಂಡಲಿನ್, ಚಂಡೆವಾದನ, ನಾದಸ್ವರವಾದನದೊಂದಿಗೆ ತೆಪ್ಪೋತ್ಸವ ನಡೆಸಲಾಗುತ್ತದೆ. ಕಲ್ಯಾಣಿಗೆ ವಿಶೇಷ ದೀಪಾಲಂಕಾರ, ತೆಪ್ಪಮಂಟಪಕ್ಕೆ ಆಕರ್ಷಕ ಪುಷ್ಪಾಲಂಕಾರ ಮಾಡಿಸಿ ಮೇಲುಕೋಟೆ ಮಹತ್ವ ಬಿಂಬಿಸುವ ಲೇಸರ್ ಶೋ ಹಮ್ಮಿಕೊಳ್ಳಬೇಕು ಎಂದರು.

ಏ.7 ರಂದು 24 ಗಂಟೆಯೂ ಅನ್ನದಾನ:

ಏ.7ರ ವೈರಮುಡಿ ಉತ್ಸವದಂದು ದಿನದ 24ಗಂಟೆಯೂ ಅನ್ನದಾನ ಕಾರ್ಯಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು. ಪ್ರಸಾದ ವಿತರಿಸಲು 7 ಕೌಂಟರ್ ನಿರ್ಮಾಣ ಮಾಡಬೇಕು ಎಂದು ತಿಳಿಸಿದರು.

ಜಾತ್ರಾಮಹೋತ್ಸವ ನಡೆಯುವ ಹತ್ತು ದಿನಗಳಂದು ಒಂದೊಂದು ದಿನವೂ ಭಕ್ತರು ಅನ್ನದಾನ ಮಾಡಲು ಅವಕಾಶವಿದೆ. ಅನ್ನದಾನ ಮಾಡಲು ಇಚ್ಛಿಸುವ ದಾನಿಗಳು ಅಥವಾ ಸಂಘ ಸಂಸ್ಥೆಯವರು ಜಿಲ್ಲಾಡಳಿತ ಅಥವಾ ದೇವಾಲಯದ ಕಚೇರಿಯನ್ನು ಸಂಪರ್ಕಿಸಬಹುದು. ಅನ್ನದಾನಕ್ಕೆ ಅಕ್ಕಿ,ಬೇಳೆ, ಎಣ್ಣೆ, ತರಕಾರಿಗಳನ್ನು ಭಕ್ತರು ನೀಡಲು ಅವಕಾಶವಿದೆ ಎಂದು ಮಾಹಿತಿ ನೀಡಿದರು.

ಈ ವೇಳೆ ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ಸಂತೋಷ್, ತಾಪಂ ಇಒ ಲೋಕೇಶಮೂರ್ತಿ, ಮುಜರಾಯಿ ತಹಸೀಲ್ದಾರ್ ತಮ್ಮೇಗೌಡ, ದೇವಾಲಯದ ಇಒ ಶೀಲಾ, ರಾಮಾನುಜರ ಸನ್ನಿಧಿ ಅರ್ಚಕ ಆನಂದಾಳ್ವಾರ್ ಸೇರಿದಂತೆ ಹಲವು ಅಧಿಕಾರಿಗಳು ಹಾಜರಿದ್ದರು.

Share this article