ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದೇ ಚಿಕ್ಕ ಮುರುಕಲು ಗುಡಿಸಿಲಿನಲ್ಲಿ ಐವರೊಂದಿಗೆ ವಾಸ ಮಾಡುತ್ತಿರುವ ಮಹಿಳೆಯೊಬ್ಬಳು ಮನೆಯಿಂದ ಹೊರಬರಲು ರಸ್ತೆಗಾಗಿ ನ್ಯಾಯಾಧೀಶೆಗೆ ಮನವಿ ಮಾಡಿದ್ದರು. ಮನವಿ ಆಲಿಸಿದ್ದ ನ್ಯಾಯಾಧೀಶರು ಬುಧವಾರ ಮಹಿಳೆಯ ಗ್ರಾಮಕ್ಕೆ ಪ್ಯಾನಲ್ ವಕೀಲರು ಮತ್ತು ಗ್ರಾಪಂ ಅಧಿಕಾರಿಯೊಂದಿಗೆ ಮಹಿಳೆಯ ಗುಡಿಸಿಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಆಕೆಗೆ ಮೂಲಭೂತ ಸೌಲಭ್ಯ ಒದಗಿಸಿ ಓಡಾಡಲು ದಾರಿ ಬಿಡಿಸುವಂತೆ ಸೂಚಿಸಿದರು.ತಾಲೂಕಿನ ನುಗುತಹಳ್ಳಿ ಗ್ರಾಮದ ನಿವಾಸಿ ವೆಂಕಟರತ್ನಮ್ಮ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದು, ಪತಿ ರಾಮಾಂಜಿನಪ್ಪ ಹಾಗೂ ಮೂವರು ಮಕ್ಕಳೊಂದಿಗೆ ತನ್ನ ತಂದೆ ನೀಡಿರುವ ಜಾಗದಲ್ಲಿ ಚಿಕ್ಕಗುಡಿಸಿಲಿನಲ್ಲಿ ಕಳೆದ 11 ವರ್ಷಗಳಿಂದ ವಾಸಿಸುತ್ತಿದ್ದಾಳೆ. ಆ ಚಿಕ್ಕ ಗುಡಿಸಲಿನಲ್ಲಿಯೇ ಕುರಿ, ಮೇಕೆ, ಕೋಳಿಗಳೊಂದಿಗೆ ವಾಸವಿದ್ದಾಳೆ. ಮನೆಯ ಪಕ್ಕದಲ್ಲಿ ಬೇರೆಯವರಿಗೆ ಸೇರಿದ ನಿವೇಶನವಿದ್ದು, ಇಷ್ಟು ದಿನ ಆ ನಿವೇಶನ ಖಾಲಿ ಇದ್ದಿದ್ದರಿಂದ ಅಲ್ಲಿಯೇ ಓಡಾಡುತ್ತಿದ್ದರು. ಈಗ ಆ ನಿವೇಶನದಲ್ಲಿ ಗೃಹ ನಿರ್ಮಾಣ ಮಾಡಲು ಪಾಯ ಹಾಕಿದ್ದು ವೆಂಕಟರತ್ನಮ್ಮ ಕುಟುಂಬಕ್ಕೆ ಒಡಾಡಲು ತೊಂದರೆಯಾಗಿದೆ, ತನ್ನ ಗುಡಿಸಲಿಗೆ ಓಡಾಡಲು ಜಾಗ ಕೊಡಿಸಿ, ಮತ್ತು ಮೂಲಭೂತ ಸೌಕರ್ಯಗಳಾದ ನೀರು, ಶೌಚಾಲಯ, ಉಜ್ವಲ ಯೋಜನೆಯಡಿ ಉಚಿತ ಅಡುಗೆ ಅನಿಲ ಸಂಪರ್ಕ ಕೊಡಿಸುವಂತೆ ಅಜ್ಜವಾರ ಗ್ರಾಪಂ ಅಧಿಕಾರಿಗಳು, ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರಿಗೆ ಹಲವಾರು ಬಾರಿ ಮನವಿ ಮಾಡಿದ್ದರೂ ಅವರಾರೂ ಈಕೆಯ ಮನವಿಗೆ ಸ್ಪಂದಿಸಿರಲಿಲ್ಲ.
ಇದರಿಂದ ಬೇಸತ್ತ ವೆಂಕಟರತ್ನಮ್ಮ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶೆ ಎ.ಅರುಣಾಕುಮಾರಿಯವರಿಗೆ ದೂರು ನೀಡಿದ್ದರು.ದೂರು ಸ್ವೀಕರಿಸಿದ್ದ ನ್ಯಾ.ಎ.ಅರುಣಾಕುಮಾರಿ ಬುಧವಾರ ನುಗುತಹಳ್ಳಿ ಗ್ರಾಮಕ್ಕೆ ಪ್ಯಾನಲ್ ವಕೀಲರು ಮತ್ತು ಗ್ರಾ.ಪಂ. ಅಧಿಕಾರಿಯೊಂದಿಗೆ ತೆರಳಿ ಮಹಿಳೆಯ ಗುಡಿಸಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪಕ್ಕದ ನಿವೇಶನದವರೊಂದಿಗೆ ಮಾತನಾಡಿ ಓಡಾಡಲು ದಾರಿ ಬಿಡಿಸಿ ಕೊಟ್ಟರು.
ನಂತರ ಅಜ್ಜವಾರ ಗ್ರಾಮ ಪಂಚಾಯತಿಗೆ ತೆರಳಿ ಅಧಿಕಾರಿಗಳು, ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರೊಂದಿಗೆ ಚರ್ಚಿಸಿ, ವೆಂಕಟರತ್ನಮ್ಮಗೆ ಮೂಲಭೂತ ಸೌಕರ್ಯಗಳಾದ ನೀರು, ಶೌಚಾಲಯ, ಉಜ್ವಲ ಯೋಜನೆಯಡಿ ಉಚಿತ ಅಡುಗೆ ಅನಿಲ ಸಂಪರ್ಕ ಕೊಡಿಸುವಂತೆ ತಾಕೀತು ಮಾಡಿದರಲ್ಲದೆ, ಗುಡಿಸಲಿನ ಸ್ಥಳವನ್ನು ಆಕೆಯ ತಂದೆಯ ಹೆಸರಿನಿಂದ ವೆಂಕಟರತ್ನಮ್ಮ ಹೆಸರಿಗೆ ವರ್ಗಾವಣೆ ಮಾಡಿಸಿ, ಆ ಸ್ಥಳದಲ್ಲಿ ಆಕೆಗೆ ಪಕ್ಕಾ ಮನೆಯನ್ನು ಗ್ರಾಮ ಪಂಚಾಯತಿ ವತಿಯಿಂದ ನಿರ್ಮಿಸಿ ಕೊಡುವಂತೆ ಸೂಚಿಸಿದರು.ಗ್ರಾಮ ಪಂಚಾಯತಿ ಅಧ್ಯಕ್ಷ ಟಿ.ಕೆ.ದೇವೇಂದ್ರ, ಉಪಾಧ್ಯಕ್ಷ ಧನುಷ್, ಸದಸ್ಯ ಮಂಜುನಾಥ್, ಪಿಡಿಒ ಶಶಿಕಲಾ, ಕಾರ್ಯದರ್ಶಿ ಎಚ್.ವಿ.ಕೃಷ್ಣಯ್ಯ, ಪ್ಯಾನಲ್ ವಕೀಲ ಮಂಜುನಾಥರೆಡ್ಡಿ, ಸೃಜನ್ ಗಾಂಧಿ ಮತ್ತಿತರರು ಇದ್ದರು.