ಕನ್ನಡಪ್ರಭ ವಾರ್ತೆ ಉಳ್ಳಾಲ
ಕನ್ನಡದಲ್ಲಿರುವ ಶಾಲಾ ವಿಜ್ಞಾನ ಪಠ್ಯ ಪುಸ್ತಕಗಳಲ್ಲಿ ಪರಿಭಾಷೆಗಳನ್ನು ನೀಡುವಾಗ ಇಂಗ್ಲಿಷ್ ಮತ್ತು ಸಂಸ್ಕೃತ ಪದಗಳನ್ನು ಹೆಚ್ಚು ಬಳಕೆ ಮಾಡುವುದರಿಂದ ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತಿದ್ದು ಸರಳ ಕನ್ನಡ ಪದಗಳನ್ನು ಅಳವಡಿಸುವ ಪ್ರಯತ್ನ ನಡೆಯಬೇಕಿದೆ ಎಂದು ಮಂಗಳೂರು ವಿಶ್ವವಿದ್ಯಾಲಯದ ಕೈಗಾರಿಕಾ ರಸಾಯನಶಾಸ್ತ್ರ ವಿಭಾಗದ ಅಧ್ಯಕ್ಷ ಪ್ರೊ.ಬಿ.ಕೆ. ಸರೋಜಿನಿ ಹೇಳಿದರು.ಅವರು ಶುಕ್ರವಾರ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕ ವತಿಯಿಂದ ಹರೇಕಳ ನ್ಯೂಪಡ್ಪು ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ‘ಕನ್ನಡ ಸಂಭ್ರಮ’ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಕ್ಷರ ಸಂತ ಹರೇಕಳ ಹಾಜಬ್ಬ ಮಾತನಾಡಿ, ನಾವು ತುಳು, ಬ್ಯಾರಿ, ಕೊಂಕಣಿ ಯಾವ ಭಾಷೆಯನ್ನಾಡುವುದಾದರೂ ಕರ್ನಾಟಕದಲ್ಲಿರುವವರು ಕನ್ನಡಿಗರು ಎಂಬ ಭಾವನೆಯಿಂದ ಇರಬೇಕು. ಕನ್ನಡ ನನಗೆ ಎಲ್ಲವನ್ನೂ ನೀಡಿ ಬೆಳೆಸಿದೆ. ನನಗೆ ದೊರಕಿದ ಎಲ್ಲ ಗೌರವಗಳಿಗೂ ಕನ್ನಡ ನಾಡು ತೋರಿದ ಪ್ರೀತಿಯೇ ಕಾರಣ ಎಂದರು.ಅಧ್ಯಕ್ಷತೆ ವಹಿಸಿದ್ದ ವಹಿಸಿದ ಉಳ್ಳಾಲ ತಾಲೂಕು ಕಸಾಪದ ಅಧ್ಯಕ್ಷ ಡಾ. ಧನಂಜಯ ಕುಂಬ್ಳೆ ಮಾತನಾಡಿ, ವಿದ್ಯಾರ್ಥಿಗಳು ಎಳವೆಯಲ್ಲಿಯೇ ಉತ್ತಮ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು. ಪಠ್ಯಕಲಿಕೆಯ ಜೊತೆಗೆ ಸಮಾಜ ಸೇವೆ, ಮಾನವೀಯ ಗುಣಗಳನ್ನು ಹೊಂದಬೇಕು ಎಂದರು. ಹರೇಕಳ ಗ್ರಾಮ ಪಂಚಾಯಿತಿನ ಅಧ್ಯತ್ರೆ ಗುಲಾಬಿ ಉದ್ಘಾಟಿಸಿದರು. ಹರೇಕಳ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅಬ್ದುಲ್ ಮಜೀದ್, ಮಾಜಿ ತಾ.ಪಂ. ಸದಸ್ಯ ಮುಸ್ತಫಾ ಹರೇಕಳ, ಶಾಲಾ ಮುಖ್ಯೋಪಾಧ್ಯಾಯ ಲಕ್ಷಣ ಕೆ. ವಿ. ಪುದುವಾಳ್ ಇದ್ದರು.ಉಳ್ಳಾಲ ತಾಲೂಕು ಕಸಾಪದ ಕಾರ್ಯದರ್ಶಿ ರವೀಂದ್ರ ರೈ ಕಲ್ಲಿಮಾರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಸಾಪದ ಫಜೀರು ಗ್ರಾಮ ಸಂಚಾಲಕಿ ರೇಷ್ಮಾ ನಿರ್ಮಲ್ ಭಟ್ ಸ್ವಾಗತಿಸಿದರು. ನಿರ್ಮಲ್ ಭಟ್ ವಂದಿಸಿದರು.
ಶಾಲಾ ಅಧ್ಯಾಪಕಿ ಅಕ್ಷತಾ ಎಲ್ ನಾಯಕ್ ನಿರೂಪಿಸಿದರು. ಕಸಾಪ ಉಳ್ಳಾಲ ಕಾರ್ಯದರ್ಶಿ ಎಡ್ವರ್ಡ್ ಲೋಬೋ, ಗ್ರಾಮ ಸಂಚಾಲಕರಾದ ಕುಸುಮ ಪ್ರಶಾಂತ ಉಡುಪ, ಅಶ್ವಿನಿ ಉಪಸ್ಥಿತರಿದ್ದರು. ಕನ್ನಡ ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ನೃತ್ಯ ಲಹರಿ ನಾಟ್ಯಾಲಯ ಫಜೀರು ನಿರ್ದೇಶಕಿ ವಿದುಷಿ ರೇಷ್ಮಾ ನಿರ್ಮಲ್ ಭಟ್ ಮತ್ತು ಶಿಷ್ಯ ವೃಂದದಿಂದ ಕನ್ನಡಗೀತೆಗಳ ನೃತ್ಯಾನುಸಂಧಾನ ಕನ್ನಡ ವೈಭವ ಕಾರ್ಯಕ್ರಮ ನಡೆಯಿತು.