ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ
ಭಾರತ ಶೋಷಣೆ ಮುಕ್ತ ರಾಷ್ಟ್ರವಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಕನಸು ಕಂಡಿದ್ದರು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಧನಂಜಯ ತಿಳಿಸಿದರು.ಪಟ್ಟಣದ ದೇವರಾಜು ಅರಸು ಭವನದಲ್ಲಿ ಮಂಗಳವಾರ ತಾಲೂಕು ಆಡಳಿತ, ಪಟ್ಟಣ ಪಂಚಾಯಿತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ನಡೆದ ಡಿ.ದೇವರಾಜ ಅರಸು ಅವರ 109ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಉಪನ್ಯಾಸ ನೀಡಿ, ದೇವರಾಜ ಅರಸು ಅವರು ಅಪರೂಪದ ರಾಜಕಾರಣಿಯಾಗಿದ್ದು, ಹಿಂದಳಿದ ವರ್ಗದವರಿಗಾಗಿ ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದರು ಎಂದು ಹೇಳಿದರು.
ತಹಸೀಲ್ದಾರ್ ತನುಜ ಸವದತ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಡಿ.ದೇವರಾಜ ಅರಸು ಅವರು 1973ರಲ್ಲಿ ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ನಾಮಕರಣ ಮಾಡಿದರು. ಹಿಂದಳಿದ ವರ್ಗಗಳ ಏಳಿಗೆಗಾಗಿ ಹಾವನೂರು ಆಯೋಗ ರಚನೆ ಮಾಡುವುದರ ಜೊತೆಗೆ ಭೂ ಸುಧಾರಣೆ ಕಾಯ್ದೆ ಜಾರಿಗೆ ತಂದು ಉಳುವುವನೇ ಭೂ ಒಡೆಯ ಎಂಬ ಕ್ರಾಂತಿಕಾರಕ ಸುಧಾರಣೆ ತಂದರು ಎಂದು ತಿಳಿಸಿದರು.ಅತಿಥಿಯಾಗಿದ್ದ ತಾಪಂ ಇಒ ನವೀನ್ ಕುಮಾರ್ ಮಾತನಾಡಿ, ದೇವರಾಜ ಅರಸು ಅವರು ತಮ್ಮ ಆಡಳಿತ ಅವದಿಯಲ್ಲಿ ರಾಜ್ಯದಲ್ಲಿ ಸರಿಸುಮಾರು 16 ಸಾವಿರ ವಿದ್ಯಾರ್ಥಿ ನಿಲಯ ಪ್ರಾರಂಭಿಸಿದ್ದರು ಹಾಗೂ ಜೀತ ಪದ್ದತಿ ನಿರ್ಮೂಲನೆ, ಕನಿಷ್ಟ ಕೂಲಿ ಕಾಯ್ದೆ ಜಾರಿಗೆ ತರುವ ಮೂಲಕ ದೇಶಕ್ಕೆ ಮಾದರಿಯಾಗಿದ್ದರು ಎಂದರು.
ಸಭೆಯ ಅಧ್ಯಕ್ಷತೆಯನ್ನು ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ ಶೆಟ್ಟಿ ವಹಿಸಿದ್ದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಾಧಿಕಾರಿ ವಿ.ರಮೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅತಿಥಿಗಳಾಗಿ ಪಪಂ ಸದಸ್ಯರಾದ ಜುಬೇದ, ಸುರೈಯಾ ಭಾನು, ಮುನಾವರ್ ಪಾಷಾ, ವಾಸೀಂ, ಎಪಿಎಂಸಿ ನಿರ್ದೇಶಕ ಎಚ್.ಎಂ.ಶಿವಣ್ಣ, ವಾಲ್ಮೀಕಿ ಸಂಘದ ಕ್ಷೇತ್ರ ಅಧ್ಯಕ್ಷ ವಾಲ್ಮೀಕಿ ಶ್ರೀನಿವಾಸ್, ವಾಲ್ಮೀಕಿ ಸಂಘದ ತಾಲೂಕು ಅಧ್ಯಕ್ಷ ಮಂಜುನಾಥ್, ಪಪಂ ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್.ಮಂಜುನಾಥ್ ಇದ್ದರು.