ಕಸ, ಕಂಟಿ, ಕೊಳಚೆಯಲ್ಲಿ ಕಳೆದು ಹೋದ ಕೆರೆ!

KannadaprabhaNewsNetwork |  
Published : Apr 14, 2026, 02:30 AM IST
ರಾಣಿಬೆನ್ನೂರು ನಗರದ ಮಾದರ ಕೆರೆಯ ತುಂಬೆಲ್ಲಾ ಪಾಚಿ ಗಿಡಗಳು ಹಾಗೂ ಕೊಳಚೆ ನೀರಿನ ಜೊತೆ ಕಸದ ರಾಶಿ ತುಂಬಿರುವುದು. | Kannada Prabha

ಸಾರಾಂಶ

ನಗರದ ಮಧ್ಯಭಾಗದ ಕೋಟೆಯ ಕಾಕೋಳದವರ ಓಣಿ ಬಳಿಯ ಮಾದರ ಹೊಂಡ (ಕೆರೆ) ಅಭಿವೃದ್ಧಿಯಾಗದೇ ಕೆರೆ ತುಂಬೆಲ್ಲಾ ಕಸದ ರಾಶಿ ಜೊತೆಗೆ ಅಳೆತ್ತರದ ಗಿಡ ಗಂಟಿಗಳು ಬೆಳೆದು ಕೊಳಚೆ ಪ್ರದೇಶವಾಗಿ ಮಾರ್ಪಟ್ಟಿದೆ.

ಬಸವರಾಜ ಸರೂರ

ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು

ನಗರದ ಮಧ್ಯಭಾಗದ ಕೋಟೆಯ ಕಾಕೋಳದವರ ಓಣಿ ಬಳಿಯ ಮಾದರ ಹೊಂಡ (ಕೆರೆ) ಅಭಿವೃದ್ಧಿಯಾಗದೇ ಕೆರೆ ತುಂಬೆಲ್ಲಾ ಕಸದ ರಾಶಿ ಜೊತೆಗೆ ಅಳೆತ್ತರದ ಗಿಡ ಗಂಟಿಗಳು ಬೆಳೆದು ಕೊಳಚೆ ಪ್ರದೇಶವಾಗಿ ಮಾರ್ಪಟ್ಟಿದೆ.ಈ ಭಾಗದ ಜನರಿಗೆ, ಜಾನುವಾರುಗಳಿಗೆ ಜಲಸಂಜೀವಿನಿಯಾಗಿ ನೀರಿನ ಬವಣೆ ಈಡೇರಿಸುತ್ತ ಬಂದಿದೆ ಈ ಮಾದರ ಕೆರೆ. ಆದರೆ ಕೆಲ ವರ್ಷಗಳಿಂದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯತನದಿಂದಾಗಿ ಕೆರೆಯು ಕೊಳಚೆ ಪ್ರದೇಶವಾಗಿ ಮಾರ್ಪಟ್ಟಿದೆ, ಇದು 3.3 ಎಕರೆ ವಿಸ್ತೀರ್ಣ ಹೊಂದಿದ್ದು ಒತ್ತುವರಿ ಸಮಸ್ಯೆಯನ್ನು ಕೂಡ ಎದುರಿಸುತ್ತಿದೆ. ಒಂದು ಭಾಗದಲ್ಲಿ ಕೆರೆ ಸಂಪೂರ್ಣ ಒತ್ತುವರಿಯಾಗುತ್ತಿದ್ದು ಇನ್ನೊಂದು ಕಡೆ ಕೆರೆ ತುಂಬೆಲ್ಲಾ ಗಿಡಗಂಟಿಗಳು ಬೆಳೆದು ನಿಂತು ಅದು ಕೊಳಚೆ ಪ್ರದೇಶವಾಗಿದೆ.

ಸರ್ಕಾರ ಅಂತರ್ಜಲ ಮಟ್ಟವನ್ನು ಸುಧಾರಿಸಲು ಕೆರೆಗಳಿಗೆ ಸಾಕಷ್ಟು ಅನುದಾನವನ್ನು ಬಿಡುಗಡೆಗೊಳಿಸಿ ಅವುಗಳನ್ನು ಪುನಶ್ವೇತನಗೊಳಿಸಲು ಪ್ರಯ್ನತಿಸುತ್ತಿದೆ. ಆದರೆ ಈ ಕೆರೆ ಮಾತ್ರ ಯಾವುದೇ ಅಭಿವೃದ್ಧಿಯಾಗದೇ ಹಾಗೇ ಉಳಿದಿರುವುದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಕಾರ್ಯವೈಖರಿಗೆ ಸಾಕ್ಷಿಯಾಗಿದೆ.

ಅನುದಾನವಿದ್ದರೂ ಅಭಿವೃದ್ಧಿಯಾಗಿಲ್ಲ: ಈ ಕೆರೆಯು ಸ್ಥಳೀಯ ನಗರಸಭೆ ವ್ಯಾಪ್ತಿಗೆ ಬರುವುದರಿಂದ ಅಭಿವೃದ್ಧಿ ಹೊಣೆ ಅವರದೇ ಆಗಿದೆ. ಆದರೆ ಇಲ್ಲಿಯವರೆಗೂ ಯಾವುದೇ ಅಭಿವೃದ್ಧಿ ಕೆಲಸವಾಗಿಲ್ಲ. ಕೆರೆ ಅಭಿವೃದ್ಧಿ ಪಡಿಸುವ ಹಿನ್ನೆಲೆಯಲ್ಲಿ 2020-21ನೇ ಸಾಲಿನ 15ನೇ ಹಣಕಾಸಿನ ಅನುದಾನದಲ್ಲಿ ರು. 54 ಮೀಸಲಿಡಲಾಗಿದೆ. ಕೆರೆ ಸ್ವಚ್ಛಗೊಳಿಸುವುದು ಹಾಗೂ ಚರಂಡಿ ನೀರು ಕೆರೆಗೆ ಬಾರದ ರೀತಿಯಲ್ಲಿ ಕಾಮಗಾರಿ ನಡೆಸಲು ಯೋಜನೆ ರೂಪಿಸಲಾಗಿದೆ. ಆದರೆ ಇಲ್ಲಿಯವರಿಗೂ ಅದು ಕಾರ್ಯ ರೂಪಕ್ಕೆ ಬಂದಿಲ್ಲ. ಇನ್ನು 2021-22ನೇ ಸಾಲಿನಲ್ಲಿ ರು. 84 ಲಕ್ಷ ಅನುದಾನ ಮೀಸಲಿಡಲಾಗಿದ್ದು ಆದರೂ ಕೂಡ ಅಭಿವೃದ್ಧಿ ಮರಿಚಿಕೆಯಾಗಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.ಕೆರೆ ತುಂಬೆಲ್ಲಾ ಕಸದ ರಾಶಿ: ಸುತ್ತಮುತ್ತಲಿನ ಪ್ರದೇಶದ ಚರಂಡಿ ನೀರು ಸಂಪೂರ್ಣ ಕೆರೆಯಲ್ಲಿ ಸಂಗ್ರಹವಾಗುತ್ತಿದೆ. ಇದರಿಂದಾಗಿ ಕೆರೆಯ ತುಂಬ ಪಾಚಿ ಗಿಡ ಬೆಳೆದುಕೊಂಡಿದೆ. ನೀರಿನ ಬದಲು ಸಂಪೂರ್ಣ ಪಾಚಿ ಗಿಡ ಕಾಣತೊಡಗಿದೆ. ಅಲ್ಲದೆ ಕೆರೆಯಲ್ಲಿ ಇಳಿಯಲು ಆಗದ ಸ್ಥಿತಿಯಿದ್ದು ಕೆರೆಯ ತುಂಬೆಲ್ಲಾ ಕಸದ ರಾಶಿ ಕೂಡಿದೆ. ಕೆರೆಯ ನೀರನ್ನು ಹಲವು ವರ್ಷಗಳಿಂದ ಜನರು ಬಳಸುತ್ತಿದ್ದು. ಜಾನುವಾರುಗಳಿಗೆ ನೀರು ಕುಡಿಸಲಾಗುತ್ತಿತ್ತು. ಆದರೀಗ ಹೊಂಡ ಸುತ್ತ ಮನುಷ್ಯರು ಸುಳಿಯುವುದು ಇರಲಿ ಹಂದಿ, ನಾಯಿಗಳು ಸಹ ಸುಳಿಯದ ದುಸ್ಥಿತಿಗೆ ತಲುಪಿದೆ. ಆದ್ದರಿಂದ ಹೊಂಡ ಅಭಿವೃದ್ಧಿಗೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಸುತ್ತಲಿನ ಸಾರ್ವಜನಿಕರ ಆಗ್ರಹವಾಗಿದೆ. ಕಳೆದ ಎರಡ್ಮೂರು ವರ್ಷಗಳಿಂದ ಮಾದರ ಕೆರೆ ಅಭಿವೃದ್ಧಿ ಬಗ್ಗೆ ನಗರಸಭೆ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿಕೊಂಡರೂ ಇಲ್ಲಿಯವರಿಗೂ ಯಾವುದೇ ಸೂಕ್ತ ಕ್ರಮಕೈಗೊಂಡಿಲ್ಲ. ಕೆರೆಯೂ ಕಸದ ರಾಶಿ ಹಾಗೂ ಪಾಚಿ ಗಿಡದಿಂದ ತುಂಬಿದೆ. ಇದರಿಂದಾಗಿ ಸುತ್ತಲಿನ ಜನತೆ ಸೊಳ್ಳೆಕಾಟ, ಚರಂಡಿ ನೀರಿನ ದುರ್ವಾಸನೆಯಿಂದ ಬೇಸತ್ತು ಹೋಗಿದ್ದಾರೆ. ಕೂಡಲೇ ನಗರಸಭೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ಕೆರೆ ಅಭಿವೃದ್ಧಿಗೆ ಒತ್ತು ನೀಡಲಿ ಎಂದು ರೈತ ಮುಖಂಡ ಹನುಮಂತಪ್ಪ ಕಬ್ಬಾರ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ಯಾರಂಟಿಗಳಿಂದ ಸಾಮಾಜಿಕ, ಆರ್ಥಿಕ ಶಕ್ತಿ: ಸಿದ್ದು
ಪಶುವೈದ್ಯೆ ಸಮೀಕ್ಷಾ ಸಾವಿಗೆ ಕಾರಣವಾಗಿದ್ದ ನೀರಾನೆ ಸಾವು