ಸರ್ಕಾರಿ ಆದೇಶಗಳಿಂದ ಭಾಷೆ ಉಳಿಯುವುದಿಲ್ಲ

KannadaprabhaNewsNetwork |  
Published : Jan 18, 2025, 12:49 AM IST
ಪೊಟೊ: 17ಎಸ್‌ಎಂಜಿಕೆಪಿ11ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾಲಯದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಡೆಸಿದ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಮಾತನಾಡಿದರು. | Kannada Prabha

ಸಾರಾಂಶ

ಶಿವಮೊಗ್ಗ: ಭಾರತದಲ್ಲಿ ಕುಸಿಯುತ್ತಿರುವ ಭಾಷೆಗಳಲ್ಲಿ ಕನ್ನಡ ಮುಂಚೂಣಿಯಲ್ಲಿದೆ. ಕೇವಲ ಆದೇಶಗಳಿಂದ ಭಾಷೆ ಉಳಿಯುವುದಿಲ್ಲ. ಕನ್ನಡ ಭಾಷೆ ಉಳಿಸಲು ಕಾರ್ಯಸೂಚಿಯನ್ನು ರೂಪಿಸಿ ಅನುಷ್ಠಾನಗೊಳಿಸುವ ನೈತಿಕ ಹೊಣೆಗಾರಿಕೆ ಎಲ್ಲಾ ಕನ್ನಡಿಗರದ್ದಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಹೇಳಿದರು.

ಶಿವಮೊಗ್ಗ: ಭಾರತದಲ್ಲಿ ಕುಸಿಯುತ್ತಿರುವ ಭಾಷೆಗಳಲ್ಲಿ ಕನ್ನಡ ಮುಂಚೂಣಿಯಲ್ಲಿದೆ. ಕೇವಲ ಆದೇಶಗಳಿಂದ ಭಾಷೆ ಉಳಿಯುವುದಿಲ್ಲ. ಕನ್ನಡ ಭಾಷೆ ಉಳಿಸಲು ಕಾರ್ಯಸೂಚಿಯನ್ನು ರೂಪಿಸಿ ಅನುಷ್ಠಾನಗೊಳಿಸುವ ನೈತಿಕ ಹೊಣೆಗಾರಿಕೆ ಎಲ್ಲಾ ಕನ್ನಡಿಗರದ್ದಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಹೇಳಿದರು.

ಗುರುವಾರ ಕುವೆಂಪು ವಿಶ್ವವಿದ್ಯಾಲಯದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಡೆಸಿದ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ದಿನೇ ದಿನೇ ಕರ್ನಾಟಕದಲ್ಲಿ ಭಾಷಾಭಿಮಾನ ಕಡಿಮೆ ಆಗುತ್ತಿದೆ. ಈವರೆಗೂ ಸರ್ಕಾರ ಮೂರು ಸಾವಿರಕ್ಕಿಂತ ಹೆಚ್ಚಿನ ಕನ್ನಡಪರ ಆದೇಶಗಳನ್ನು ಹೊರಡಿಸಿದೆ. ಆದರೆ, ಅನುಷ್ಠಾನದ ಸಂದರ್ಭದಲ್ಲಿ ತೊಡಕುಗಳು ಕಂಡುಬರುತ್ತವೆ. ಕನ್ನಡ ಭಾಷೆಯಲ್ಲಿ ಕ್ರಿಯಾಶೀಲತೆ ಇಲ್ಲದಿದ್ದರೆ ಅದನ್ನು ಉಳಿಸುವುದು ಕಷ್ಟಸಾಧ್ಯವಾಗುತ್ತದೆ. ಎಲ್ಲಾ ಭಾಷೆಗಳು ಆಯಾ ಪ್ರದೇಶಗಳಲ್ಲಿ ಅಸ್ತಿತ್ವ ಉಳಿಸಿಕೊಳ್ಳುವುದು ಮುಖ್ಯ ಎಂದರು.

ಸರ್ಕಾರಿ ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಇರಲೇಬೇಕು ಎಂದು ಆದೇಶ ಹೊರಡಿಸಿದೆ. ಅದರ ಜೊತೆಗೆ ಊರಿನ ಹೆಸರು ಸೇರಿಸುವುದರಿಂದ ಕನ್ನಡ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದು ಹೇಳಿದರು.

ಕನ್ನಡ ಪ್ರಾಧಿಕಾರದ ಸದಸ್ಯ ರಾಮಚಂದ್ರ ಮಾತನಾಡಿ, ಕನ್ನಡವನ್ನು ಆಡಳಿತ ಭಾಷೆ, ಅನ್ನದ ಭಾಷೆಯನ್ನಾಗಿ ಮಾಡಬೇಕು. ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿದವರೇ ಕನ್ನಡವನ್ನು ಸರಿಯಾಗಿ ಬಳಸುತ್ತಿಲ್ಲ. ಮೊದಲು ಕನ್ನಡತನವನ್ನು ಮೈಗೂಡಿಸಿಕೊಳ್ಳಬೇಕು ಬಳಿಕ ತನ್ನಿಂತಾನೆ ಕನ್ನಡ ಆಡಳಿತ ಭಾಷೆಯಾಗುತ್ತದೆ ಎಂದರು.

ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ್ ಹಾನಗಲ್, ಫಣಿರಾಜ್, ಕುಲಪತಿ ಪ್ರೊ.ಶರತ್ ಅನಂತಮೂರ್ತಿ, ಕುಲಸಚಿವ ಎ.ಎಲ್.ಮಂಜುನಾಥ್, ಪರೀಕ್ಷಾಂಗ ಕುಲ ಸಚಿವ ಪ್ರೊ.ಎಸ್.ಎಂ.ಗೋಪಿನಾಥ್, ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

ಶಿವಮೊಗ್ಗ ಕನ್ನಡದ ಕೇಂದ್ರ ಸ್ಥಾನ

ಶಿವಮೊಗ್ಗ ಕನ್ನಡದ ಕೇಂದ್ರ ಸ್ಥಾನ. ಇಲ್ಲಿ ಪ್ರಾಮಾಣೀಕೃತ ಕನ್ನಡ ಭಾಷೆ ರೂಢಿಯಲ್ಲಿದೆ. ಅವಿಭಜಿತ ಶಿವಮೊಗ್ಗ ಇತರ ಜಿಲ್ಲೆಗಳಂತೆ ಗಡಿ ಸಮಸ್ಯೆ, ಬಹುಭಾಷೆಗಳ ಸಮಸ್ಯೆಗಳನ್ನು ಎದುರಿಸುತ್ತಿಲ್ಲ. ಕನ್ನಡದ ಬಹುದೊಡ್ಡ ಪರಂಪರೆಯನ್ನು ಹೊಂದಿರುವ ಜಿಲ್ಲೆ ಶಿವಮೊಗ್ಗ. ಕನ್ನಡದ ಮೊದಲ ಶಾಸನ ಬೆಳಕಿಗೆ ಬಂದಿದ್ದೂ ಇಲ್ಲಿಯೇ. ಇಲ್ಲಿನ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಹಾಗೂ ಮಹಾಪ್ರಬಂಧಗಳ ಕನ್ನಡ ಉತ್ಕೃಷ್ಟ ಮಟ್ಟದಲ್ಲಿ ಇರುತ್ತವೆ ಎಂದು ಕನ್ನಡ ಅಭಿವೃದ್ಧಿ ಪ್ರಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಶ್ಲಾಘಿಸಿದರು.

PREV

Latest Stories

ಏಕರೂಪ ಸಿನಿಮಾ ಟಿಕೆಟ್‌ ದರಕ್ಕೆ ಕರಡು- ಗರಿಷ್ಠ ಟಿಕೆಟ್‌ ದರ ₹200 ನಿಗದಿ
ಶಾಲೆಯಲ್ಲಿನ ಕಲುಷಿತ ಬಿಸಿಯೂಟ ಸೇವಿಸಿ 68 ವಿದ್ಯಾರ್ಥಿಗಳು ಅಸ್ವಸ್ಥ
ರಾಷ್ಟ್ರೀಯ ಲೋಕ ಅದಾಲತ್: 58.67 ಲಕ್ಷ ಕೇಸ್ ಇತ್ಯರ್ಥ