ಕಾರವಾರ: ತಾಲೂಕಿನ ಗೋಪಿಶಿಟ್ಟಾ ವಲಯ ಅರಣ್ಯ ವ್ಯಾಪ್ತಿಯ ಜರಡಿ ಎಂಬಲ್ಲಿ ಭಾನುವಾರ ರಾತ್ರಿ ಚಿರತೆ ಬಾವಿಗೆ ಬಿದ್ದು ಮೃತಪಟ್ಟಿದೆ. ರಮೇಶ ಗೋವೆಕರ ಎಂಬವರಿಗೆ ಸೇರಿದ ತೆರೆದ ಬಾವಿಯಲ್ಲಿ ಚಿರತೆ ಬಿದ್ದು ಮೃತಪಟ್ಟಿದೆ. ನಾಯಿಯನ್ನು ಅಟ್ಟಿಸಿಕೊಂಡು ಬಂದ ಚಿರತೆ ಬಾವಿಯಲ್ಲಿ ಬಿದ್ದು ಮೃತಪಟ್ಟಿರಬೇಕೆಂದು ಶಂಕಿಸಲಾಗಿದೆ.ಬಾವಿಯಲ್ಲಿ ಚಿರತೆ ಬಿದ್ದಿರುವುದು ಕಾಣಿಸುತ್ತಿದ್ದಂತೆ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಇಲಾಖೆಯ ಸಿಬ್ಬಂದಿ ಮೇಲಕ್ಕೆತ್ತಿ ಚಿರತೆಯ ಶವ ಪರೀಕ್ಷೆಗೆ ಕಳುಹಿಸಿದ್ದಾರೆ.ವ್ಯಕ್ತಿಗೆ ಹಲ್ಲೆ, ಜೀವ ಬೆದರಿಕೆ: ದೂರು ದಾಖಲು
ಭಟ್ಕಳ: ಶಾಲಾ ವಾಹನದ ಚಾಲಕನೋರ್ವ ನಡೆದು ಹೋಗುತ್ತಿದ್ದ ಮುಟ್ಟಳ್ಳಿಯ ರಾಘವೇಂದ್ರ ರಾಮಚಂದ್ರ ನಾಯ್ಕ ಎಂಬವರಿಗೆ ವಾಹನವನ್ನು ಹಾಯಿಸಲು ಬಂದಿದ್ದಲ್ಲದೇ ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿ ಜೀವದ ಬೆದರಿಕೆ ಹಾಕಿದ ಬಗ್ಗೆ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.ಟಿವಿ ಕೇಬಲ್ ಆಪರಟೇರ್ ಮತ್ತು ಬಿಜೆಪಿ ಹಿಂದುಳಿದ ವರ್ಗಗಳ ಕಾರ್ಯದರ್ಶಿಯೂ ಆಗಿರುವ ಮುಟ್ಟಳ್ಳಿಯ ರಾಘವೇಂದ್ರ ರಾಮಚಂದ್ರ ನಾಯ್ಕ ಠಾಣೆಯಲ್ಲಿ ನೀಡಿದ ದೂರಿನಲ್ಲಿ, ಸೋಮವಾರ ಮಧ್ಯಾಹ್ನ ಕೋಲಾಪೇರೆಡೆಸ್ ಹೋಟೆಲ್ ಹತ್ತಿರ ಇರುವ ಟಿವಿ ಕೇಬಲ್ ಕಚೇರಿಗೆ ಹೋಗಲು ಗೆಳೆಯನಾದ ಕುಮಾರ ಮಂಜಪ್ಪ ನಾಯ್ಕ ಹನುಮಾನ ನಗರ ಇವರ ಸಂಗಡ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಅಂಜುಮನ್ ಗರ್ಲ್ಸ ಕಾಲೇಜಿಗೆ ಸೇರಿದ ವಾಹನದ ಚಾಲಕ ಕೊಲೆ ಮಾಡುವ ಉದ್ದೇಶದಿಂದ ವಾಹನವನ್ನು ಮೈಮೇಲೆ ಹತ್ತಿಸಲು ಬಂದಾಗ ನಾನು ತಪ್ಪಿಸಿಕೊಂಡು ಬಿದ್ದಿದ್ದು, ನಂತರ ಆರೋಪಿ ತನ್ನ ವಾಹನ ನಿಲ್ಲಿಸಿ ಹತ್ತಿರ ಬಂದು ಅಡ್ಡಗಟ್ಟಿ ಇಲ್ಲಿಯೇ ಕೊಲೆ ಮಾಡುತ್ತೇನೆಂದು ಹೇಳಿದ್ದಲ್ಲದೇ ಹಲ್ಲೆ ಮಾಡಿದ್ದಾನೆ ಎಂದು ತಿಳಿಸಿದ್ದಾರೆ.ಹಲ್ಲೆಗೊಳಗಾದ ರಾಘವೇಂದ್ರ ನಾಯ್ಕ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡ ನಗರ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.