ಬೋನಿಗೆ ಬೀಳದ ಚಿರತೆ: ಅರಣ್ಯ ಅಧಿಕಾರಿಗಳಿಗೆ ಪೀಕಲಾಟ ಸಾರ್ವಜನಿಕರಿಗೆ ಸಂಕಟ

KannadaprabhaNewsNetwork | Published : Dec 14, 2024 12:45 AM

ಸಾರಾಂಶ

ಇತ್ತೀಚೆಗೆ 15 ದಿನಗಳ ಹಿಂದೆ ಚಿರತೆ ಕಾಣಿಸಿಕೊಂಡಾಗ, ಅರಣ್ಯ ಅಧಿಕಾರಿಯವರಿಗೆ ವಿಷಯ ತಿಳಿಸಿದಾಗ ಅವರು ಬಂದು ಕಬ್ಬಿನ ಗದ್ದೆ ಹತ್ತಿರ ಬೋನನ್ನು ಇಟ್ಟಿದ್ದರು. ಆದರೆ ಚಿರತೆ ನಮ್ಮ ಲ್ಯಾಬ್ರೊ ನಾಯಿ ಹಾಗೂ ಕಬ್ಬು ಕಡಿಯುವ ಕಾರ್ಮಿಕರ ಮೇಕೆಯನ್ನು ತಿಂದು ಹೋಗಿದ್ದು, ಬೋನಿಗೆ ಮಾತ್ರ ಬಿದ್ದಿಲ್ಲ .

ಮಂಡ್ಯ: ತಾಲೂಕಿನ ಗಾಣದಾಳು ಚಂದಗಾಲು ರಸ್ತೆ ಮಧ್ಯ ಭಾಗದಲ್ಲಿ (ಮುಂಡ ಬಸವೇಶ್ವರ ದೇವಸ್ಥಾನದ ಪಕ್ಕ ಹಾಗೂ ಕೋಳಿ ಫಾರಂ ಹತ್ತಿರ) ರಸ್ತೆಯಲ್ಲಿ ನಿನ್ನೆ ರಾತ್ರಿ ಚಿರತೆಯು ಮತ್ತೆ ಪ್ರತ್ಯಕ್ಷವಾಗಿದೆ. ಚಂದಗಾಲು ಗ್ರಾಮದಿಂದ ಗಾಣದಾಳು ಗ್ರಾಮಕ್ಕೆ ರಸ್ತೆಯಲ್ಲಿ ಮಧ್ಯರಾತ್ರಿ ಕಾರಿನಲ್ಲಿ ಹೋಗುತ್ತಿದ್ದಾಗ ಚಿರತೆಯು ಪ್ರತ್ಯಕ್ಷವಾಗಿದೆ ಎಂದು ಪ್ರತ್ಯಕ್ಷದರ್ಶಿ ಕೋಳಿ ಫಾರಂ ಮಾಲೀಕ ಮಲ್ಲೇಶ್ ಮಾತನಾಡುತ್ತಾ, ಇತ್ತೀಚೆಗೆ 15 ದಿನಗಳ ಹಿಂದೆ ಚಿರತೆ ಕಾಣಿಸಿಕೊಂಡಾಗ, ಅರಣ್ಯ ಅಧಿಕಾರಿಯವರಿಗೆ ವಿಷಯ ತಿಳಿಸಿದಾಗ ಅವರು ಬಂದು ಕಬ್ಬಿನ ಗದ್ದೆ ಹತ್ತಿರ ಬೋನನ್ನು ಇಟ್ಟಿದ್ದರು. ಆದರೆ ಚಿರತೆ ನಮ್ಮ ಲ್ಯಾಬ್ರೊ ನಾಯಿ ಹಾಗೂ ಕಬ್ಬು ಕಡಿಯುವ ಕಾರ್ಮಿಕರ ಮೇಕೆಯನ್ನು ತಿಂದು ಹೋಗಿದ್ದು, ಬೋನಿಗೆ ಮಾತ್ರ ಬಿದ್ದಿಲ್ಲ ಎಂದು ಹೇಳಿದರು.

ಹೊಳಲು ಗ್ರಾಮದ ರಾಮ್ ಸಿದ್ಧಯ್ಯ ಮಾತನಾಡಿ, ಹೊಳಲು ಗ್ರಾಮದ ಕೆರೆ ಏರಿಯ ಪಕ್ಕದ ಗದ್ದೆಯಲ್ಲೂ ಸಹ ಪ್ರತಿದಿನ ಬೆಳಗ್ಗೆ ಚಿರತೆಯ ಹೆಜ್ಜೆ ಗುರುತು ಪತ್ತೆಯಾಗುತ್ತದೆ ಎಂದು ತಿಳಿಸಿದರು. ವಿಷಯ ತಿಳಿದ ಮಂಡ್ಯ ಅರಣ್ಯ ಸಹಾಯಕ ಸಂರಕ್ಷಣಾಧಿಕಾರಿ ಮಹಾದೇವಸ್ವಾಮಿ ಮಾತನಾಡಿ, ನಾವು ಬೋನನ್ನು ಗದ್ದೆಯಲ್ಲಿ ಇಟ್ಟಿದ್ದೇವೆ. ನಮಗೆ ಪ್ರಾಣಿಯ ಸಂರಕ್ಷಣೆ ಹಾಗೂ ಸಾರ್ವಜನಿಕ ರಕ್ಷಣೆಯ ಬಹಳ ಮುಖ್ಯ, ನಮ್ಮ ವಲಯ ಅರಣ್ಯ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಆದ್ದರಿಂದ ಈ ದಿನ ಚಿರತೆ ಓಡಾಡುವ ಜಾಗದಲ್ಲಿ ಮತ್ತೆ ಬೋನನ್ನು ಇಟ್ಟಿದ್ದೇವೆ. ಗದ್ದೆಗೆ ನೀರು ಕಟ್ಟಲು ಬರುವ ರೈತರು ರಾತ್ರಿ ವೇಳೆ ಬರುವಾಗ ಒಬ್ಬರೇ ಬರಬಾರದು, ಟಾರ್ಚ್ ಹಾಗೂ ದೊಣ್ಣೆ ತೆಗೆದುಕೊಂಡು ಬರಬೇಕು ಹಾಗೂ ಸಾರ್ವಜನಿಕರು ರಾತ್ರಿ ವೇಳೆ ಈ ದಾರಿಯಲ್ಲಿ ಸಂಚರಿಸಬಾರದು ಎಂದು ಮನವಿ ಮಾಡಿದರು.

ಮಂಡ್ಯ ಅರಣ್ಯ ವಲಯ ಅಧಿಕಾರಿಯಾದ ಶೈಲಜಾ ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಹಾಜರಿದ್ದು, ಬೋನನ್ನು ಶಿಫ್ಟ್ ಮಾಡಲು ಸಹಕರಿಸಿದರು.

Share this article