ನಾಗರಿಕರು ಸಂಚರಿಸುವ ಕೇಂದ್ರ ಸ್ಥಳವಾದ ಹುಣಿಕೆಹಟ್ಟಿಯ ಆಂಜನೇಯಸ್ವಾಮಿ ದೇಗುಲದ ಬಳಿ ಇಟ್ಟಿದ್ದ ಬೋನಿನಲ್ಲಿ ಬುಧವಾರ ತಡರಾತ್ರಿ ಬೃಹತ್ ಗಾತ್ರದ ಚಿರತೆ ಸೆರೆಯಾಗಿರುವುದರಿಂದ ನಾಗರಿಕರು ಸ್ವಲ್ಪಮಟ್ಟಿಗೆ ನಿರಾಳವಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಮೇಲುಕೋಟೆ
ಬಹುದಿನಗಳಿಂದ ರೈತರ ಸಾಕು ಪ್ರಾಣಿಗಳು, ನಾಯಿಗಳ ಮೇಲೆ ದಾಳಿ ನಡೆಸುತ್ತಿದ್ದ ಚಿರತೆ ಕೊನೆಗೂ ಅರಣ್ಯಾಧಿಕಾರಿಗಳು ಇಟ್ಟಿದ್ದ ಬೋನಿಗೆ ಸೆರೆಯಾಗಿದೆ.
ನಾಗರಿಕರು ಸಂಚರಿಸುವ ಕೇಂದ್ರ ಸ್ಥಳವಾದ ಹುಣಿಕೆಹಟ್ಟಿಯ ಆಂಜನೇಯಸ್ವಾಮಿ ದೇಗುಲದ ಬಳಿ ಇಟ್ಟಿದ್ದ ಬೋನಿನಲ್ಲಿ ಬುಧವಾರ ತಡರಾತ್ರಿ ಬೃಹತ್ ಗಾತ್ರದ ಚಿರತೆ ಸೆರೆಯಾಗಿರುವುದರಿಂದ ನಾಗರಿಕರು ಸ್ವಲ್ಪಮಟ್ಟಿಗೆ ನಿರಾಳವಾಗಿದ್ದಾರೆ.
ಮೇಲುಕೋಟೆಯ ಯೋಗನರಸಿಂಹಸ್ವಾಮಿ ಬೆಟ್ಟದ ಹಿಂಭಾಗದ ಬಂಡೆಗಳ ಮೇಲೆ ನಾಲ್ಕೈದು ಚಿರತೆಗಳು ರೈತರಿಗೆ ಕಾಣಿಸಿಕೊಳ್ಳುತ್ತಿದ್ದವಾದರೂ ಮೇಲುಕೋಟೆ ಊರಿನೊಳಗೆ ಬಂದು ದಾಳಿ ಮಾಡುತ್ತಿರಲಿಲ್ಲ. ಆದರೆ, ನಿನ್ನೆ ಸೆರೆಸಿಕ್ಕ ದೊಡ್ಡಗಾತ್ರದ ನಾಲ್ಕೈದು ವರ್ಷದ ಗಂಡುಚಿರತೆ ಮಾತ್ರ ಪದೇ ಪದೇ ಹೊರವಲಯದಲ್ಲಿ ಹೊಂಚುಹಾಕಿ ಆಡು, ಕುರಿ ಹಾಗೂ ನಾಯಿಗಳನ್ನು ಹೊತ್ತೊಯ್ಯುದು ತಿಂದು ಹಾಕಿ ರೈತರ ಆತಂಕಕ್ಕೆ ಕಾರಣವಾಗಿತ್ತು.
ಕಳೆದ ಹತ್ತು ದಿನಗಳ ಹಿಂದೆ ದೇವರ ಕರುವನ್ನು ಹಿಡಿದು ಹೊತ್ತೊಯ್ದಿತ್ತು. ಈ ಕಾರಣ ನಾಗರಿಕರು ದಾಳಿ ಮಾಡುತ್ತಿರುವ ಚಿರತೆ ಹಿಡಿಯಬೇಕು ಎಂದು ಒತ್ತಾಯಿಸಿದ್ದರು. ಮೇಲುಕೋಟೆ ವಲಯ ಅರಣ್ಯ ಕಚೇರಿ ಸಿಬ್ಬಂದಿ ಆಂಜನೇಯಸ್ವಾಮಿ ದೇವಾಲಯದ ಬಳಿ ಬೋನ್ ಇಟ್ಟಿದ್ದರು.
10 ದಿನಗಳಾದರೂ ಬೋನಿನತ್ತ ಸುಳಿಯದ ಚಿರತೆ ಬುಧವಾರ ರಾತ್ರಿ ಬೋನಿನಲ್ಲಿ ಸೆರೆಯಾಯಿತು. ಮಾಹಿತಿ ತಿಳಿಯುತ್ತಿದ್ದಂತೆ ಬೋನಿನಲ್ಲಿ ಸೆರೆಯಾದ ಚಿರತೆಯನ್ನು ನೋಡಲು ಗುರವಾರ ಮುಂಜಾನೆಯೇ ನೂರಾರು ಸಂಖ್ಯೆಯಲ್ಲಿ ನಾಗರಿಕರು ಜಮಾಯಿಸಿದ್ದರು. ನಾಗರಿಕರನ್ನು ನಿಯಂತ್ರಿಸಿ ಟೆಂಪೋದಲ್ಲಿ ಚಿರತೆಯನ್ನು ಸಾಗಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಬಂಡೀಪುರ ಅರಣ್ಯಕ್ಕೆ ಬೀಡುವುದಾಗಿ ಮಾಹಿತಿ ನೀಡಿದ್ದಾರೆ.
ಮೇಲುಕೋಟೆ ಸುತ್ತಮುತ್ತ ಇನ್ನೂ ಸಾಕಷ್ಟು ಚಿರತೆಗಳು ಓಡಾಡುತ್ತಿವೆ. ನಾಗರಿಕರು ಜಾಗೃತೆಯಾಗಿರಬೇಕು ಜಾನುವಾನುರುಗಳನ್ನು ಹೊರಭಾಗ ಕಟ್ಟಿಹಾಕುವ ಬದಲು ಸುರಕ್ಷಿತ ಕೊಟ್ಟಿಗೆ ಮಾಡಿ ಕಟ್ಟಿಹಾಕಬೇಕು ಎಂದು ಅರಣ್ಯ ಇಲಾಖಾಧಿಕಾರಿಗಳು ತಿಳಿಸಿದ್ದಾರೆ.
ಚಿರತೆ ಸೆರೆಹಿಡಿಯುವ ಕಾರ್ಯಾಚರಣೆಯವ್ವಿ ವಲಯ ಅರಣ್ಯಾಧಿಕಾರಿ ಅನಿತಾ, ಉಪವಲಯ ಅರಣ್ಯಾಧಿಕಾರಿ ಧರ್ಮೇಂದ್ರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ರೂಪಿಸಿ ಬೀಟ್ ಪಾರೆಸ್ಟರ್ ಕೊಟ್ರೇಶ್ ಪೂಜಾರ ಮತ್ತು ಸಿಬ್ಬಂದಿ ಚಿರತೆ ಹಿಡಿಯಲು ಬೋನ್ ಇರಿಸಿದ್ದರು. ಮೇಲುಕೋಟೆ ವ್ಯಾಪ್ತಿಯಲ್ಲಿ ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಸೆರೆ ಸಿಕ್ಕ ಎರಡನೇ ಚಿರತೆಯಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.