ಮೈಸೂರು : ಕಿಡಿಗೇಡಿಗಳ ಕೃತ್ಯದಿಂದ ಚಾಮುಂಡಿಬೆಟ್ಟದಲ್ಲಿ ಹೊತ್ತಿಕೊಂಡಿದ್ದ ಬೆಂಕಿಯನ್ನು ನಂದಿಸಲಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಅರಣ್ಯ ಇಲಾಖೆಯಿಂದ ಚಾಮುಂಡಿಬೆಟ್ಟದಲ್ಲಿ ನಿಗಾ ವಹಿಸಲಾಗಿದೆ ಎಂದು ಮೈಸೂರು ವಲಯ ಡಿಸಿಎಫ್ ಡಾ.ಕೆ.ಎನ್. ಬಸವರಾಜ ತಿಳಿಸಿದರು.ನಗರದ ಅರಣ್ಯ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿ ಮಾತನಡಿದ ಅವರು, ಚಾಮುಂಡಿಬೆಟ್ಟಕ್ಕೆ ಕಿಡಿಗೇಡಿಗಳ ಕೃತ್ಯದಿಂದ ಬೆಂಕಿ ಬಿದ್ದು ಸುಮಾರು 35 ಎಕರೆ ಅರಣ್ಯ ನಾಶವಾಗಿದೆ.
ಸತತ ಪರಿಶ್ರಮದಿಂದ ಬೆಂಕಿ ನಂದಿಸಲು ಯಶಸ್ವಿಯಾಗಿದ್ದು, ಯಾವುದೇ ವನ್ಯಜೀವಿಗಳ ಪ್ರಾಣ ಹಾನಿಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.ಶುಕ್ರವಾರ ಮಧ್ಯಾಹ್ನ 12.30ಕ್ಕೆ ಚಾಮುಂಡಿಬೆಟ್ಟದ ಬೆಂಟೆ ಹಳ್ಳ ಮತ್ತು ಗೊಲ್ಲ ಹಳ್ಳ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಟ್ಟ ಕುರುಚಲು ಕಾಡಿನಿಂದ ಆವೃತವಾಗಿದ್ದು, ಬೇಸಿಗೆ ಹಿನ್ನೆಲೆ ಗಿಡಗಂಟಿಗಳು ಮತ್ತು ಹುಲ್ಲುಗಾವಲು ಒಣಗಿದ್ದರಿಂದ ಬೆಂಕಿ ವೇಗವಾಗಿ ಎಲ್ಲೆಡೆ ವ್ಯಾಪಿಸಿದೆ. ಬೆಟ್ಟದ ಕಣಿವೆ ಭಾಗಕ್ಕೆ ಬೆಂಕಿ ಬಿದ್ದಿದ್ದರಿಂದ ಗಾಳಿಯ ವೇಗ 35 ಕಿ.ಮೀ. ಇದ್ದಿದ್ದರಿಂದ ಬೆಂಕಿಯ ಕೆನ್ನಾಲಿಗೆ ಮತ್ತಷ್ಟು ಹೆಚ್ಚಾಗಿದೆ.
ಈ ಸಂದರ್ಭ ಅಗ್ನಿಶಾಮಕ ಅಧಿಕಾರಿಗಳು ಮತ್ತು ಸಿಬ್ಬಂದಿ ಪರಿಶ್ರಮದಿಂದ ರಾತ್ರಿ 11.30 ರವರೆಗೂ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಲಾಗಿದೆ ಎಂದು ಅವರು ಹೇಳಿದರು.
ಬೆಟ್ಟದಲ್ಲಿ 65 ಕಿ.ಮೀ. ರಸ್ತೆ ಮಾರ್ಗವಿದ್ದು, ಪ್ರತಿವರ್ಷ ರಸ್ತೆ ಬದಿಯಲ್ಲಿ ಬೆಂಕಿ ರೇಖೆ ನಿರ್ಮಿಸಲಾಗುತ್ತಿದೆ. ಈ ವರ್ಷ ಹೆಚ್ಚುವರಿಯಾಗಿ 5 ಕಿ.ಮೀ. ಬೆಂಕಿ ರೇಖೆ ನಿರ್ಮಿಸಲಾಗಿತ್ತು. ಜೊತೆಗೆ ಬೆಟ್ಟದಲ್ಲಿ ಮೂರು ಕಡೆ ವಾಚಿಂಗ್ ಟವರ್ ಇದ್ದು, ಯಾವುದೇ ಬೆಂಕಿ ಅವಘಡ ಆಗದಂತೆ ಎಚ್ಚರಿಕೆ ವಹಿಸಲಾಗಿತ್ತು ಎಂದರು.ಗಾಳಿಯ ವೇಗಕ್ಕೆ ತಕ್ಕಂತೆ ಬೆಂಕಿಯೂ ಹರಡಿದ್ದರಿಂದ ಬೆಟ್ಟದ ಕಡಿದಾದ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಲು ಸಾಧ್ಯವಾಗಲಿಲ್ಲ. 9 ಅಗ್ನಿಶಾಮಕ ವಾಹನಗಳ ಸಹಾಯದಿಂದ ಶುಕ್ರವಾರ ರಾತ್ರಿ 11.30ರ ಹೊತ್ತಿನಲ್ಲಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದೇವೆ. ಜೊತೆಗೆ ಇಲಾಖೆಯ ಮೂರು ತಂಡ ಬೆಂಕಿ ಬಿದ್ದ ಸ್ಥಳದಲ್ಲಿ ಹೊಸ ಬೆಂಕಿ ಉತ್ಪತ್ತಿಯಾಗದಂತೆ ಮುನ್ನೆಚ್ಚರಿಕೆಯಾಗಿ ಪರಿಶೀಲನೆ ನಡೆಸುತ್ತಿದೆ. ಹಾಗೆಯೇ ಡ್ರೋನ್ ಸಹಾಯದಿಂದ ಪರಿಶೀಲಿಸಿದ್ದು, ಬೆಂಕಿಯಾಡುತ್ತಿರುವ ಪ್ರದೇಶ ಕಂಡು ಬಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ವನ್ಯಜೀವಿಗಳಿಗೆ ಹಾನಿಯಾಗಿಲ್ಲಬೆಂಕಿ ಅವಘಡದಲ್ಲಿ ಎರಡು ನೀಲಗಿರಿ ಮರ ಸಂಪೂರ್ಣ ಸುಟ್ಟು ಹೋಗಿವೆ. ಉಳಿದಂತೆ ಕಳೆ, ಗಿಡಗಂಟಿಗಳು ಸುಟ್ಟಿವೆ. ಕಡವೆ, ಜಿಂಕೆ, ಚಿರತೆ ಸೇರಿದಂತೆ ಪಕ್ಷಿ ಹಾಗೂ ಸರಿಸ್ಕೃಪಗಳು ಇದ್ದು, ಬೆಂಕಿಯಿಂದ ಯಾವುದೇ ಅನಾಹುತವಾಗಿಲ್ಲ. ಮುಂಜಾನೆಯಿಂದ ಇಲಾಖೆ ಸಿಬ್ಬಂದಿ ಬೆಂಕಿ ಬಿದ್ದ ಸ್ಥಳವನ್ನು ಪರಿಶೀಲಿಸಿದ್ದು, ಯಾವ ಪ್ರಾಣಿಗಳ ಕಳೇಬರ ಪತ್ತೆಯಾಗಿಲ್ಲ ಎಂದು ಅವರು ತಿಳಿಸಿದರು. ಎರಡು ಚಿರತೆ, 2 ಮರಿ ಪ್ರತ್ಯಕ್ಷೆಬೆಟ್ಟದಲ್ಲಿ 5 ಚಿರತೆಗಳಿರುವುದು ವರದಿಯಾಗಿತ್ತು.
ಬೆಂಕಿ ಅವಘಡದ ಬಳಿಕ ದೇವಿಕೆರೆ ಹಿಂಭಾಗ ಶನಿವಾರ ಮುಂಜಾನೆ ಎರಡು ದೊಡ್ಡ ಚಿರತೆಗಳೊಂದಿಗೆ 2 ಮರಿ ಚಿರತೆಗಳು ಕಾಣಿಸಿಕೊಂಡಿವೆ. ಈ ಮೂಲಕ ಬೆಂಕಿಯಿಂದ ಯಾವುದೇ ವನ್ಯಜೀವಿಗೆ ಹಾನಿಯಾಗಿಲ್ಲ ಎಂದರು.ಚಾಮುಂಡಿಬೆಟ್ಟ ಮೀಸಲು ಅರಣ್ಯ 1516 ಎಕರೆ ವಿಶಾಲ ಪ್ರದೇಶ ಹೊಂದಿದ್ದು, ಶುಕ್ರವಾರದ ಅಗ್ನಿ ಅವಘಡದಿಂದ 35 ಎಕರೆಗೂ ಹೆಚ್ಚು ಅರಣ್ಯ ನಾಶವಾಗಿದೆ. 2019- 20 ರಲ್ಲಿ ಬೆಟ್ಟಕ್ಕೆ ಬೆಂಕಿ ಬಿದ್ದು, ಆಗ 70 ಎಕರೆಯಷ್ಟು ಅರಣ್ಯ ನಾಶವಾಗಿತ್ತು.
ಜಾನುವಾರುಗಳು ಮತ್ತು ಮನುಷ್ಯರ ಅಕ್ರಮ ಪ್ರವೇಶವನ್ನು ತಡೆಯುವ ಸಲುವಾಗಿ ಬೆಟ್ಟದ ಸುತ್ತ ಕಾಂಪೌಂಡ್ ನಿರ್ಮಿಸಲಾಗುತ್ತಿದೆ. ಬೆಟ್ಟದ ಅರಣ್ಯ ಪ್ರದೇಶ 15 ಕಿ.ಮೀ. ಸರಹದ್ದು ಹೊಂದಿದ್ದು, ಈಗಾಗಲೇ 550 ಮೀಟರ್ ತಡೆಗೋಡೆ ನಿರ್ಮಿಸಲಾಗಿದೆ. 250 ಮೀಟರ್ ತಡೆಗೋಡೆ ನಿರ್ಮಾಣಕ್ಕೆ ಟೆಂಡರ್ ಆಗಿದ್ದು, ಉಳಿದ ಜಾಗದಲ್ಲೂ ಕಾಂಪೌಡ್ ನಿರ್ಮಿಸಲಾಗುವುದು ಎಂದು ಅವರು ವಿವರಿಸಿದರು
ನಿಯಮ ಉಲ್ಲಂಘಿಸಿದರೆ ದಂಡಬೆಟ್ಟದಲ್ಲಿ ರಸ್ತೆ ಬಿಟ್ಟು ಅರಣ್ಯ ಪ್ರದೇಶದೊಳಗೆ ತೆರಳುವುದು, ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿ ಆಹಾರ ಸೇವಿಸುವುದು, ಬೀಡಿ, ಸಿಗರೇಟ್, ಮದ್ಯಪಾನ ಮಾಡುವವರಿಗೆ ದಂಡ ವಿಧಿಸಲಾಗುತ್ತಿದೆ. ಬೆಟ್ಟಕ್ಕೆ ನಾಲ್ಕು ಕಡೆಗಳಿಂದ ಪ್ರವೇಶವಿದ್ದು, ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆವರೆಗೆ ಮುಖ್ಯ ದ್ವಾರ ಹೊರತುಪಡಿಸಿ ಉಳಿದ ಮೂರು ಪ್ರವೇಶ ರಸ್ತೆಗಳನ್ನು ಬಂದ್ ಮಾಡಲಾಗುತ್ತಿದೆ. ಇದೀಗ ಬೆಂಕಿ ಬಿದ್ದು ಅರಣ್ಯ ನಾಶವಾಗಿರುವುದಿಂದ ಸಂಜೆ 6 ಗಂಟೆಯಿಂದಲೇ ಬಂದ್ ಮಾಡುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಡಿಸಿಎಫ್ ಡಾ.ಕೆ.ಎನ್. ಬಸವರಾಜ ತಿಳಿಸಿದರು.ಬೆಟ್ಟಕ್ಕೆ 4 ಕಡೆ ಪ್ರವೇಶವಿದೆ. ಎಲ್ಲವನ್ನೂ ನಾವು ಮಾನಿಟರ್ ಮಾಡುವುದು ಕಷ್ಟವಾಗಿದೆ. ಚಾಮುಂಡಿಬೆಟ್ಟ ಪವಿತ್ರ ಸ್ಥಳ ಮಾತ್ರವಲ್ಲ ಮೀಸಲು ಅರಣ್ಯ ಪ್ರದೇಶವೂ ಹೌದು. ಭಕ್ತರು, ಸಾರ್ವಜನಿಕರು ಬೀಡಿ, ಸಿಗರೇಟ್ ಸೇದಿ ಎಸೆಯುವುದು, ಬೆಂಕಿ ಹಚ್ಚುವ ಕೆಲಸ ಮಾಡಬೇಡಿ. ದೈವ ಸನ್ನಿದಿಯ ಪಾವಿತ್ರ್ಯತೆ ಕಾಪಾಡಿಕೊಳ್ಳಿ ಎಂದು ಅವರು ಮನವಿ ಮಾಡಿದರು.
ಚಾಮುಂಡಿಬೆಟ್ಟ ಅರಣ್ಯ ಪ್ರದೇಶಗಳಿಗೆ ಬಂದು ಒಂದೇ ಸಮಯದಲ್ಲಿ ಕಿಡಿಗೇಡಿಗಳು ಎರಡು ಕಡೆ ಬಿಂಕಿ ಹಚ್ಚಿದ್ದಾರೆ. ಇಲಾಖೆ ಮಾಹಿತಿ ಪ್ರಕಾರ ದನಗಾಹಿಗಳು ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದು ಬಂದಿದೆ. ಹೊಸ ಹುಲ್ಲು ಬರಲೆಂದು ಒಣ ಹುಲ್ಲಿಗೆ ಬೆಂಕಿ ಹಚ್ಚಿರುವ ಸಾಧ್ಯತೆ ಇದೆ. ಹೀಗಾಗಿ, ದನಗಾಹಿಗಳ ಚಲನವನದ ಮೇಲೆ ನಿಗಾ ವಹಿಸಿದ್ದು, ಕಿಡಿಗೇಡಿಗಳ ಬಂಧನಕ್ಕೆ ಕ್ರಮ ವಹಿಸಲಾಗಿದೆ.
- ಡಾ.ಕೆ.ಎನ್. ಬಸವರಾಜ, ಡಿಸಿಎಫ್