ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
9 ಸೇತುವೆ ಜಲಾವೃತ:
ಘಟಪ್ರಭಾ ನದಿಗೆ ಶುಕ್ರವಾರ ರಾತ್ರಿ ದುಪದಾಳ ಮಾರ್ಕಂಡೇಯ, ಬಳ್ಳಾರಿ ನಾಲಾದಿಂದ 60000 ಅಧಿಕ ಕ್ಯುಸೆಕ್ ನೀರು ಹರಿಬಿಟ್ಟ ಹಿನ್ನೆಲೆ ಘಟಪ್ರಭಾ ನದಿ ಪಾತ್ರದ ಹಳ್ಳಿಗಳು ಜಲಾವೃತ್ತವಾಗಿವೆ. ರಬಕವಿ ಬನಹಟ್ಟಿ ತಾಲೂಕಿನ ನಂದಗಾಂವ ಗ್ರಾಮ ಜಲದಿಗ್ಭಂಧನಕ್ಕೆ ಒಳಪಟ್ಟಿದೆ. ಜನ ಜಾನುವಾರುಗಳ ಸುರಕ್ಷತೆ ಬಹಳ ಮುಖ್ಯ ಅದಕ್ಕಾಗಿ ಕಾಳಜಿ ಕೇಂದ್ರ ತೆರೆದಿದ್ದು ಜನರು ಸಹಕರಿಸಲು ಕೋರಲಾಗಿದೆ.ನಂದಗಾಂವ-ಅವರಾದಿ ಧವಳೇಶ್ವರ-ಢವಳೇಶ್ವರ ಮಿರ್ಜಿ-ಅಕ್ಕಿಮರಡಿ ಹೊಸ ಸೇತುವೆ ಸೇರಿದಂತೆ ಮೂರು ಸೇತುವೆಗಳು ಹಾಗೂ ಮುಧೋಳ ತಾಲೂಕಿನ 6 ಸೇತುವೆಗಳು ಸೇರಿ ಒಟ್ಟು ಒಂಬತ್ತು ಸೇತುವೆಗಳು ಸಂಪೂರ್ಣ ಜಲಾವ್ರತ್ತವಾಗಿವೆ.
ಸೇತುವೆಗಳು ಜಲಾವೃತ್ತ ಆಗಿರುವುದರಿಂದ ಮುಧೋಳ ತಾಲೂಕಿನ ಮಿರ್ಜಿ, ಒಂಟಗೋಡಿ, ಚನ್ನಾಳ, ಮಲ್ಲಾಪುರ, ಬೆಳಗಾವಿ ಜಿಲ್ಲೆಯ ಗಡಿಭಾಗ ಮೂಡಲಗಿ ತಾಲೂಕಿನ ಡವಳೇಶ್ವರ, ಬಿಸನಕೊಪ್ಪ, ಹುಣಶ್ಯಾಳ ಪಿ ವೈ, ವೆಂಕಟಾಪುರ, ಅವರಾದಿ, ಆಳ್ಳಿಮಟ್ಟಿ, ಯರಗುದ್ರಿ, ತಿಮ್ಮಾಪುರ, ಹೊಸ ಯರಗುದ್ರಿ, ಕುಲಗೋಡ, ಕೌಜಲಗಿ, ಯಾದವಾಡ ಗ್ರಾಮಗಳ ಸಂಪರ್ಕ ಕಡಿತವಾಗಿದ್ದು ಜನರು ತೊಂದರೆ ಅನುಭವಿಸುತ್ತಿದ್ದಾರೆ.
ಸ್ಥಳಾಂತರಕ್ಕೆ ಸೂಚನೆ:
ರಬಕವಿ ಬನಹಟ್ಟಿ ತಹಶೀಲ್ದಾರ್ ಗಿರೀಶ ಸ್ವಾದಿ ನೋಡಲ್ ಅಧಿಕಾರಿ ವೆಂಕಟೇಶ್ ಬೆಳಗಲ, ಠಾಣಾಧಿಕಾರಿ ಪ್ರವೀಣ್ ಬೀಳಗಿ ತಾಪಂ ಅಧಿಕಾರಿ, ಗ್ರಾಮ ಲೆಕ್ಕಾಧಿಕಾರಿಗಳು ಪಿಡಿಒ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು ಪರಿಸ್ಥಿತಿ ನಿಭಾಯಿಸಲು ತಿಳಿಸಿದ್ದಾರೆ.
ವೈಜ್ಞಾನಿಕ ರೀತಿ ಸ್ಥಳಾಂತರ:
ಡವಳೇಶ್ವರ ಗ್ರಾಮದಲ್ಲಿ ನದಿ ನೀರು ಲಕ್ಷ್ಮಿ ಗುಡಿಯವರೆಗೆ ಬಂದಿದಿದ್ದು ನೂರಾರು ಮನೆಗಳು ಜಲಾವೃತವಾಗಿವೆ. ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಬೇಕಾದ ಅವಶ್ಯಕತೆ ಇದೆ. ಇಲ್ಲಿಯೂ ಕಾಳಜಿ ಕೇಂದ್ರ ತೆರೆಯಬೇಕು ಎಂದು ಸ್ಥಳೀಯರ ಆಗ್ರಹವಾಗಿದೆ. ಜನ ಜಾನುವಾರ ಸಂಕಷ್ಟಕ್ಕೆ ಸಿಲುಕಿವೆ. ತಕ್ಷಣ ಪರಿಹಾರಕ್ಕಾಗಿ ಒಕ್ಕೊರಲಿನ ಮನವಿ ಮಾಡಿದ್ದಾರೆ.
ಸಮೀಕ್ಷೆಗೆ ಆಗ್ರಹ:
ಪ್ರವಾಹ ಪೀಡಿತ ಪ್ರದೇಶವನ್ನು ನಿಖರವಾಗಿ ಸಮೀಕ್ಷೆ ಮಾಡಿ ಪ್ರವಾಹ ಪೀಡಿತ ರೈತರಿಗೆ ಸೂಕ್ತ ಸ್ಪಂದಿಸಲು ಸರ್ಕಾರಕ್ಕೆ ಸಂತ್ರಸ್ತರ ಆಗ್ರವಾಗಿದೆ.ಈಚೆಗೆ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಅವರು ನಂದಗಾಂವ, ಢವಳೇಶ್ವರ, ಮಿರ್ಜಿ ಗ್ರಾಮಗಳ ನದಿ ತಟದ ಸಂತ್ರಸ್ತರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರವಾಹ ಸಂತ್ರಸ್ತರು ಯಾವುದೇ ಕಾರಣಕ್ಕೂ ಹೆದರುವ ಅವಶ್ಯಕತೆ ಇಲ್ಲ. ಸರ್ಕಾರ ಈಗಾಗಲೇ ಎಲ್ಲ ವ್ಯವಸ್ಥೆಗಳನ್ನು ಮಾಡಿದೆ. ಸದ್ಯಕ್ಕೆ ಕಾಳಜಿ ಕೇಂದ್ರಗಳಲ್ಲಿ ಎಲ್ಲರೂ ವಾಸ ಮಾಡಬೇಕು. ಬೇರೆ ಕಡೆ ಜಾಗ ಇರುವವರು ಅಲ್ಲಿ ಇರಬಹುದು ಎಂದರು.
---ಕೋಟ್:
ಜನ ಮತ್ತು ಜಾನುವಾರಗಳ ಸುರಕ್ಷತೆ ದೃಷ್ಟಿಯಿಂದ ಈಗಾಗಲೇ ಕಾಳಜಿ ಕೇಂದ್ರ ತೆರೆಯಲಾಗಿದೆ. ಅಲ್ಲಿ ಸೂಕ್ತ ಅನುಕೂಲಗಳನ್ನು ಮಾಡಲಾಗಿದೆ. ಜನರು ಯಾವುದೇ ರೀತಿಯಲ್ಲಿ ಭಯ ಭೀತರಾಗಬಾರದು.-ಶ್ವೇತಾ ಬಿಡೀಕರ, ಜಮಖಂಡಿ ವಿಭಾಗದ ಎಸಿ