ಕನ್ನಡಪ್ರಭ ವಾರ್ತೆ ಕಲಬುರಗಿ
ಕಲಬುರಗಿ ಮಹಾನಗರ ಪಾಲಿಕೆಯ ಮುಂದುವರಿದ ಸಾಮಾನ್ಯ ಸಭೆಯಲ್ಲಿ ಪೌರ ಕಾರ್ಮಿಕರ ಸೇವಂ ಕಾಯಂ ಮಾಡುವ ವಿಷಯದಲ್ಲಿನ ಲೋಪಗಳು, ಇಡೀ ಪ್ರಕ್ರಿಯೆ 3 ವರ್ಷದಿಂದ ವಿಳಂಬವಾಗುತ್ತಿರೋದನ್ನ ಪ್ರಸ್ತಾಪಿಸಿದ ಸದಸ್ಯರು ಸದರಿ ವಿಷಯದ ಬಿಸಿಬಿಸಿ ಚರ್ಚೆಗೆ ಕಾರಣರಾದರು.ಶುಕ್ರವಾರ ಬೆ.11ಕ್ಕೆ ಸಭೆ ಶುರುವಾಗುತ್ತಿದ್ದಂತೆಯೇ ಹಿರಿಯ ಸದಸ್ಯ ಯಲ್ಲಪ್ಪ ನಾಯಿಕೋಡಿ, ವಿಪಕ್ಷ ನಾಯಕ ಕೃಷ್ಣ ನಾಯಕ್ , ಕಾಂಗ್ರೆಸ್‌ನ ಸಚೀನ್ ಶಿರವಾಳ್, ಬಿಜೆಪಿಯ ವಿಜಯಕುಮಾರ್ ಸೇವಲಾನಿ ಸೇರಿದಂತೆ ಅನೇಕ ಸದಸ್ಯರು ಸೇವಾ ಭದ್ರತೆ, ನೇಮಕಾತಿ ವಿಚಾರದಲ್ಲಿನ ಗೊಂದಲಗಳಿಂದಾಗಿ ಧರಣಿ ನಡೆಸಿರುವ ಪೌರ ಕಾರ್ಮಿಕರ ಕಾಯಂಮಾತಿ ವಿಷಯ ಪ್ರಸ್ತಾಪಿಸಿ ಅಧಿಕಾರಿಗಳಿಂದ ಮಾಹಿತಿ ಬಯಸಿದರು.
ಪೌರ ಕಾರ್ಮಿಕರ ನೇಮಕಾತಿಗೆ 6.12.2018ರಂದು ಹೊರಬಿದ್ದ ಅಧಿಸೂಚನೆಯಿಂದ ಹಿಡಿದು ಇಲ್ಲಿಯವರೆಗೂ ಏನೆಲ್ಲಾ ಬೆಳವಣಿಗೆಗಳು ನಡೆದಿವೆ ಎಂಬುದನ್ನು ಪರಿಸರ ಎಂಜಿನಿಯರ್ ಮುನಾಫ್ ಪಟೇಲ್ ಸಭೆಗೆ ಗಮನಕ್ಕೆ ತರುತ್ತಿರುವಂತೆಯೇ ಪ್ರಶ್ನೆಗಳ ಸುರಿಮಳೆಗರೆದ ಸದಸ್ಯರು ನೇಮಕಾತಿಯಲ್ಲಿ ಹಗರಣವಾಗಿದೆ, ಕೆಟಗರಿ ಪಾಲನೆಯಾಗಿಲ್ಲ, ಸತ್ತವರ ಹೆಸರು ಪ್ರತ್ಯಕ್ಷವಾಗಿವೆ ಎಂದು ಹೇಳುತ್ತ ಪ್ರಾದೇಶಿಕ ಆಯುಕ್ತರು ಈ ವಿಚಾರದಲ್ಲಿ ಸರಕಾರದ ಗಮನ ಸೆಳೆದು ಬರೆದ ಪತ್ರವನ್ನು ಓದುತ್ತ ಸಂಬಂಧಪಟ್ಟಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹಿಸಿದರು.ನೇಮಕಾತಿ ಪ್ರಮಾದಕ್ಕೆ ಕಾರಣರಾದವರ ವಿರುದ್ಧ ಕ್ರಮ ಯಾಕಿಲ್ಲ:
ಪಾಲಿಕೆಯ ಪೌರ ಕಾರ್ಮಿಕರ ನೇಮಕಾತಿಗೆ 2018ರಲ್ಲಿ ಅಂದಿನ ಡಿಸಿ ಕೈಗೊಂಡಿರುವ ಕ್ರಮಗಳು ಪಾರದರ್ಶಕವಾಗಿಲ್ಲ. ಸರ್ಕಾರದ ನಿಬಂಧನೆಗೆ ಒಳಪಟ್ಟಿಲ್ಲ. ಇದರಿಂದ ಅರ್ಹರಿಗೆ ಅನ್ಯಾಯವಾಗಿದೆ. ಹೀಗಾಗಿ ಸದರಿ ನೇಮಕಾತಿ ಪ್ರಕ್ರಿಯೆಯಲ್ಲಿ 6.4.2021ರಂದು ಪ್ರಕಟಿಸಲಾಗಿರುವ ತಾತ್ಕಾಲಿಕ ಆಯ್ಕೆಪಟ್ಟಿ ರದ್ದುಪಡಿಸಬೇಕು. ಈ ರೀತಿ ಪ್ರಮಾದಗಳು ಆಗಲು ಕಾರಣರಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪ್ರಾದೇಶಿಕ ಆಯುಕ್ತರು ಸರ್ಕಾರಕ್ಕೆ ಬರದೆ ಪತ್ರದಲ್ಲಿ ಸ್ಪಷ್ಟವಾಗಿ ನಮೂದಿಸಿದ್ದಾರೆ.ಈ ಪತ್ರದ ಮೇಲೆಯೇ ಪೌರಾಡಳಿತ ನಿರ್ದೇಶನಾಲಯ ಕಳುಹಿಸಿದ್ದ ಪರಿಶೀಲನಾ ತಂಡದ ಸದಸ್ಯರು ಸಹ ದೋಷಗಳನ್ನು ಪಟ್ಟಿ ಮಾಡಿದ್ದಾರೆ. ಇಂತಹ ದೋಷಪೂರಿತ ನೇಮಕಾತಿಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಪ್ರಸ್ತಾವನೆ ಸಲ್ಲಿಸಲು ಕೋರಿದ್ದರೂ ಪಾಲಿಕೆ ಇದನ್ನು ಕಡೆಗಣಿಸಿದೆ ಎಂದು ಸಚೀನ್ ಶಿರವಾಳ್, ವಿಜಯ ಸೇವಲಾನಿ, ಕೃಷ್ಣ ನಾಯಕ್, ಯಲ್ಲಪ್ಪ ನಾಯಿಕೋಡಿ ಸೇರಿದಂತೆ ಅನೇಕರು ವಾಗ್ದಾಳಿ ನಡೆಸಿದರು.
ನಮಗೆ ಪೌರಕಾರ್ಮಿಕರು ಮುಖ್ಯ, ಅಧಿಕಾರಿಗಳಲ್ಲ:ಪಾಲಿಕೆಯ ಪೌರ ಕಾರ್ಮಿಕರ ನೇಮಕಾತಿಯಲ್ಲಿ ವಿಶೇಷ ನಿಯಮಗಳನ್ನು ಪರಿಗಣಿಸಿ ಅರ್ಹತೆ ಇದ್ದವರನ್ನು ಮಾತ್ರ ಪರಿಗಣಿಸಬೇಕು, ಅನರ್ಹರನ್ನು ಪಟ್ಟಿಯಿಂದ ಕೈಬಿಡಬೇಕು, ಸದರಿ ಲೋಪಗಳಿರುವ ತಾತ್ಕಾಲಿಕ ಆಯ್ಕೆಪಟ್ಟಿ ಹೊರಬರಲು ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಕೂಡಲೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಪೌರಾಡಳಿತ ನಿರ್ದೇಶನಾಲಯದಿಂದ ಪತ್ರ ಬಂದು ವರ್ಷ ಉರುಳಿದರೂ ಶಿಸ್ತು ಕ್ರಮ ಯಾಕಾಗಿಲ್ಲ. ಇವೆಲ್ಲ ದೋಷಗಳಿಗೆ ಪರಿಸರ ಎಂಜಿನಿಯರ್ ಎಇಇ ಮುನಾಫ್ ಪಟೇಲ್ ನೇರ ಹೊಣೆ ಎಂದು ಯಲ್ಲಪ್ಪ ನಾಯಿಕೋಡಿ, ಸಚೀನ್ ಶಿರವಾಳ ಆರೋಪಿಸಿದರಲ್ಲದೆ ತಕ್ಷಣ ಇವರನ್ನು ಸೇವೆಯಿಂದ ಅಮಾನತುಗೊಳಿಸಿ ಪರಿಹಾರ ಮಾರ್ಗೋಪಾಯ ಚಿಂತನೆ ಮಾಡಬೇಕೆಂದು ಕಮೀಷ್ನರ್, ಮೇಯರ್‌ಗೆ ಆಗ್ರಹಿಸಿದಾಗ ಸಸ್ಪೆಂಡ್ ಎಲ್ಲದಕ್ಕೂ ಪರಿಹಾರವಲ್ಲ, ದುಡುಕಿನ ಕ್ರಮ ಬೇಡವೆಂದು ಅಜ್ಮಲ್ ಗೋಲಾ ತಮ್ಮ ಅಸಮ್ಮತಿ ವ್ಯಕ್ತಪಡಿಸಿದಾಗ ಮಾತಿನ ಚಕಮಕಿ ನಡೆಯಿತು.
ಗುರುವಾರದ ಸಭೆಯಲ್ಲಿ ನಾಯಿ ಕಡಿತಕ್ಕೆ ಆರೋಗ್ಯಾಧಿಕಾರಿ ಕಾರಣವೆಂದು ಡಾ. ವಿವೇಕಾನಂದರನ್ನ ಅಮಾನತು ಮಾಡಲು ಸಭೆ ಠರಾವು ಪಾಸ್ ಮಾಡಿತ್ತು, ಇದೀಗ ಎಇಇ ಮುನಾಫ್ ಪಟೇಲ್ ಈ ತಪ್ಪಿಗೆ ನೇರ ಹೊಣೆ ಎಂದು ವರದಿಗಳೇ ಸಾರಿದ್ದರೂ ಇವರ ವಿರುದ್ಧ ಶಿಸ್ತು ಕ್ರಮದ ಠರಾವಿಗೆ ಮಿನಮೇಷ ಯಾಕೆ? ನಮಗೆ ಅಧಿಕಾರಿ ಮುಖ್ಯವಲ್ಲ. ಪೌರ ಕಾರ್ಮಿಕರ ಬದುಕು ಮುಖ್ಯ. ಇಡೀದಿನ ನಗರ ಸ್ವಚ್ಚತೆ ಮಾಡುವವರು ಪಗಾರವಿಲ್ಲದೆ ಪರದಾಡುತ್ತಿದ್ದಾರೆ. ಸೇವೆಯ ವಿಚಾರದಲ್ಲಿನ ಈ ಗೊಂದಲಗಲೇ ಅವರನ್ನು ಪರದಾಡುವಂತೆ ಮಾಡಿವೆ. ತಕ್ಷಣ ಶಿಸ್ತು ಕ್ರಮ ಕೈಗೊಳ್ಳಿರೆಂದು ಸಚಿನ್ ಶಿರವಾಳ್ ಆಗ್ರಹಿಸಿದರು.ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಸತ್ತವರಿಗೂ ಸ್ಥಾನ: ಪಾಲಿಕೆ ಪೌರ ಕಾರ್ಮಿಕರ ನೇಮಕಾತಿಗೆ 3 ವರ್ಷದಿಂದ ಪ್ರಕ್ರಿಯೆ ನಡೆದಿತ್ತು. 2018ರಲ್ಲಿ ಅಧಿಸೂಚನೆ ಹೊರಬಿದ್ದು 258 ಕಾರ್ಮಿಕರ ನೇಮಕಾತಿಗೆ ಮುಂದಾಗಿತ್ತು. 137 ನೇರ ನೇಮಕಾತಿ, 376 ನೇರ ಪಾವತಿ ವಿಧಾನದಲ್ಲಿ ತಾತ್ಕಾಲಿಕ ನೇಮಕಾತಿ ಪಟ್ಟಿ 6.4.2021ರಂದು ಹೊರಡಿಸಿ 2 ವಾರ ಆಕ್ಷೇಪಣೆಗೆ ಅವಕಾಶ ನೀಡುವುದರ ಜೊತೆಗೆ 2ನೇ ನೇಮಕಾತಿ ಅಧಿಸೂಚನೆ ಕೂಡಾ ಹೊರಡಿಸಲಾಗಿತ್ತು. ಇದಕ್ಕೆ ಸಾಕಷ್ಟು ಆಕ್ಷೇಪಣೆಗಳು ಬಂದಾಗ ಪ್ರಾದೇಶಿಕ ಆಯುಕ್ತರು ದೋಷಪೂರತ ಆಯ್ಕೆಪಟ್ಟಿ ಎಂದು ಡಿಸಿ ವಿರುದ್ಧ ಸರ್ಕಾರಕ್ಕೆ, ಪೌರಾಡಳಿತ ನಿರ್ದೇಶನಾಲಯಕ್ಕೆ ಪತ್ರ ಬರೆದಿದ್ದರು. ನಂತರ ಸಮಿತಿ ರಚನೆಯಾಗಿ ನಡೆದ ಪರಿಶೀಲನೆಯಲ್ಲಿ ಕೆಟಗರಿ ಅದಲು ಬದಲಾಗಿರೋದು ಪತ್ತೆಯಾಯ್ತು, ಸತ್ತವರು ಕೂಡಾ ಪಟ್ಟಿಯಲ್ಲಿ ಪ್ರತ್ಯಕ್ಷರಾಗಿದ್ದು ಗೊತ್ತಾಯ್ತು.
ಶಿವಪ್ಪ ಎಂಬ ಪೌರ ಕಾರ್ಮಿಕ ಸಾವನ್ನಪ್ಪಿದ್ದರೂ ಆತನ ಹೆಸರು ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಕಂಡಾಗ ಎಲ್ಲರೂ ಹೌಹಾರಿದ್ದರು. ಇನ್ನು ಮಹಾದೇವಿ, ಶಿವಪ್ಪ, ಯಲ್ಲಪ್ಪ ಎಸ್ಸಿ ಇದ್ದರೂ ಇವರನ್ನು ಪ್ರವರ್ಗ-1ರಲ್ಲಿ ಆಯ್ಕೆ ಮಾಡಲಾಗಿದ್ದೂ ಪತ್ತೆಯಾಗಿತ್ತು. ಇಂತಹ ಹಲವು ದೋಷಗಳ ಹಿನ್ನೆಲೆಯಲ್ಲಿ ಆಯ್ಕೆಪಟ್ಟಿ ಅಪಸವ್ಯಗಳು ಪಟ್ಟಿ ಮಾಡಲ್ಪಟ್ಟಿತ್ತು. ಪೌರ ಕಾರ್ಮಿಕರ ನೇಮಕಾತಿ ವಿಷಯದಲ್ಲಿ ಪಾಲಿಕೆಯ ಮೇಯರ್, ಕಮೀಷ್ನರ್ ಆದಿಯಾಗಿ ಯಾರಿಗೂ ವಿಷಯವೇನೆಂದು ಸ್ಪಷ್ಟಪಡಿಸದೆ ಬಡ ಕಾರ್ಮಿಕರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದ್ದೀರಿ ಎಂದು ಬಹುತೇಕ ಸದಸ್ಯರು ಪರಿಸರ ಎಂಜಿನಿಯರ್ ಎಇಇ ಮುನಾಫ್ ಪಟೇಲ್ ಹಾಗೂ ಇನ್ನಿತರೆ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಸಭೆಯಲ್ಲಿ ಒಕ್ಕೊರಲ ಆಗ್ರಹಿಸಿದರು.