ಕನ್ನಡಪ್ರಭ ವಾರ್ತೆ ಲೋಕಾಪುರ
ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಲಾರಿ ರಸ್ತೆಯಲ್ಲಿಯೇ ಹೊತ್ತಿ ಉರಿದ ಘಟನೆ ಲೋಕಾಪುರ ಪಟ್ಟಣದ ಹೊರವಲಯದಲ್ಲಿರುವ ರೈಲ್ವೆ ನಿಲ್ದಾಣ ಬಳಿ ಘಟನೆ ನಡೆದಿದೆ.ಗಂಗಾವತಿಯಿಂದ ಲೋಕಾಪುರ ಮಾರ್ಗವಾಗಿ ಕೊಲ್ಹಾಪೂರಕ್ಕೆ ಸುಮಾರು 35 ಟನ್ ಅಕ್ಕಿ ತುಂಬಿಕೊಂಡು ಹೊರಟಿದ್ದು, ಮಂಗಳವಾರ ರಾತ್ರಿ ವೇಳೆ ಲಾರಿ ಚಕ್ರದ ಘರ್ಷಣೆಯಿಂದಾಗಿ ಬೆಂಕಿ ಹೊತ್ತಿಕೊಂಡಿದ್ದು ಹೆದ್ದಾರಿ ಮಧ್ಯದಲ್ಲಿ ಬೆಂಕಿಗಾಹುತಿಯಾಗಿದೆ. ಸ್ಥಳಕ್ಕೆ ಅಗ್ನಿ ಶಾಮಕದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆಂದು ತಿಳಿದುಬಂದಿದೆ. ಸುಮಾರು 700 ಚೀಲದ ಸುಮಾರು 30 ಟನ್ ಅಕ್ಕಿ ಹಾಗೂ ಲಾರಿಯನ್ನು ಆಹಾರ ಇಲಾಖೆ ಹಾಗೂ ಪೊಲೀಸ ಇಲಾಖೆಯವರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಅಕ್ಕಿ ಸಾರ್ವಜನಿಕರಿಗೆ ವಿತರಣೆ ಮಾಡುವ ಪಡಿತರ ಅಕ್ಕಿಯಂದು ಶಂಕಿಸಲಾಗಿದೆ.
ಅಕ್ರಮವಾಗಿ ಸಾಗಿಸುತ್ತಿದ್ದ ಅಕ್ಕಿ ಚೀಲ ತುಂಬಿದ್ದ ಲಾರಿ ಸುಟ್ಟು ಹೋಗಿದರಿಂದ ಅದರಲ್ಲಿದ ಅಕ್ಕಿಯನ್ನು ಬೇರೆ ಲಾರಿ ಮೂಲಕ ವಶಕ್ಕೆ ಪಡೆಯಲಾಗಿದೆ. ಅಂದಾಜು ₹7.00 ಲಕ್ಷ ಮೌಲ್ಯದ 35 ಟನ್ ಅಕ್ಕಿ ಸಾಗಿಸಲಾಗುತ್ತಿತ್ತು ಎಂದು ಅಧಿಕಾರಿ ಮೂಲದಿಂದ ತಿಳಿದು ಬಂದಿದೆ. ಅಕ್ಕಿಯನ್ನು ಎಲ್ಲಿಂದ ತೆಗೆದುಕೊಂಡು ಬಂದಿದ್ದಾರೆ. ಅದರ ಮಾಲೀಕರ ಯಾರು ಎನ್ನುವ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ ಎನ್ನಲಾಗಿದೆ.ಸ್ಥಳಕ್ಕೆ ಅಧಿಕಾರಿಗಳ ಭೇಟಿ:
ಲಾರಿ ರಸ್ತೆಯಲ್ಲಿ ಹೊತ್ತಿ ಉರಿದ ಘಟನೆ ತಿಳಿದು ಸ್ಥಳಕ್ಕೆ ಜಿಲ್ಲಾ ಆಹಾರ ಇಲಾಖೆ ಅಧಿಕಾರಿ ಶ್ರೀಶೈಲ ಕಂಕನವಾಡಿ, ಮುಧೋಳ ತಹಸೀಲ್ದಾರ್, ತಾಲೂಕು ಆಹಾರ ಗುಣಮಟ್ಟ ಅಧಿಕಾರಿ ಸದಾಶಿವ ಹಡಪದ, ಜಮಖಂಡಿ ಆರ್‌ಟಿಓ ಅಧಿಕಾರಿ ಸದಾಶಿವ ಮರಲಿಂಗನವರ ಹಾಗೂ ಲೋಕಾಪೂರ ಠಾಣಾ ಪಿಎಸ್‌ಐ ಕೆ.ಬಿ.ಜಕ್ಕನವರ ಭೇಟಿ, ನೀಡಿ ಪರಿಶೀಲಿಸಿದರು. ಈ ವೇಳೆ ಸ್ಥಳದಲಿದ್ದ ಆಹಾರ ಶಿರಸ್ತೆದಾರ ಡಿ.ಬಿ.ದೇಶಪಾಂಡೆಗೆ ಈ ಅಕ್ಕಿ ಸಾಗಟ ಮಾಡಿದ ಮಾಲೀಕ ಮತ್ತು ಲಾರಿ ಮಾಲೀಕನ ಮೇಲೆ ಪ್ರಕರಣ ದಾಖಲಿಸುವಂತೆ ಜಿಲ್ಲಾ ಆಹಾರ ಇಲಾಖೆ ಅಧಿಕಾರಿ ಶ್ರೀಶೈಲ ಕಂಕನವಾಡಿ ತಿಳಿಸಿದರು.ಈ ವೇಳೆ ಮುಧೋಳ ತಹಸೀಲ್ದಾರ್ ಕಚೇರಿ ಆಹಾರ ಶಿರಸ್ತೆದಾರ ಡಿ.ಬಿ.ದೇಶಪಾಂಡೆ, ಆಹಾರ ನಿರೀಕ್ಷಕಿ ಸತ್ಯವ್ವ ಮಾದರ ಹಾಗೂ ಲೋಕಾಪುರ ಗ್ರಾಮ ಆಡಳಿತಾಧಿಕಾರಿ ಪ್ರಕಾಶ ಶೇರಖಾನೆ, ಪೊಲೀಸ್ ಇಲಾಖೆ ಸಿಬ್ಬಂದಿ ಎಸ್.ಎಸ್. ಗಂಗಾಯಿ, ಎಂ.ಕೆ.ಪತ್ತಾರ, ಯಡಹಳ್ಳಿ ಇದ್ದರು.