ಹೊಸ ಕಾನೂನು ರಚನೆಗೆ ವಿಧಾನ ಪರಿಷತ್ತಿನಲ್ಲಿ ಬಹುಮತ ಬೇಕು

KannadaprabhaNewsNetwork | Published : May 18, 2024 12:32 AM

ಸಾರಾಂಶ

ವಿಧಾನ ಪರಿಷತ್ತಿನಲ್ಲಿ ಹೊಸ ಕಾನೂನುಗಳನ್ನು ರಚನೆ ಮಾಡಲು ಹಾಗೂ ತಿದ್ದುಪಡಿ ಮಾಡಲು ಬಹುಮತ ಅಗತ್ಯವಿದೆ. ಲೋಕಸಭಾ ಚುನಾವಣೆಯಲ್ಲಿ ಪ್ರೋತ್ಸಾಹಿಸಿದ ಹಾಗೇ ವಿಧಾನ ಪರಿಷತ್ತು ಚುನಾವಣೆಯಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಅವರನ್ನು ಗೆಲ್ಲಿಸಲು ಪಣ ತೊಡಬೇಕು ಎಂದು ಎ.ಐ.ಸಿ.ಸಿ. ಕಾರ್ಯದರ್ಶಿ ಮಯೂರ್ ಜಯಕುಮಾರ್ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಕಾಂಗ್ರೆಸ್‌ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಗೆಲ್ಲಿಸಲು ಪಣ ತೊಡಿ: ಮಯೂರ್ ಜಯಕುಮಾರ್ - - - ಕನ್ನಡಪ್ರಭ ವಾರ್ತೆ, ದಾವಣಗೆರೆ ವಿಧಾನ ಪರಿಷತ್ತಿನಲ್ಲಿ ಹೊಸ ಕಾನೂನುಗಳನ್ನು ರಚನೆ ಮಾಡಲು ಹಾಗೂ ತಿದ್ದುಪಡಿ ಮಾಡಲು ಬಹುಮತ ಅಗತ್ಯವಿದೆ. ಲೋಕಸಭಾ ಚುನಾವಣೆಯಲ್ಲಿ ಪ್ರೋತ್ಸಾಹಿಸಿದ ಹಾಗೇ ವಿಧಾನ ಪರಿಷತ್ತು ಚುನಾವಣೆಯಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಅವರನ್ನು ಗೆಲ್ಲಿಸಲು ಪಣ ತೊಡಬೇಕು ಎಂದು ಎ.ಐ.ಸಿ.ಸಿ. ಕಾರ್ಯದರ್ಶಿ ಮಯೂರ್ ಜಯಕುಮಾರ್ ಹೇಳಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ ಅಂಗವಾಗಿ ನಡೆದ ಪೂರ್ವಬಾವಿ ಸಭೆಯಲ್ಲಿ ಮಾತನಾಡಿದ ಅವರು, ನಾನು ದಾವಣಗೆರೆ ಕ್ಷೇತ್ರಕ್ಕೆ ವಿಧಾನಸಭೆ, ಲೋಕಸಭೆ ಹಾಗೂ ವಿಧಾನ ಪರಿಷತ್ತು ಚುನಾವಣೆಗೆ ಮೂರನೇ ಬಾರಿಗೆ ಚುನಾವಣಾ ಉಸ್ತುವಾರಿಯಾಗಿರುವೆ. ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ ಅವರ ಗೆಲುವು ಖಚಿತ ಎಂದು ಎಲ್ಲ ಸಮೀಕ್ಷೆಗಳು ತಿಳಿಸಿವೆ. ಇದಕ್ಕೆ ಪಕ್ಷದ ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸುವೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವರ ಅನುಪಸ್ಥಿಯಲ್ಲಿ ಈ ಸಭೆ ಹಮ್ಮಿಕೊಳ್ಳಲಾಗಿದೆ. ಸಚಿವ ಎಸ್.ಎಸ್ ಮಲ್ಲಿಕಾರ್ಜುನ ಅವರು ಮುಂದಿನ ದಿನಗಳಲ್ಲಿ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಪರ ಮತಯಾಚನೆ ಮಾಡುವರು. ಜಿಲ್ಲೆಯಲ್ಲಿ ಶಿಕ್ಷಕರ ಕ್ಷೆತ್ರಕ್ಕೆ ಸಂಬಂಧಿಸಿದಂತೆ 4 ಸಾವಿರಕ್ಕೂ ಅಧಿಕ ಮತಗಳಿಗೆ, ಮುಂದಿನ ತಿಂಗಳು ನಡೆಯಲಿರುವ ಆಗ್ನೇಯ ಶಿಕ್ಷಕರ ಪದವೀಧರ ಕ್ಷೇತ್ರ ವಿಧಾನಪರಿಷತ್ತು ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ನಮ್ಮ ಅಭ್ಯರ್ಥಿ ಸೋಲಬಾರದು ಎಂದರು.

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರುಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಇದರಿಂದಾಗಿ ಈ ಚುನಾವಣೆ ನಿರ್ಲಕ್ಷಿಸಬಾರದು. ಮತದಾನಕ್ಕೆ ಸಮಯ ತುಂಬಾ ಕಡಿಮೆ ಇದೆ. ಆದ್ದರಿಂದ ಈಗಿನಿಂದಲೇ ಶಿಕ್ಷಕರ ಬಳಿ ಹೋಗಿ ಅಭ್ಯರ್ಥಿ ಪರ ಮತ ಯಾಚಿಸುವಂತೆ ಮನವಿ ಮಾಡಿದರು.

ಜಿಲ್ಲಾಮಟ್ಟದಲ್ಲಿ ವಾರ್ ರೂಂ ತೆರೆದು ತಾಲೂಕು ಮಟ್ಟದಲ್ಲಿ ಸಮಿತಿ ರಚಿಸಿ ಎಲ್ಲ ಬ್ಲಾಕ್ ಅಧ್ಯಕ್ಷರ ಜೊತೆ ಚರ್ಚಿಸಿ ಪ್ರತಿ ನಿತ್ಯವು ನನಗೆ ವರದಿ ನೀಡಬೇಕೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ಮಯೂರ್ ಜಯಕುಮಾರ್ ಸೂಚಿಸಿದರು.

ಜಗಳೂರು ಶಾಸಕ ದೇವೇಂದ್ರಪ್ಪ ಮಾತನಾಡಿ, ಜೂನ್ 3ರಂದು ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ ನಡೆಯಲಿದೆ. ನಾನು 33 ವರ್ಷಗಳ ಕಾಲ ನಳಂದ ಕಾಲೇಜಿನಲ್ಲಿ ಕೆಲಸ ಮಾಡಿರುವೆ. ಶಿಕ್ಷಕರ ಕ್ಷೇತ್ರದ ಪ್ರತಿ ಚುನಾವಣೆಯಲ್ಲಿಯೂ ಅನುಭವವಿದ್ದು, ಅದೇ ಅನುಭವ ನನ್ನನ್ನು ಶಾಸಕರನ್ನಾಗಿ ಮಾಡಿದೆ. ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಹಾಗೂ ಪತ್ನಿ, ಮಾಜಿ ಶಾಸಕಿ ಪೂರ್ಣಿಮ ಶ್ರೀನಿವಾಸ್ ಅವರಿಗೆ ರಾಜಕೀಯದಲ್ಲಿ ಅನುಭವ ಹೆಚ್ಚು. ಉತ್ತಮ ಸೇವೆ ಮಾಡಲು ಮುಂದೆ ಬಂದಿದ್ದಾರೆ. ಜಗಳೂರು ಕ್ಷೇತ್ರದಲ್ಲಿ 280 ಮತಗಳಿದ್ದು, ಮೊದಲ ಪ್ರಾಶಸ್ತ್ಯ ಮತವನ್ನು ನಮ್ಮ ಅಭ್ಯರ್ಥಿಗೆ ನೀಡಬೇಕು ಎಂದರು.

ಹಿರಿಯೂರು ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮಾತನಾಡಿ, ಐದು ಜಿಲ್ಲೆಗಳಿಂದ 11222 ಹಳ್ಳಿಗಳಿವೆ. ಹಿಂದಿನ ಸಮಸ್ಯೆಗಳೆ ಬೇರೆ, ಈಗಿರುವ ಸಮಸ್ಯೆಗಳೆ ಬೇರೆ. ವೇತನದಲ್ಲಿ ತಾರತಮ್ಯ, ಬಡ್ತಿ, ಹೀಗೆ ಹತ್ತು ಹಲವಾರು ಬೇಡಿಕೆಗಳು ಈಡೇರಬೇಕಿದೆ. ಖಾಸಗಿ, ಅನುದಾನಿತ ಸಂಸ್ಥೆ, ಸರ್ಕಾರಿ ಶಾಲೆಗಳು, ಪಿಯುಸಿ, ಪದವಿ, ಸ್ನಾತಕೋತ್ತರ, ಡಿಪ್ಲೊಮಾ, ಐಟಿಐ ಕಾಲೇಜುಗಳಿಗೆ ಹೋಗಿ ಅಭ್ಯರ್ಥಿಯ ಪರ ಮತ ಕೇಳಿ ಎಂದು ಮನವಿ ಮಾಡಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ. ಮಂಜಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ್, ಪದವೀಧರ ಮತ್ತು ಶಿಕ್ಷಕರ ಘಟಕದ ಕುಬೇರಪ್ಪ, ಉಸ್ತುವಾರಿಗಳಾದ ಸದಾನಂದ ಡಂಗಣ್ಣ, ಷಣ್ಮುಖ ಶಿವಳ್ಳಿ, ನಂದಿಗಾವಿ ಶ್ರೀನಿವಾಸ್, ಡಿ.ಆರ್. ಪಾಟೀಲ್, ಎ.ಎಸ್. ವೀರಣ್ಣ, ಮುರುಗೇಂದ್ರಪ್ಪ, ರಾಮಲಿಂಗಪ್ಪ, ಕೆಪಿ ಪಾಲಯ್ಯ ಇತರರು ಉಪಸ್ಥಿತರಿದ್ದರು.

- - - -17ಕೆಡಿವಿಜಿ37ಃ:

ದಾವಣಗೆರೆಯಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಎ.ಐ.ಸಿ.ಸಿ. ಕಾರ್ಯದರ್ಶಿ ಮಯೂರ್ ಜಯಕುಮಾರ್ ಮಾತನಾಡಿದರು.

Share this article