27ರಂದು ಹಳಿಯಾಳದಲ್ಲಿ ಕಬ್ಬು ಬೆಳೆಗಾರರ ಬೃಹತ್ ಜಾಗೃತಿ ಸಮಾವೇಶ

KannadaprabhaNewsNetwork | Published : Oct 24, 2024 12:34 AM

ಸಾರಾಂಶ

ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರಬೂರು ಶಾಂತಕುಮಾರ್ ಸೇರಿದಂತೆ ಸಂಘದ ರಾಜ್ಯ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಸಮಾವೇಶದ ಸಂಘಟಕರು ತಿಳಿಸಿದ್ದಾರೆ.

ಹಳಿಯಾಳ: ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮು ಆರಂಭಗೊಳ್ಳುವ ಹಿನ್ನೆಲೆ ಸರ್ಕಾರದ ಘೋಷಣೆಗಳ ಅನುಷ್ಠಾನ, ಕಬ್ಬು ಬೆಳೆಗಾರರ ಬೇಡಿಕೆಗಳು, ಬರಬೇಕಾಗಿದ್ದ ಬಾಕಿ ಬಗ್ಗೆ ಕಬ್ಬು ಬೆಳಗಾರರಲ್ಲಿ ಜಾಗೃತಿ ಮೂಡಿಸಲು ಪಟ್ಟಣದಲ್ಲಿ ಅ. 27ರಂದು ಬೃಹತ್ ಜಾಗೃತಿ ಸಮಾವೇಶ ಆಯೋಜಿಸಲಾಗಿದೆ.

ಸಮಾವೇಶವನ್ನು ರಾಜ್ಯ ಕಬ್ಬು ಬೆಳೆಗಾರರ ಸಂಘದ ಉತ್ತರಕನ್ನಡ ಮತ್ತು ಧಾರವಾಡ ಜಿಲ್ಲಾ ಘಟಕ ಮತ್ತು ಕಬ್ಬು ಬೆಳೆಗಾರರು ಜಂಟಿಯಾಗಿ ಆಯೋಜಿಸಿದ್ದಾರೆ. ಪಟ್ಟಣದ ಮರಾಠ ಭವನದಲ್ಲಿ ಬೆಳಗ್ಗೆ 11 ಗಂಟೆಗೆ ಸಮಾವೇಶ ಆರಂಭಗೊಳ್ಳಲಿದೆ. ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರಬೂರು ಶಾಂತಕುಮಾರ್ ಸೇರಿದಂತೆ ಸಂಘದ ರಾಜ್ಯ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಸಮಾವೇಶದ ಸಂಘಟಕರು ತಿಳಿಸಿದ್ದಾರೆ.

ಸಮಾವೇಶದಲ್ಲಿ ಚರ್ಚಿಸುವ ವಿಷಯಗಳು: ಹಿಂದಿನ ವರ್ಷದ ಕಬ್ಬು ಕಟಾವು ಸಾಗಾಣಿಕೆ ವೆಚ್ಚ ಹೆಚ್ಚುವರಿ ಮಾಡಿ ರೈತರಿಗೆ ವಂಚಿಸಿದ್ದು, ಸಕ್ಕರೆ ಕಬ್ಬು ಅಭಿವೃದ್ಧಿ ಆಯುಕ್ತರು ಆದೇಶ ಮಾಡಿರುವಂತೆ ರೈತರಿಗೆ ಪ್ರತಿ ಟನ್‌ಗೆ ₹120 ಹೆಚ್ಚುವರಿ ಹಣ ಕೂಡಲೇ ಕಾರ್ಖಾನೆಯವರು ಪಾವತಿ ಮತ್ತು ಕಳೆದ ವರ್ಷದ ಕಬ್ಬಿನ ಉಪ ಉತ್ಪನ್ನಗಳ ಲಾಭವನ್ನು ರೈತರಿಗೆ ಹಂಚಿಕೆ ಕುರಿತು ಚರ್ಚೆ ಮಾಡಲಾಗುವುದು.

2022- 23ನೇ ಸಾಲಿನಲ್ಲಿ ಸರ್ಕಾರ ಆದೇಶ ಮಾಡಿದಂತೆ ಕಬ್ಬಿನ ಹೆಚ್ಚುವರಿ ದರ ಪ್ರತಿ ಟನ್‌ ₹150 ರೈತರಿಗೆ ಕಾರ್ಖಾನೆಯವರು ಪಾವತಿಸುವುದು ಸೇರಿದಂತೆ ವಿವಿಧ ಬೇಡಿಕೆಗಳು ಹಾಗೂ ಹಕ್ಕೋತ್ತಾಯಗಳನ್ನು ಸಮಾವೇಶದಲ್ಲಿ ಮಂಡಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

ಪ್ರತಿ ಗ್ರಾಮದಲ್ಲಿ ಸಭೆ: ಭಾನುವಾರ ನಡೆಯಲಿರುವ ಸಮಾವೇಶದಲ್ಲಿ ಕಡ್ಡಾಯವಾಗಿ ಭಾಗವಹಿಸುವಂತೆ ರೈತರನ್ನು ಆಮಂತ್ರಿಸಲು ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ಮೀಸಲು ಕ್ಷೇತ್ರದಲ್ಲಿ ಹಾಗೂ ಹಳಿಯಾಳ ತಾಲೂಕಿನಲ್ಲಿ ಬೈಕ್ ರ್‍ಯಾಲಿ ಸಭೆಗಳು ನಡೆದಿವೆ. ಕಬ್ಬು ಬೆಳೆಗಾರರ ಸಂಘದ ಪ್ರಮುಖರಾದ ಶಂಕರ ಕಾಜಗಾರ, ಅಶೋಕ ಮೇಟಿ, ಕುಮಾರ ಬೊಬಾಟೆ, ನಾಗೇಂದ್ರ ಜಿವೋಜಿ ಸೇರಿದಂತೆ ಕಬ್ಬು ಬೆಳೆಗಾರರ ಸಂಘದ ಪ್ರಮುಖರು ಸಭೆ ನಡೆಸಿ ಕಬ್ಬು ಬೆಳೆಗಾರರ ನ್ಯಾಯೋಚಿತವಾದ ಬೇಡಿಕೆಗಳು ಹಾಗೂ ಕಬ್ಬು ಬೆಳೆಗಾರರಿಗೆ ಆಗುತ್ತಿರುವ ಶೋಷಣೆಗಳ ಬಗ್ಗೆ ಜಾಗೃತಿ ಮೂಡಿಸಿ ಸಮಾವೇಶದ ಆಮಂತ್ರಣ ಪತ್ರ ನೀಡಲಾಗುತ್ತಿದೆ.

Share this article