ಕೇಣಿ ಬಂದರು ರದ್ದತಿಗೆ ಆಗ್ರಹಿಸಿ ಪಾದಯಾತ್ರೆ, ಬೃಹತ್ ಪ್ರತಿಭಟನಾ ಮೆರವಣಿಗೆ

KannadaprabhaNewsNetwork |  
Published : Jul 23, 2026, 02:15 AM IST
ಕಾರವಾರದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. | Kannada Prabha

ಸಾರಾಂಶ

ಅಂಕೋಲಾ ತಾಲೂಕಿನ ಕೇಣಿಯಲ್ಲಿ ಪ್ರಸ್ತಾವಿತ ಗ್ರೀನ್‌ಫೀಲ್ಡ್ ವಾಣಿಜ್ಯ ಬಂದರು ಯೋಜನೆಯನ್ನು ಶಾಶ್ವತವಾಗಿ ಕೈಬಿಡುವಂತೆ ಆಗ್ರಹಿಸಿ ಬುಧವಾರ, ಅಂಕೋಲಾ-ಉತ್ತರ ಕನ್ನಡ ಉಳಿಸಿ ಸರ್ವ ಸಮಾಜಗಳ ಹಿತ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಐನೂರಕ್ಕೂ ಅಧಿಕ ಹೋರಾಟಗಾರರು ಅಂಕೋಲಾದಿಂದ ಬಾಳೆಗುಳಿವರೆಗೆ ಬೃಹತ್ ಪಾದಯಾತ್ರೆ ನಡೆಸಿ, ಕಾರವಾರದಲ್ಲಿ ಬೃಹತ್ ಪ್ರತಿಭಟನೆ ಕೈಗೊಂಡು, ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಕಾರವಾರ

ಅಂಕೋಲಾ ತಾಲೂಕಿನ ಕೇಣಿಯಲ್ಲಿ ಪ್ರಸ್ತಾವಿತ ಗ್ರೀನ್‌ಫೀಲ್ಡ್ ವಾಣಿಜ್ಯ ಬಂದರು ಯೋಜನೆಯನ್ನು ಶಾಶ್ವತವಾಗಿ ಕೈಬಿಡುವಂತೆ ಆಗ್ರಹಿಸಿ ಬುಧವಾರ, ಅಂಕೋಲಾ-ಉತ್ತರ ಕನ್ನಡ ಉಳಿಸಿ ಸರ್ವ ಸಮಾಜಗಳ ಹಿತ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಐನೂರಕ್ಕೂ ಅಧಿಕ ಹೋರಾಟಗಾರರು ಅಂಕೋಲಾದಿಂದ ಬಾಳೆಗುಳಿವರೆಗೆ ಬೃಹತ್ ಪಾದಯಾತ್ರೆ ನಡೆಸಿ, ಕಾರವಾರದಲ್ಲಿ ಬೃಹತ್ ಪ್ರತಿಭಟನೆ ಕೈಗೊಂಡು, ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಅಂಕೋಲಾದ ಐತಿಹಾಸಿಕ ಸ್ವಾತಂತ್ರ್ಯ ಸಂಗ್ರಾಮ ಭವನದ ಆವರಣದಲ್ಲಿರುವ ಮಹಾತ್ಮ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಅಲ್ಲಿಂದ ರಾಷ್ಟ್ರೀಯ ಹೆದ್ದಾರಿಯ ಮೂಲಕ ಬಾಳೆಗುಳಿವರೆಗೆ ನಡೆದ ಪಾದಯಾತ್ರೆಯಲ್ಲಿ ರೈತರು, ಮೀನುಗಾರರು ಹಾಗೂ ಪರಿಸರ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಬಳಿಕ ಕಾರವಾರ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಸಾರ್ವಜನಿಕ ಜಾಗೃತಿ ಮೂಡಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದರು.

ಮೀನುಗಾರ ಮುಖಂಡ ಸಂಜೀವ ಬಳೆಗಾರ ಮಾತನಾಡಿ, ವಾಣಿಜ್ಯ ಬಂದರು ಯೋಜನೆಯು ಉತ್ತರ ಕನ್ನಡ ಜಿಲ್ಲೆಯ ಅತ್ಯಂತ ಸೂಕ್ಷ್ಮ ಪರಿಸರ ವ್ಯವಸ್ಥೆಯನ್ನು ಧ್ವಂಸಗೊಳಿಸಲಿದೆ. ಸಮುದ್ರ ಮೀನುಗಾರಿಕೆ, ಕೃಷಿ ಮತ್ತು ಸಾವಿರಾರು ಕುಟುಂಬಗಳ ಜೀವನೋಪಾಯದ ಮೇಲೆ ಇದು ಕೊಡಲಿ ಪೆಟ್ಟು ನೀಡಲಿದೆ. ಈಗಾಗಲೇ 600 ದಿನಗಳಿಂದ ನಾವು ಶಾಂತಿಯುತವಾಗಿ ಹೋರಾಡುತ್ತಿದ್ದರೂ ಸರ್ಕಾರ ಮೌನ ವಹಿಸಿರುವುದು ದುರದೃಷ್ಟಕರ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮೂಲ ಕುಟುಂಬಗಳಿಗೆ ತಿಳಿಯದಂತೆ ನಕಲಿ ದಾಖಲೆ ಸೃಷ್ಟಿಸಿ ಜಮೀನು ಪರಭಾರೆ ಮಾಡಲಾಗುತ್ತಿದೆ. ಮೃತರ ಹೆಸರಿನಲ್ಲಿಯೂ ಭೂಮಿ ಮಾರಾಟ ಮಾಡಲಾಗುತ್ತಿದ್ದು, ಖಾಸಗಿ ಜಾಗಗಳಿಗೆ ಅಕ್ರಮವಾಗಿ ನುಗ್ಗಿ ಸರ್ವೆ ನಡೆಸಲಾಗುತ್ತಿದೆ. ಪ್ರಶ್ನಿಸಿದ ಸ್ಥಳೀಯರಿಗೆ ಬೆದರಿಕೆ ಹಾಕಲಾಗುತ್ತಿದೆ ಎಂದು ಅವರು ಆರೋಪಿಸಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಮೀನುಗಾರ ಮುಖಂಡರಾದ ಗಣಪತಿ ಮಾಂಗ್ರೆ, ಸುಶೀಲಾ ಹರಿಕಂತ್ರ, ಸಾಗರ ಜೀವವಿಜ್ಞಾನಿ ಡಾ. ವಿ.ಎನ್.ನಾಯಕ, ಅಂಕೋಲಾ ಸರ್ವ ಸಮಾಜಗಳ ಹಿತರಕ್ಷಣಾ ಸಂಘದ ಪದಾಧಿಕಾರಿಗಳು, ಪರಿಸರ ಪ್ರೇಮಿಗಳು ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಪಾಲ್ಗೊಂಡಿದ್ದು, ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು.ಮತದಾನ ಬಹಿಷ್ಕಾರದ ಎಚ್ಚರಿಕೆ

ನಮಗೆ ಅಭಿವೃದ್ಧಿ ಬೇಕು, ಆದರೆ ಅದು ವಿನಾಶಕಾರಿಯಾಗಿರಬಾರದು. ಪರಿಸರ ಸ್ನೇಹಿ ಪ್ರವಾಸೋದ್ಯಮ ಮತ್ತು ಕೃಷಿಗೆ ಪೂರಕವಾದ ಅಭಿವೃದ್ಧಿಗೆ ಮಾತ್ರ ನಮ್ಮ ಸಹಮತವಿದೆ. ಒಂದು ವೇಳೆ ಸರ್ಕಾರ ಜನರ ಭಾವನೆಗಳನ್ನು ಕಡೆಗಣಿಸಿದರೆ, ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆ ಸೇರಿದಂತೆ ಇತರೆ ಚುನಾವಣೆಗಳಲ್ಲಿ ಮತದಾನ ಬಹಿಷ್ಕಾರ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳುವುದು ಅನಿವಾರ್ಯವಾಗಲಿದೆ ಎಂದು ಸಂಘಟನೆಯು ಸರ್ಕಾರಕ್ಕೆ ಎಚ್ಚರಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂಕೋಲಾ- ಕಾರವಾರ ಪಾದಯಾತ್ರೆಗೆ ಚಾಲನೆ
ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಪ್ರತಿಭಟನೆ