ಪೊಲೀಸರ ಭರ್ಜರಿ ಭೇಟೆ; ₹ 2 ಕೋಟಿಗೂ ಅಧಿಕ ಹಣ ಜಪ್ತಿ

KannadaprabhaNewsNetwork | Updated : Apr 16 2024, 01:02 AM IST

ಸಾರಾಂಶ

ಬೆಂಗಳೂರು ಪಾಸಿಂಗ್‌ ಇರುವ ಬ್ರಿಜಾ ಕಾರಿನಲ್ಲಿ ಹಣದ ಬ್ಯಾಗ್‌ಗಳನ್ನು ತುಂಬಿಕೊಂಡು ಹಾವೇರಿ ಜಿಲ್ಲೆಯ ಶಿಗ್ಗಾಂವಿಯಿಂದ ಬರಲಾಗಿದೆ. ಚೆಕ್‌ಪೋಸ್ಟ್‌ನಲ್ಲಿ ಇದು ನಿಲ್ಲಲಿಲ್ಲ.

ಹುಬ್ಬಳ್ಳಿ:

ಚೆಕ್‌ಪೋಸ್ಟ್‌ ಕಣ್ತಪ್ಪಿಸಿ ಹಣ ಸಾಗಿಸಿದ ಕಾರನ್ನು ಬೆನ್ನತ್ತಿ ಹಿಡಿದಿರುವ ಪೊಲೀಸರು, ತೆರಿಗೆ ಇಲಾಖೆಯ ಅಧಿಕಾರಿಗಳ ನೆರವಿನೊಂದಿಗೆ ಹಣ ಎಣಿಕೆ ಮಾಡಿದ್ದು ₹ 2 ಕೋಟಿಗೂ ಅಧಿಕ ನಗದು ಪತ್ತೆಯಾಗಿದೆ.

ಈ ಹಣ ರಾಮನಕೊಪ್ಪ ಗ್ರಾಮದ ನಿಂಗಪ್ಪ ಜಟಾರ್‌ ಎಂಬುವವರಿಗೆ ಸೇರಿದ್ದು ಎನ್ನಲಾಗಿದೆ. ಅವರ ಮನೆಯಲ್ಲೇ ಹಣದ ಎಣಿಕೆ ಮಾಡಲಾಗುತ್ತಿದೆ. ಹೊಲದ ಮಾರಾಟದ ಹಣ ಎಂದು ಹೇಳಲಾಗುತ್ತಿದೆಯಾದರೂ ದಾಖಲೆ ಮಾತ್ರ ಸರಿಯಾಗಿ ಕೊಡುತ್ತಿಲ್ಲ ಎಂದು ತಿಳಿದುಬಂದಿದೆ. ಹೀಗಾಗಿ ದಾಳಿ ಮುಂದುವರಿದಿದೆ.

ಆಗಿರುವುದೇನು?

ಬೆಂಗಳೂರು ಪಾಸಿಂಗ್‌ ಇರುವ ಬ್ರಿಜಾ ಕಾರಿನಲ್ಲಿ ಹಣದ ಬ್ಯಾಗ್‌ಗಳನ್ನು ತುಂಬಿಕೊಂಡು ಹಾವೇರಿ ಜಿಲ್ಲೆಯ ಶಿಗ್ಗಾಂವಿಯಿಂದ ಬರಲಾಗಿದೆ. ಚೆಕ್‌ಪೋಸ್ಟ್‌ನಲ್ಲಿ ಇದು ನಿಲ್ಲಲಿಲ್ಲ. ಇದೇ ವೇಳೆ ಆ ಕಾರಿನಲ್ಲಿ ಹಣ ಸರಬರಾಜು ಆಗುತ್ತಿದೆ ಎಂಬ ಮಾಹಿತಿಯೂ ಪೊಲೀಸರಿಗೆ ದೊರೆತಿದೆ. ತಮಗೆ ಬಂದ ಖಚಿತ ಮಾಹಿತಿ ಮೇರೆಗೆ ಕಾರು ತಡೆಯಲು ಪೊಲೀಸರು ಹಾಗೂ ಫ್ಲೈಯಿಂಗ್‌ ಸ್ಕ್ವಾಡ್‌ ಪ್ರಯತ್ನಿಸಿದರೂ ಕಾರು ಮಾತ್ರ ನಿಲ್ಲಿಸಲಿಲ್ಲ.

ಕೂಡಲೇ ಪೊಲೀಸರು ಕಾರು ಬೆನ್ನತ್ತಿ ಹೋಗಿದ್ದಾರೆ. ಕಾರು ನೇರವಾಗಿ ರಾಮನಕೊಪ್ಪ ಗ್ರಾಮದ ನಿಂಗಪ್ಪ ಜಟಾರ್‌ ಎಂಬುವವರ ಮನೆ ಎದುರಿಗೆ ನಿಂತಿತ್ತು. ಜತೆಗೆ ಹಣದ ಬ್ಯಾಗ್‌ಗಳನ್ನು ನಿಂಗಪ್ಪ ಜಟಾರ್‌ ಅವರ ಮನೆಯಲ್ಲಿಟ್ಟು ಅಲ್ಲಿಂದ ಪರಾರಿಯಾಗಲು ಕಾರಲ್ಲಿದ್ದವರು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ಆದರೆ ಪೊಲೀಸರು ಅಷ್ಟರೊಳಗೆ ದಾಳಿ ನಡೆಸಿ ಅಲ್ಲಿದ್ದವರನ್ನು ಹಾಗೂ ಹಣದ ಬ್ಯಾಗ್‌ಗಳನ್ನು ವಶಕ್ಕೆ ಪಡೆದಿದ್ದಾರೆನ್ನಲಾಗಿದೆ.

ಅಲ್ಲಿಂದ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಹಣ ಎಣಿಸುವ ಮಷಿನ್‌ನ್ನು ತರಿಸಿದ್ದಾರೆ. ಏಳೆಂಟು ಜನ ಐಟಿ ಅಧಿಕಾರಿಗಳ ತಂಡ ಸ್ಥಳಕ್ಕೆ ದಾವಿಸಿ ಹಣ ಎಣಿಕೆಯ ಕಾರ್ಯದಲ್ಲಿ ನಿರತವಾಯಿತು. ಸುಮಾರು ಏಳೆಂಟು ಗಂಟೆಗಳ ಕಾಲ ಮಷಿನ ಮೂಲಕ ಹಣದ ಎಣಿಕೆ ನಡೆದಿದೆ. ಮೂಲಗಳ ಪ್ರಕಾರ ₹ 2.05 ಕೋಟಿ ನಗದು ಇದೆ ಎಂದು ಹೇಳಲಾಗುತ್ತಿದೆ.

ಯಾರದು:

ನಿಂಗಪ್ಪ ಜಟಾರ್‌ ಸೇರಿದಂತೆ ಮನೆಯ ಮಂದಿಯನ್ನೆಲ್ಲ ಪೊಲೀಸರು ಹಾಗೂ ಐಟಿ ಇಲಾಖೆ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ. ಈ ಹಣ ಹೊಲ ಮಾರಾಟದ ಹಣ ಎಂದು ಸಬೂಬು ಹೇಳಿದ್ದಾರೆ. ಆದರೆ ಸರಿಯಾದ ದಾಖಲೆ ಒದಗಿಸಿಲ್ಲ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಈ ಕಾರಣದಿಂದ ವಿಚಾರಣೆ ಹಾಗೂ ಪರಿಶೀಲನೆಯನ್ನು ಐಟಿ ಅಧಿಕಾರಿಗಳ ತಂಡ ನಡೆಸಿದೆ.

ಈ ವೇಳೆ ಆದಾಯ ತೆರಿಗೆ ಇಲಾಖೆ ಜಿಲ್ಲಾ ನೋಡಲ್ ಅಧಿಕಾರಿ ಫಕ್ಕಿರೇಶ ಬಾದಾಮಿ, ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ಗೋಪಾಲ ಬ್ಯಾಕೋಡ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಭರಮನಿ, ಹುಬ್ಬಳ್ಳಿ ಗ್ರಾಮಿಣ ಭಾಗದ ಪೊಲೀಸ್ ಇನ್‌ಸ್ಪೆಕ್ಟರ್‌ ಮುರಗೇಶ ಚೆನ್ನಣ್ಣವರ್, ಕುಂದಗೋಳ ಭಾಗದ ಇನ್‌ಸ್ಪೆಕ್ಟರ್ ಶಿವಾನಂದ ಅಂಬಿಗೇರ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳ ತಂಡ ಸ್ಥಳದಲ್ಲೇ ಬೀಡು ಬಿಟ್ಟಿದೆ.

Share this article