ಮಹರ್ಷಿ ವಾಲ್ಮೀಕಿಯಿಂದ ಉತ್ಕೃಷ್ಟ ಗ್ರಂಥ ರಚನೆ

KannadaprabhaNewsNetwork |  
Published : Oct 18, 2024, 12:11 AM IST
17ಸಿಎಚ್ಎನ್53ಚಾಮರಾಜನಗರದ ವರನಟ ಡಾ. ರಾಜ್‌ಕುಮಾರ್ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ನಗರಸಭೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಪಶುಸಂಗೋಪನೆ, ರೇಷ್ಮೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಅವರು ಉದ್ಘಾಟಿಸಿದರು. | Kannada Prabha

ಸಾರಾಂಶ

ಚಾಮರಾಜನಗರದ ಡಾ.ರಾಜ್‌ಕುಮಾರ್ ರಂಗಮಂದಿರದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಪಶುಸಂಗೋಪನೆ, ರೇಷ್ಮೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅವರು ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ಮಹಾಕಾವ್ಯವು ಉತ್ಕೃಷ್ಟ ನೈತಿಕ ಮೌಲ್ಯಗಳಿಂದ ಜನರು ಸಮಾಜಮುಖಿಯಾಗಿ ಬೆಳೆಯಲು ನೆರವಾಗಿದೆ ಎಂದು ಪಶುಸಂಗೋಪನೆ, ರೇಷ್ಮೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಅವರು ತಿಳಿಸಿದರು.ನಗರದ ವರನಟ ಡಾ.ರಾಜ್‌ಕುಮಾರ್ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ನಗರಸಭೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಆದಿಕವಿ ಮಹರ್ಷಿ ವಾಲ್ಮೀಕಿಯವರ ಜಯಂತಿ ಕಾರ್ಯುಕ್ರಮವನ್ನು ರಾಜ್ಯಾದ್ಯಂತ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ರಾಮಾಯಣದ ನೈಜ ಪಾತ್ರಗಳು ನಮ್ಮೆಲ್ಲರ ಮೇಲೆ ಪ್ರಭಾವ ಬೀರಿದೆ. ವಾಲ್ಮೀಕಿ ರಾಮಾಯಣ ರಚನೆ ಮೂಲಕ ಎಲ್ಲರೂ ಸುಭಿಕ್ಷತೆಯಿಂದ ಬಾಳಿ ಬದುಕುವ ರಾಮರಾಜ್ಯದ ಕನಸು ಕಂಡಿದ್ದರು. ರಾಮಾಯಣ ಭಾರತಕ್ಕೆ ಮಾತ್ರ ಸೀಮಿತವಾಗಿರದೇ ವಿಶ್ವದ ಅನೇಕ ಭಾಷೆಗಳಿಗೆ ತರ್ಜುಮೆಯಾಗಿ ಜನರಿಗೆ ಉತ್ತಮ ಸಂದೇಶ ನೀಡಿದೆ ಎಂದು ತಿಳಿಸಿದರು.

ಮಹರ್ಷಿ ವಾಲ್ಮೀಕಿ ಪ್ರತಿಮೆ ನಿರ್ಮಾಣಕ್ಕೆ ಯಾವ ವಿರೋಧವು ಇಲ್ಲ. ಸರ್ಕಾರದ ಮಂಜೂರಾತಿ ಬೇಕಾಗಿದೆ. ಮುಖ್ಯಮಂತ್ರಿಯವರು ಹಾಗೂ ಸಂಬಂಧಪಟ್ಟ ಇತರೆ ಸಚಿವರೊಂದಿಗೆ ಈಗಾಗಲೇ ಪ್ರತಿಮೆ ನಿರ್ಮಾಣ ಕುರಿತು ಚರ್ಚಿಸಲಾಗಿದ್ದು, ಮುಖ್ಯಮಂತ್ರಿಯವರು ಒಪ್ಪಿಗೆ ನೀಡಿದ್ದಾರೆ. ಮಹರ್ಷಿ ವಾಲ್ಮೀಕಿಯವರ ಪ್ರತಿಮೆ ಜೊತೆಗೆ ಮಹರ್ಷಿ ಭಗೀರಥ ಹಾಗೂ ಭಕ್ತಶ್ರೇಷ್ಠ ಕನಕದಾಸರ ಪುತ್ಥಳಿ ನಿರ್ಮಾಣಕ್ಕೂ ಸರ್ಕಾರ ಒಪ್ಪಿದೆ. ಈ ಸಂಬಂಧ ಪ್ರತಿಮೆಗಳ ನಿರ್ಮಾಣಕ್ಕೆ ಅಗತ್ಯವಾದ ಅಂದಾಜುಪಟ್ಟಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿ ಅನುಮೋದನೆ ಪಡೆಯುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಮೂವರು ಮಹನೀಯರ ಪ್ರತಿಮೆಗಳು ನಿರ್ಮಾಣವಾಗಲಿವೆ ಎಂದು ಹೇಳಿದರು.

ಶಾಸಕರಾದ ಎ.ಆರ್. ಕೃಷ್ಣಮೂರ್ತಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಂಗಾರವೇ ಬದುಕಲ್ಲ. ಬದುಕು ಬಂಗಾರದಂತಿರಬೇಕೆಂದು ನುಡಿದ ವಾಲ್ಮೀಕಿಯವರ ಜಯಂತಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಮಹರ್ಷಿಗೆ ಎಲ್ಲರೂ ಸಂಸ್ಕಾರಪೂರ್ಣ ಗೌರವ ನೀಡಬೇಕಾಗಿದೆ. ಅನೇಕ ಸಂತರು, ದಾರ್ಶನಿಕರು ಜಗತ್ತನ್ನು ಉತ್ತಮ ದಿಕ್ಕಿನತ್ತ ಕೊಂಡೊಯ್ದಿದ್ದಾರೆ. ಅಂತಹ ಮಹಾಪುರುಷರಲ್ಲಿ ವಾಲ್ಮೀಕಿ ಸಹ ಒಬ್ಬರಾಗಿದ್ದಾರೆ ಎಂದರು.

ಮುಖ್ಯ ಭಾಷಣ ಮಾಡಿದ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಪ್ರಾಂಶುಪಾಲ ಬಂಗಾರ ನಾಯಕ ಅವರು ಮಹರ್ಷಿ ವಾಲ್ಮೀಕಿ ಇಡೀ ಜಗತ್ತಿಗೆ ರಾಮಾಯಣ ಮಹಾಕಾವ್ಯವನ್ನು ಕೊಡುಗೆಯಾಗಿ ನೀಡಿದ್ದಾರೆ. ರಾಮಾಯಣದ ಮೂಲ ಅಂಶ ಮನುಷ್ಯನ ನೈತಿಕತೆಯೇ ಆಗಿದೆ. ಇಂದಿನ ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ವಾಲ್ಮೀಕಿ ಆದರ್ಶ ಹಾಗೂ ಅನುಕರಣೀಯರಾಗಿದ್ದಾರೆ. ರಾಮಾಯಣವನ್ನು ಅಧ್ಯಯನ ಮಾಡುವ ಮೂಲಕ ಅದರಲ್ಲಿನ ವಾಸ್ತವವನ್ನು ಎಲ್ಲರು ಅರಿಯಬೇಕು ಎಂದರು.ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಚ್.ವಿ.ಚಂದ್ರು ಮಾತನಾಡಿ, ಒಬ್ಬ ಬೇಟೆಗಾರ, ದರೋಡೆಕೋರ ವ್ಯಕ್ತಿ ರಾಮಾಯಣ ಮಹಾಕಾವ್ಯ ರಚಿಸಿ ಆದಿಕವಿಯಾದ ವ್ಯಕ್ತಿತ್ವ ಮಹರ್ಷಿ ವಾಲ್ಮೀಕಿಯವರದ್ದು. ವ್ಯಕ್ತಿಗೆ ಶಿಕ್ಷಣದಷ್ಟೆ ಸಂಸ್ಕಾರವು ಮುಖ್ಯವಾಗಿದೆ. ಸಮಾಜದಲ್ಲಿ ಎಲ್ಲರೂ ಪ್ರಬುದ್ಧತೆಯಿಂದ ನಡೆದುಕೊಳ್ಳಬೇಕಾಗಿದೆ ಎಂದರು.

ಶಾಸಕ ಸಿ.ಪುಟ್ಟರಂಗಶೆಟ್ಟಿ, ಎಚ್.ಎಂ. ಗಣೇಶ್ ಪ್ರಸಾದ್, ಎಂ.ಆರ್. ಮಂಜುನಾಥ್ ಅವರ ಅನುಪಸ್ಥಿತಿಯಲ್ಲಿ ಕಳುಹಿಸಲಾಗಿದ್ದ ಸಂದೇಶವನ್ನು ಕಾರ್ಯಕ್ರಮದಲ್ಲಿ ವಾಚನ ಮಾಡಲಾಯಿತು.ಇದೇ ವೇಳೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿ ಪಡೆದ ಸಮುದಾಯದ ವಿದ್ಯಾರ್ಥಿನಿ ಆರ್. ಚೇತನಾ ಅವರನ್ನು ಒಂದು ಲಕ್ಷ ರು.,ನಗದು ಬಹುಮಾನದೊಂದಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಚಾಮರಾಜನಗರ ಮತ್ತು ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮ್ಮದ್ ಅಸ್ಗರ್ (ಮುನ್ನ), ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ. ಕವಿತ, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಪಿ. ಲಕ್ಷ್ಮಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಎಚ್.ಎಸ್, ಬಿಂದ್ಯಾ ಕಾರ್ಯುಕ್ರಮದಲ್ಲಿ ಉಪಸ್ಥಿತರಿದ್ದರು.

ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಪಶುಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್, ಇತರೆ ಗಣ್ಯರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು
ಗ್ರಾಮೀಣ ಭಾಗದಲ್ಲೂ ವಸತಿ ಕಟ್ಟಡಗಳಿಗೆ ಒಸಿ-ಸಿಸಿ ಬೇಕಿಲ್ಲ