ಕಬ್ಬು ಕಾರ್ಖಾನೆಯ ಪ್ರತಿನಿಧಿ-ಕಟಾವು, ಸಾಗಾಟ ಮಾಡುವ ರೈತ ಗುತ್ತಿಗೆದಾರರು ಭಾಗಿ
ಕನ್ನಡಪ್ರಭ ವಾರ್ತೆ ಹಳಿಯಾಳಕಬ್ಬು ಬೆಳೆಗಾರರನ್ನು ಅತೀಯಾಗಿ ಭಾದಿಸುತ್ತಿರುವ ಲಗಾಣಿ ಸಮಸ್ಯೆ ಬಗೆಹರಿಸುವ ದಿಸೆಯಲ್ಲಿ ಜಿರೋ ಲಗಾಣಿ ಜಾರಿಗೊಳಿಸಲು ತಾಲೂಕಾಡಳಿತ ಸೌಧದಲ್ಲಿ ಕಾರ್ಖಾನೆಯ ಪ್ರತಿನಿಧಿಗಳ ಹಾಗೂ ಕಬ್ಬು ಕಟಾವು ಮತ್ತು ಸಾಗಾಟ ಮಾಡುವ ರೈತ ಗುತ್ತಿಗೆದಾರರ ಮಧ್ಯೆ ನಡೆದ ಸಭೆಯು ಯಾವುದೇ ನಿರ್ಣಯಕ್ಕೆ ಬಾರದೇ ಅಪೂರ್ಣಗೊಂಡಿತು.
ಕಬ್ಬು ಬೆಳೆಗಾರರ ಸಂಘದ ಪ್ರಮುಖರಾದ ನಾಗೇಂದ್ರ ಜಿವೋಜಿ ಹಾಗೂ ತಾಲೂಕ ಸಂಘದ ಅಧ್ಯಕ್ಷ ಶಂಕರ ಕಾಜಗಾರ ಮೊದಲಾದವರು ಲಗಾಣಿಯಿಂದ ಕಬ್ಬು ಬೆಳೆಗಾರರಿಗೆ ಉಂಟಾಗುತ್ತಿರುವ ಆರ್ಥಿಕ ಶೋಷಣೆಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಿ ಕಾರ್ಖಾನೆಯವರು ಮಹಾರಾಷ್ಟ್ರದ ಕಬ್ಬು ಕಟಾವು ಗ್ಯಾಂಗನವರಿಗೆ ಲಕ್ಷಾಂತರ ಮುಂಗಡ ನೀಡುವುದಲ್ಲದೇ, ಹೆಚ್ಚಿನ ಪಾಸ ವಿತರಣೆ ಮಾಡಿ, ಸ್ಥಳೀಯ ಕಬ್ಬು ಕಟಾವು ಗ್ಯಾಂಗನವರಿಗೆ ಯಾವುದೇ ಪ್ರೋತ್ಸಾಹ ಪ್ರಾತಿನಿಧ್ಯ ನೀಡುತ್ತಿಲ್ಲ. ಹೀಗಾಗಿ ಸ್ಥಳೀಯ ಗ್ಯಾಂಗನವರಿಗೆ ತಿಂಗಳಿಗೆ ಕನಿಷ್ಟ 20ರಿಂದ 25ರವರೆಗೆ ಗದ್ದೆಗಳನ್ನು ಕಟಾವು ಮಾಡಲು ಅವಕಾಶ ದೊರೆತರೇ ಅವರ ಕೈಗೂ ಕೂಲಿ ದೊರೆಯುವುದರ ಜೊತೆ ಆರ್ಥಿಕ ಮುಗ್ಗಟ್ಟಿನ ಸಮಸ್ಯೆ ಎದುರಾಗದು ಎಂದರು.ಕಬ್ಬು ಬೆಳೆಗಾರರ ವಾದ ಅಲ್ಲಗಳೆದ ಕಾರ್ಖಾನೆಯ ಪ್ರತಿನಿಧಿ ಕಬ್ಬು ಕಟಾವ ಮತ್ತು ಸಾಗಾಟ ವಿಭಾಗದ ಪ್ರಮುಖರಾದ ರಮೇಶ ರೆಡ್ಡಿ ಹಾಗೂ ಶಂಕರ ಅಗಡಿ, ಚುನಾವಣೆ ಮುಗಿದಿದ್ದರಿಂದ ಈಗ ಗ್ಯಾಂಗಗಳ ಸಂಖ್ಯೆಯು ಹೆಚ್ಚಾಗಿದೆ. 60/40 ಅನುಪಾತದಲ್ಲಿ ನಾವು ಕಬ್ಬು ಕಟಾವಿನ ಜವಾಬ್ದಾರಿಯನ್ನು ಹೊರಗಿನ ಹಾಗೂ ಸ್ಥಳೀಯ ತಾಂಡಾಗಳಿಗೆ ವಹಿಸಿದ್ದೇವೆ ಎಂದರು.ಕಬ್ಬು ಕಟಾವು ಮತ್ತು ಸಾಗಾಟ ತಾಂಡಾಗಳ ಗುತ್ತಿಗೆದಾರ ಶ್ರವಣಕುಮಾರ ಚೌಗಲೆ ಮಾತನಾಡಿ, ಲಗಾಣಿ ತಾಂಡಾಗಳಿಗೆ ಹೆಚ್ಚುವರಿ ಹಣ ನೀಡುವುದನ್ನು ಕಲಿಸಿದ್ದೇ ನಮ್ಮ ರೈತರು. ತಮ್ಮ ಕಬ್ಬು ಬೇಗನೆ ಹೋಗಲಿ ಎಂಬ ಏಕೈಕ ಉದ್ದೇಶದಿಂದ ರೈತರು ತಮ್ಮ ಮಧ್ಯೆಯೇ ಆರಂಭಿಸಿರುವ ಪೈಪೋಟಿಯಿಂದಾಗಿ ಇಂದು ಲಗಾಣಿಯು ಬೃಹತಾಗಿ ಬೆಳೆದು ರೈತರನ್ನೇ ಶೋಷಿಸುತ್ತಿದೆ. ಒಂದೇ ಬಾರಿ ಲಗಾಣಿ ನಿಯಂತ್ರಣ ಅಸಾಧ್ಯವಾದ ಮಾತು, ರೈತರು ಈ ಬಗ್ಗೆ ನಿರ್ಣಯ ನಿರ್ಧಾರ ಮಾಡಬೇಕು ಎಂದರು.ತಹಸೀಲ್ದಾರ ಫಿರೋಜಷಾ ಸೋಮನಕಟ್ಟಿ, ದಾಂಡೇಲಿ ಡಿವೈಎಸ್ಪಿ ಶಿವಾನಂದ ಮದರಖಂಡಿ ಹಾಗೂ ಹಳಿಯಾಳ ಸಿಪಿಐ ಜಯಪಾಲ್ ಪಾಟೀಲ ಮಾತನಾಡಿ, ಲಗಾಣಿ ಆಕರಿಸುತ್ತಿರುವ ಬಗ್ಗೆ ದೂರು ನೀಡಿದ್ದಲ್ಲಿ ಅಂತಹವರ ವಿರುದ್ಧ ಹಾಗೂ ಆಯಾ ಭಾಗದ ಫೀಲ್ಡಮನ್ ಮೇಲೆ ಕ್ರಮ ಕೈಗೊಳ್ಳುವುದಾಗಿ ಸಭೆಗೆ ತಿಳಿಸಿದರು. ಸಾರಿಗೆ ಸಂಚಾರ ಸಮಸ್ಯೆ:
ಸಭೆಯಲ್ಲಿ ಸಾರಿಗೆ ಸಂಚಾರದ ಸಮಸ್ಯೆಯನ್ನು ಪತ್ರಕರ್ತರು ಪ್ರಸ್ತಾಪಿಸಿ ಸಮಸ್ಯೆಗೆ ಪರಿಹಾರ ಕಾಣಲು ಅಧಿಕಾರಿಗಳು ಮುಂದಾಗಬೇಕೆಂದು ಆಗ್ರಹಿಸಿದರು. ಈ ದಿಸೆಯಲ್ಲಿ ತಾಲೂಕಾಡಳಿತವು ಕಾರ್ಖಾನೆಯವರ ಮೇಲೆ ಕ್ರಮ ಕೈಗೊಂಡಿದ್ದ ಏನಾದರೂ ದಾಖಲೆಗಳಿವೆಯೇ ಎಂದು ವಿಚಾರಿಸಿದಾಗ ತಬ್ಬಿಬ್ಬಾದ ಅಧಿಕಾರಿಗಳು ಉತ್ತರಿಸಲು ತಡಕಾಡಿದರು. ಹೀಗೆ ಸಭೆಯು ಅಪೂರ್ಣಗೊಂಡು ಮುಕ್ತಾಯಗೊಂಡಿತು.ಪಿಎಸ್‌ಐ ಬಸವರಾಜ ಮಬನೂರ, ಕೃಷಿ ಸಹಾಯಕ ನಿರ್ದೇಶಕ ಪಿ.ಐ. ಮಾನೆ, ಬೆಳೆಗಾರರ ಸಂಘದ ಕಾರ್ಯದರ್ಶಿ ಅಶೋಕ ಮೇಟಿ ಹಾಗೂ ಇತರರು ಇದ್ದರು.