ಕನ್ನಡಪ್ರಭ ವಾರ್ತೆ ಸಂಡೂರು
ತಾಲೂಕಿನ ಕುರೆಕೊಪ್ಪ ಪುರಸಭೆಯ ಸದಸ್ಯರೊಬ್ಬರ ಮೇಲೆ ಯುವಕನೊಬ್ಬ ಮಚ್ಚಿನಿಂದ ಹಲ್ಲೆ ಮಾಡಿದ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ತಾಲೂಕಿನ ತೋರಣಗಲ್ಲಿನ ಘೋರ್ಪಡೆ ನಗರದ ನಿವಾಸಿ, ಕುರೆಕುಪ್ಪ ಪುರಸಭೆಯ ೧೧ನೇ ವಾರ್ಡ್‌ನ ಸದಸ್ಯ ನಾಗರಾಜ ನಾಯ್ಕ(೩೪) ಎಂಬವರ ಮೇಲೆ ಅದೇ ವಾರ್ಡ್‌ನ ನಿವಾಸಿ ಶಿವಕುಮಾರ್(೧೯) ಎಂಬ ಯುವಕ ಭಾನುವಾರ ತೋರಣಗಲ್ಲಿನ ಘೋರ್ಪಡೆ ನಗರದಲ್ಲಿ ಮಚ್ಚಿನಿಂದ ಭೀಕರವಾಗಿ ಹಲ್ಲೆ ಮಾಡಿ ಗಾಯಗೊಳಿಸಿದ್ದಾನೆ.
ಹಲ್ಲೆಗೊಳಗಾದ ನಾಗರಾಜನಾಯ್ಕ ತನ್ನ ಸ್ನೇಹಿತ ರಫೀಕ್ ಎಂಬವರನ್ನು ಬೈಕ್‌ನಲ್ಲಿ ಕೂಡಿಸಿಕೊಂಡು ಹೊರಟಿದ್ದಾಗ, ಆರೋಪಿ ಶಿವಕುಮಾರ್ ಬೈಕ್ ನಿಲ್ಲಿಸಿ, ಮಚ್ಚಿನಿಂದ ನಾಗರಾಜನಾಯ್ಕನ ಕತ್ತು, ಬೆನ್ನು, ಕೈಗಳ ಮೇಲೆ ಹಲ್ಲೆ ಮಾಡಿದ್ದಾನೆಂದು ತಿಳಿದು ಬಂದಿದೆ.ವಿಷಯ ತಿಳಿದ ಕೂಡಲೆ ಹಲ್ಲೆಗೊಳಗಾದ ವ್ಯಕ್ತಿಯನ್ನು ಹತ್ತಿರದ ಸಂಜೀವಿನಿ ಆಸ್ಪತ್ರೆಗೆ ಕರೆದೊಯ್ದು, ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ನಂತರ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ವರ್ಷದ ಹಿಂದೆ ಆರೋಪಿ ಶಿವಕುಮಾರ್ ಅವರ ಮನೆಯ ಬಳಿ ಚರಂಡಿ ಸ್ವಚ್ಛಗೊಳಿಸುವ ವಿಚಾರವಾಗಿ ಶಿವಕುಮಾರ್ ಅವರ ತಂದೆ ಪಾರ್ಥಸಾರಥಿ ಹಾಗೂ ಹಲ್ಲೆಗೊಳಗಾದ ನಾಗರಾಜನಾಯ್ಕ ಎಂಬವರ ನಡುವೆ ಗಲಾಟೆಯಾಗಿ ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದವು.ಹಲ್ಲೆ ನಡೆಸಿದ್ದ ಆರೋಪಿ ಶಿವಕುಮಾರನನ್ನು ಪೊಲೀಸರು ಸೋಮವಾರ ಬಂಧಿಸಿರುವುದಾಗಿ ತಿಳಿದುಬಂದಿದೆ. ಪ್ರಕರಣ ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.