ಕನ್ನಡಪ್ರಭ ವಾರ್ತೆ ಮಂಗಳೂರು
ಜಗತ್ತಿಗೆ ಮಾನವೀಯತೆಯ ಸಂದೇಶ ನೀಡಿದವರಲ್ಲಿ ಬುದ್ಧ ಮತ್ತು ಬಸವಣ್ಣರ ಬಳಿಕದ ಸ್ಥಾನ ಬ್ರಹ್ಮಶ್ರೀ ನಾರಾಯಣಗುರುಗಳಿಗೆ ಸಲ್ಲುತ್ತದೆ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅಭಿಪ್ರಾಯಿಸಿದ್ದಾರೆ.ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳು ಹಾಗೂ ಅವರ ಶಿಷ್ಯರಿಂದ ಪ್ರತಿಷ್ಟಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ ಡಾ. ಮೀನಾಕ್ಷಿ ರಾಮಚಂದ್ರ ಅವರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ‘ಅರವಿಪುರದಿಂದ ಓಂಕಾರೇಶ್ವರದವರೆಗೆ’ ಗ್ರಂಥವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.ರಕ್ತರಹಿತ ಕ್ರಾಂತಿಯ ಮೂಲಕ ಕೇರಳದಲ್ಲಿ ಸಾಮಾಜಿಕ ಬದಲಾವಣೆಯನ್ನು ತಂದವರು ಬ್ರಹ್ಮಶ್ರೀ ನಾರಾಯಣ ಗುರುಗಳು. ಇಂದು ನಾವು ಮಂಗಳೂರಿನಲ್ಲಿ ಸಾಕಷ್ಟು ಗುರು ಮಂದಿರಗಳನ್ನು ಕಟ್ಟಿದ್ದೇವೆ. ಆದರೆ, ನಾರಾಯಣಗುರುಗಳು ಮಂದಿರ ಕಟ್ಟಿಸಿದ ಧ್ಯೇಯೋದ್ದೇಶಗಳೇ ಬೇರೆ. ದೇವಸ್ಥಾನಕ್ಕೆ ಶೂದ್ರರಿಗೆ, ಪಂಚಮರಿಗೆ ಪ್ರವೇಶಾವಕಾಶ ಇಲ್ಲದಾಗ ಶಿವಗಿರಿಯಲ್ಲಿ ಈಳವ ಶಿವನನ್ನು ಪ್ರತಿಷ್ಟಾಪನೆ ಮಾಡಿ, ಎಲ್ಲ ಶೂದ್ರರಿಗೂ ದೇವಸ್ಥಾನಕ್ಕೆ ಪ್ರವೇಶಕ್ಕೆ ಅವಕಾಶ ನೀಡಿದ್ದರು.
ಮದ್ಯಪಾನ ನಿಷೇಧ, ನೈರ್ಮಲ್ಯಕ್ಕೆ ಒತ್ತು ನೀಡಿ, ಶಿಕ್ಷಣಕ್ಕೆ ಪ್ರೋತ್ಸಾಹಿಸಿ, ಆಡಂಬರದ ವಿವಾಹವನ್ನು ವಿರೋಧಿಸಿ ಕೇರಳದಲ್ಲಿ ಕ್ರಾಂತಿ ಮಾಡಿದ ನಾರಾಯಣಗುರುಗಳು ಗುರುಮಂದಿರಗಳನ್ನು ಕಟ್ಟಿದ್ದು, ಭಜನೆ ಅಥವಾ ಪೂಜೆ ಮಾಡುವ ಉದ್ದೇಶದಿಂದ ಅಲ್ಲ. ಗುರುಮಂದಿರದ ಜತೆ ಗ್ರಂಥಾಲಯ ಕಟ್ಟಿಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಸಂದೇಶ ಅವರದ್ದಾಗಿತ್ತು. ಆ ಸಂದೇಶ ಮಾತ್ರ ಪಾಲನೆಯಾಗುತ್ತಿಲ್ಲ ಎಂದು ಬಿ.ಕೆ. ಹರಿಪ್ರಸಾದ್ ಹೇಳಿದರು.ಶಿಕ್ಷಣಕ್ಕೆ ಆದ್ಯತೆ ನೀಡಿ: ಪೂಜೆ, ದೇವಸ್ಥಾನ ನಿರ್ಮಾಣ ಸಾಕು. ಇನ್ನು ಸಮಾಜದ ಶಿಕ್ಷಣಕ್ಕೆ ಆದ್ಯತೆ ನೀಡಿ ಸರಸ್ವತಿ ಮಂದಿರಗಳನ್ನು ಕಟ್ಟುವಂತಾಗಲಿ. ಈ ಗ್ರಂಥದ ಮೂಲಕ ಯುವಪೀಳಿಗೆಗೆ ಮಾರ್ಗದರ್ಶನವಾಗಲಿ ಎಂದು ಅವರು ಹೇಳಿದರು.
ಆರ್ಯ ಈಡಿಗ ಮಹಾ ಸಂಸ್ಥಾನದ ಪೀಠಾಧಿಪತಿ ಶ್ರೀ ವಿಖ್ಯಾತನಂದ ಸ್ವಾಮೀಜಿ ಆಶೀರ್ವಚನ ನೀಡಿ, ಜಾತಿ-ಶೋಷಣೆ ವಿರುದ್ಧ ಮಾತನಾಡಿದ ಬಹುತೇಕ ಮಹನೀಯರು ಯಾರೂ ಕ್ಷೇತ್ರಾರಾಧನೆಯನ್ನು ಬೆಂಬಲಿಸಿಲ್ಲ. ಆದರೆ ನಾರಾಯಣ ಗುರುಗಳು ಅದಕ್ಕೆ ಮಹತ್ವ ನೀಡಿದವರು. ಕ್ಷೇತ್ರಾರಾಧನೆಯನ್ನು ಬಿಟ್ಟು ಭಾರತೀಯ ಸಂಸ್ಕೃತಿ ಇಲ್ಲವಾಗಿದ್ದು ಬ್ರಹ್ಮಶ್ರೀ ನಾರಾಯಣ ಗುರುಗಳ ಕ್ಷೇತ್ರ ಸಂಕಲ್ಪ ಮಾನಸಿಕ ನೆಮ್ಮದಿಗೆ ಪೂರಕವಾಗಿದೆ ಎಂದರು.ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ ಎಚ್.ಎಸ್. ಸಾಯಿರಾಂ ಕಾರ್ಯಕ್ರಮ ಉದ್ಘಾಟಿಸಿ, ಶುಭ ಹಾರೈಸಿದರು.ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಮಂಗಳೂರು ವಿವಿ ಉಪಕುಲಪತಿ ಪ್ರೊ.ಪಿ.ಎಲ್.ಧರ್ಮ, ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್ ಚಂದ್ರ ಡಿ.ಸುವರ್ಣ, ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಅಧ್ಯಕ್ಷ ರಾಜಶೇಖರ್ ಕೋಟ್ಯಾನ್, ನಾರಾಯಣಗುರು ವಿಚಾರ ವೇದಿಕೆ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್, ಗುರುಬೆಳದಿಂಗಳು ಫೌಂಡೇಶನ್ ಅಧ್ಯಕ್ಷ ಪದ್ಮರಾಜ್, ನಮ್ಮ ಕುಡ್ಲ ವಾಹಿನಿ ನಿರ್ದೇಶಕ ಲೀಲಾಕ್ಷ ಬಿ. ಕರ್ಕೇರಾ, ಶ್ರೀ ನಾರಾಯಣಗುರು ವೈದಿಕ ಸಮಿತಿ ಅಧ್ಯಕ್ಷ ಹರೀಶ್ ಶಾಂತಿ, ನಾರಾಯಣಗುರು ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯವಿಕ್ರಮ ಕಲ್ಲಾಪು, ಕುಳಾಯಿ ಫೌಂಡೇಶನ್ ಅಧ್ಯಕ್ಷೆ ಪ್ರತಿಭಾ ಕುಳಾಯಿ, ಗ್ರಂಥ ಅನುವಾದಕರಾದ ಮೀನಾಕ್ಷಿ ರಾಮಚಂದ್ರ ಮತ್ತಿತರರು ಇದ್ದರು.ಯುವವಾಹಿನಿ ಕೇಂದ್ರ ಸಮಿತಿ ಮಾಜಿ ಅಧ್ಯಕ್ಷ ಸಾಧು ಪೂಜಾರಿ ಪ್ರಾಸ್ತಾವಿಕ ಮಾತನಾಡಿದರು. ಶ್ರೀರಕ್ಷಾ ಪ್ರಾರ್ಥಿಸಿದರು. ದಿನೇಶ್ ರಾಯಿ ಮತ್ತು ಪ್ರಜ್ಞಾ ನಿರೂಪಿಸಿದರು.