ತಿಂಗಳಿಗಾಗುವ ರಕ್ತ ಒಂದೇ ದಿನ ಸಂಗ್ರಹ

KannadaprabhaNewsNetwork |  
Published : Jun 15, 2026, 02:45 AM IST
ಯಶಸ್ವಿಯಾದ ವಿಶ್ವ ರಕ್ತದಾನಿಗಳ ದಿನಇನ್ನಷ್ಟು ರಕ್ತದಾನಿಗಳು ತಯಾರಾಗಲು ಪ್ರೇರೇಪಿಸಿದ ಕಾರ್ಯಕ್ರಮಗಳು | Kannada Prabha

ಸಾರಾಂಶ

ಭಾನುವಾರ ವಿಶ್ವ ರಕ್ತದಾನಿಗಳ ದಿನಾಚರಣೆ ಯಶಸ್ವಿಯಾಗಿ ನಡೆದಿದೆ. ಇವತ್ತೇ ತಿಂಗಳಿಗೆ ಆಗುವಷ್ಟು ರಕ್ತ ಸಂಗ್ರಹವಾಗಿದೆ. ಬಸವ ಕೇಂದ್ರದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಸೇರಿದಂತೆ ಹಲವಾರು ಮಂದಿ ರಕ್ತದಾನ ಮಾಡಿದರು. ವಿವಿಧ ಕಡೆ ರಕ್ತದಾನ ಶಿಬಿರ ನಡೆದರೆ, ಹಲವಾರು ದಾನಿಗಳು ರಕ್ತನಿಧಿ ಕೇಂದ್ರಕ್ಕೆ ಬಂದು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಭಾನುವಾರ ವಿಶ್ವ ರಕ್ತದಾನಿಗಳ ದಿನಾಚರಣೆ ಯಶಸ್ವಿಯಾಗಿ ನಡೆದಿದೆ. ಇವತ್ತೇ ತಿಂಗಳಿಗೆ ಆಗುವಷ್ಟು ರಕ್ತ ಸಂಗ್ರಹವಾಗಿದೆ. ಬಸವ ಕೇಂದ್ರದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಸೇರಿದಂತೆ ಹಲವಾರು ಮಂದಿ ರಕ್ತದಾನ ಮಾಡಿದರು. ವಿವಿಧ ಕಡೆ ರಕ್ತದಾನ ಶಿಬಿರ ನಡೆದರೆ, ಹಲವಾರು ದಾನಿಗಳು ರಕ್ತನಿಧಿ ಕೇಂದ್ರಕ್ಕೆ ಬಂದು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು.

ಹಿನ್ನೋಟ:

ರಕ್ತದಾನದ ಕುರಿತು ಅರಿವು ಮೂಡಿ ದಾನಿಗಳ ಸಂಖ್ಯೆ ನಿಧಾನವಾಗಿ ಹೆಚ್ಚುತ್ತಿದ್ದಂತೆ ರಕ್ತದ ಬೇಡಿಕೆಯೂ ಅದೇ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಈ ಅರಿವು ಇನ್ನಷ್ಟು ಹೆಚ್ಚಬೇಕೆಂಬ ಆಂದೋಲನದ ನಡುವೆಯೇ ಶಿವಮೊಗ್ಗ ರಕ್ತ ಸಂಗ್ರಹದಲ್ಲಿ ಸುತ್ತಮುತ್ತಲಿನ ಜಿಲ್ಲೆಗೆ ಹೋಲಿಸಿದರೆ ಮುಂಚೂಣಿಯಲ್ಲಿ ಬಂದು ನಿಂತಿದೆ.

ಒಬ್ಬ ರಕ್ತದಾನಿಯಿಂದ ನಾಲ್ಕು ಜೀವ ಉಳಿಸಬಹುದು ಎಂಬ ವಿಚಾರ, ರಕ್ತದಾನದ ಕುರಿತು ತೀವ್ರ ತರಹದ ಅರಿವು, ರಕ್ತದಾನದ ಶ್ರೇಷ್ಠತೆ, ಸುಶೀಕ್ಷತೆ, ಸಂಘ ಸಂಸ್ಥೆಗಳ ಜನಮುಖಿಯಾದ ಚಟುವಟಿಕೆ, ಉತ್ಸಾಹ ಇತ್ಯಾದಿ ಕಾರಣಗಳಿಂದ ರಕ್ತ ಸಂಗ್ರಹದಲ್ಲಿ ಪರವಾಗಿಲ್ಲ ಎನ್ನುವಷ್ಟರ ಮಟ್ಟಿಗೆ ಸ್ವಾವಲಂಬಿಯಾಗುವತ್ತ ಹೆಜ್ಜೆ ಇಟ್ಟಿರುವುದು ಮಾತ್ರವಲ್ಲ, ನೆರೆಯ ಜಿಲ್ಲೆಗಳ ಸರ್ಕಾರಿ ಆಸ್ಪತ್ರೆಗೂ ರಕ್ತ ಪೂರೈಸುವ ಮಟ್ಟಕ್ಕೆ ಶಿವಮೊಗ್ಗ ಜಿಲ್ಲೆ ಬಂದು ನಿಂತಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ 9 ರಕ್ತನಿಧಿ ಕೇಂದ್ರಗಳಿವೆ. ಒಂದೆರಡು ಖಾಸಗಿ ಆಸ್ಪತ್ರೆಗಳು ಕೂಡ ಸ್ವತಃ ರಕ್ತನಿಧಿ ಕೇಂದ್ರ ಸ್ಥಾಪಿಸಿಕೊಂಡಿವೆ. ಜಿಲ್ಲೆಯಲ್ಲಿ ಪ್ರತಿ ತಿಂಗಳೂ ಸರಾಸರಿ ಬೇಡಿಕೆ 250-300 ಯೂನಿಟ್‌ಗಳಿದ್ದು, ಈ ವರ್ಷ ಸರಾಸರಿ ಪೂರೈಕೆ ಕೂಡ ಬಹುತೇಕ ಸಮನಾಗಿದೆ. ಕೆಲವು ತಿಂಗಳಲ್ಲಿ ಜಾಸ್ತಿ ಆಗಿದ್ದು, ಪ್ರತಿ ರಕ್ತದಾನ ಶಿಬಿರದಲ್ಲಿಯೂ ಸಂಗ್ರಹವಾದ ರಕ್ತದಲ್ಲಿ ಶೇ.25 ರಷ್ಟು ಸರ್ಕಾರಿ ಆಸ್ಪತ್ರೆಗಳಿಗೆ ಪೂರೈಸಬೇಕೆಂಬ ನಿಯಮದಂತೆ ನೆರೆ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಿಗೂ ಇಲ್ಲಿಂದ ರಕ್ತ ನೀಡಲಾಗುತ್ತದೆ.

ಮಲೆನಾಡಿನ ಕೇಂದ್ರವಾದ ಶಿವಮೊಗ್ಗದಲ್ಲಿ ಈ ವರ್ಷ ನೆರೆ ಜಿಲ್ಲೆಗಳಿಗೆ ಹೋಲಿಸಿದರೆ ಬೇಡಿಕೆ ಮತ್ತು ಪೂರೈಕೆ ಹೆಚ್ಚಿದೆ. ಹಿಂದಿನ ವರ್ಷಗಳಲ್ಲಿ ಪೂರೈಕೆಗಿಂತ ಬೇಡಿಕೆ ಹೆಚ್ಚಿತ್ತು. ಬೇಡಿಕೆ ಹೆಚ್ಚಲು ಪ್ರಮುಖ ಕಾರಣವೆಂದರೆ ಶಿವಮೊಗ್ಗವು ವೈದ್ಯಕೀಯ ಹಬ್ ಆಗಿ ಬೆಳೆಯುತ್ತಿದ್ದು, ನೆರೆ ಜಿಲ್ಲೆಗಳ ರೋಗಿಗಳು ಇಲ್ಲಿಗೇ ಬರುತ್ತಾರೆ.

ಆದರೆ ಈ ವರ್ಷ ಈ ಪೂರೈಕೆಯಲ್ಲಿ ಏರಿಕೆ ಕಾಣಿಸಿದೆ. ಇದಕ್ಕೆ ಕಾರಣವೆಂದರೆ, ಇಲ್ಲಿನ ಜನರಲ್ಲಿನ ಉತ್ಸಾಹ, ಅರಿವು ಮತ್ತು ಸಂಘ ಸಂಸ್ಥೆಗಳ ನಿರಂತರ ಆಸಕ್ತಿಯ ಫಲವಾಗಿದೆ. ಶಿವಮೊಗ್ಗದಲ್ಲಿ ಸುಮಾರು 100 ಜನ ರಕ್ತದಾನಿಗಳು ನಿಯಮಿತವಾಗಿ ರಕ್ತದಾನ ಮಾಡುತ್ತಿದ್ದು, ರಕ್ತದಾನಿಗಳ ಸಂಘ, ವ್ಯಾಟ್ಸಾಪ್ ಗ್ರೂಪ್‌ಗಳು ಕೂಡ ಇದೆ.

ಮಾರ್ಚ್ ತಿಂಗಳಿಂದ ಜುಲೈಯವರೆಗೆ ರಕ್ತ ಸಂಗ್ರಹಣೆಯಲ್ಲಿ ತೀವ್ರ ಕುಸಿತ ಕಾಣುತ್ತದೆ. ಇದಕ್ಕೆ ಶಾಲಾ ಕಾಲೇಜುಗಳ ರಜಾ ದಿನಗಳು, ಜನರ ಪ್ರವಾಸ ಕಾರ್ಯಕ್ರಮ ಇತ್ಯಾದಿಗಳಿಂದಾಗಿ ರಕ್ತ ದಾನ ಮಾಡುವವರ ಸಂಖ್ಯೆ ಕಡಿಮೆಯಾಗುತ್ತದೆ. ಸಂಘ ಸಂಸ್ಥೆಗಳು ಕೂಡ ಈ ಅವಧಿಯಲ್ಲಿ ಶಿಬಿರಗಳನ್ನು ಆಯೋಜಿಸುವುದಿಲ್ಲ. ಇದರಿಂದ ರಕ್ತ ಕೇಂದ್ರಗಳ ಮೇಲೆ, ಆಸ್ಪತ್ರೆಯ ಮೇಲೆ ತೀವ್ರ ಒತ್ತಡ ಬೀಳುತ್ತದೆ. ಬೇಡಿಕೆಯ ಅರ್ಧಕ್ಕಿಂತ ಕಡಿಮೆ ಪೂರೈಕೆಯಾಗುತ್ತದೆ. ರಕ್ತದಾನದ ಮಹತ್ವ ಅರಿತಾಗಲೇ ಇದರ ಕುರಿತು ನಿಜವಾದ ಅರಿವು ಮೂಡುತ್ತದೆ. ಆರೋಗ್ಯವಂತ ವ್ಯಕ್ತಿಯು ಮಾಡುವ ರಕ್ತದಾನದಿಂದ ಮೂರು ಜನರ ಜೀವ ಉಳಿಸುವುದು ಮಾತ್ರವಲ್ಲ, ದಾನಿಯ ಆರೋಗ್ಯ ಕೂಡ ಸುಧಾರಿಸುತ್ತದೆ. ಇದೊಂದು ಶ್ರೇಷ್ಠ ದಾನ ಎಂಬುದು ಅರ್ಥ ಮಾಡಿಕೊಳ್ಳಬೇಕು. ಮುಖ್ಯವಾಗಿ ಯುವ ಜನತೆಯಲ್ಲಿ ಇದರ ಕುರಿತು ಇರುವ ತಪ್ಪು ಕಲ್ಪನೆ, ಭಯ ಎಲ್ಲವೂ ಹೋಗಿ, ಇದೊಂದು ಆಂಧೋಲನದ ರೀತಿ ಬೆಳೆಯಬೇಕು. ಸಂಘ ಸಂಸ್ಥೆಗಳು ರಕ್ತದಾನ ಶಿಬಿರ ಯೋಜಿಸುವ ವಿಚಾರ ತಿಳಿಸಿದರೆ ನಾವೇ ಸ್ಥಳಕ್ಕೆ ಬಂದು ಎಲ್ಲ ರೀತಿಯಲ್ಲಿ ನಿರ್ವಹಣೆ ಮಾಡುತ್ತೇವೆ. ನಾನೇ ಸ್ವತಃ 98 ಬಾರಿ ರಕ್ತದಾನ ಮಾಡಿದ್ದೇನೆ.

ಎಸ್.ಕೆ.ಸತೀಶ್ ಪಿ.ಆರ್.ಒ., ರೋಟರಿ ರಕ್ತನಿಧಿ ಕೇಂದ್ರ, ಶಿವಮೊಗ್ಗ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವೈದ್ಯ-ಸಿಬ್ಬಂದಿ ಕಾಳಜಿಯಿಂದ ರೋಗಿಗಳಿಗೆ ಉತ್ತಮ ಸೇವೆ: ವಿಶಾಲಾಕ್ಷಿ ಪದ್ಮನಾಬ್
ಪ್ರೊ.ಎ.ಎನ್.ಮೂರ್ತಿರಾವ್‌ ಮನುಷ್ಯನಲ್ಲಿರುವ ತಳಮಳ, ನಂಬಿಕೆ ತೆರೆದಿಟ್ಟಿದ್ದಾರೆ: ಎಂ.ಜಿ.ರೇವಣ್ಣ