ಕೌಟುಂಬಿಕ ಸಂಬಂಧ ಗಟ್ಟಿಯಾಗಲು ತಾಯಿ ಪ್ರೀತಿ ಅಗತ್ಯ

KannadaprabhaNewsNetwork |  
Published : May 21, 2024, 12:33 AM IST
00000 | Kannada Prabha

ಸಾರಾಂಶ

ಕೌಟುಂಬಿಕ ಸಂಬಂಧಗಳು ಗಟ್ಟಿಯಾಗಲು ಪ್ರತಿಯೊಬ್ಬರಲ್ಲೂ ತಾಯಿಯ ಪ್ರೀತಿ ಮತ್ತು ಸಹನೆ ಅತ್ಯಗತ್ಯ ಎಂದು ತುಮಕೂರು ನಗರ ಸಾಂತ್ವನ ಕೇಂದ್ರದ ಸಾಮಾಜಿಕ ಕಾರ್ಯಕರ್ತೆ ಪಾರ್ವತಮ್ಮ ರಾಜಕುಮಾರ ತಿಳಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಕೌಟುಂಬಿಕ ಸಂಬಂಧಗಳು ಗಟ್ಟಿಯಾಗಲು ಪ್ರತಿಯೊಬ್ಬರಲ್ಲೂ ತಾಯಿಯ ಪ್ರೀತಿ ಮತ್ತು ಸಹನೆ ಅತ್ಯಗತ್ಯ ಎಂದು ತುಮಕೂರು ನಗರ ಸಾಂತ್ವನ ಕೇಂದ್ರದ ಸಾಮಾಜಿಕ ಕಾರ್ಯಕರ್ತೆ ಪಾರ್ವತಮ್ಮ ರಾಜಕುಮಾರ ತಿಳಿಸಿದರು.ತುಮಕೂರು ನಗರ ಸಾಂತ್ವನ ಕೇಂದ್ರ, ವರದಕ್ಷಿಣೆ ವಿರೋಧಿ ವೇದಿಕೆ, ಉಪ್ಪಾರಹಳ್ಳಿ ಚನ್ನಬಸವೇಶ್ವರ ನಗರ ಬಲಮುರಿ ಗಣೇಶ ಭಜನಾ ಮಂಡಳಿ, ಮುಂಜಾನೆ ಸ್ನೇಹ ಬಳಗದ ಸಹಯೋಗದೊಂದಿಗೆ ಚನ್ನಬಸವೇಶ್ವರ ಬಡಾವಣೆಯಲ್ಲಿ ಆಯೋಜಿಸಿದ್ದ ತಾಯಂದಿರ ದಿನಾಚರಣೆ, ಮಹಿಳೆಯರಿಗೆ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು‌‌‌.

ಕೌಟುಂಬಿಕ ಸಂಬಂಧಗಳು ಕ್ಷೀಣಿಸುತ್ತಿರುವ ಈಗಿನ ದಿನಮಾನಗಳಲ್ಲಿ ಪರಸ್ಪರ ಪ್ರೀತಿ ಮತ್ತು ಸಂಬಂಧಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಯೋಚಿಸಬೇಕಿದೆ ಎಂದರು.

ಎಲ್ಲದಕ್ಕೂ ಕಾನೂನು ಕಟ್ಟಳೆ, ಪೊಲೀಸ್ ಠಾಣೆ, ನ್ಯಾಯಾಲಯವೇ ಅಂತಿಮವಾಗಬಾರದು. ಸಮಸ್ಯೆಗಳನ್ನು ನಾವೇ ಬಗೆಹರಿಸಿಕೊಳ್ಳುವಂತಹ ವಾತಾವರಣ ನಿರ್ಮಾಣವಾಗಬೇಕು. ಇದಕ್ಕಾಗಿ ಪ್ರತಿಯೊಬ್ಬರಲ್ಲಿಯೂ ಕುಟುಂಬ ಪ್ರೀತಿಯ ಜೊತೆಗೆ ತಾಯಿ ಹೃದಯ ಇರಬೇಕು ಎಂದು ಹೇಳಿದರು.

ನಿವೃತ್ತ ಪೊಲೀಸ್ ಅಧಿಕಾರಿ ಲಕ್ಷ್ಮಿನರಸಿಂಹಶೆಟ್ಟಿ ಮಾತನಾಡಿ, ಹಿಂದೆ ಕುಟುಂಬಗಳಲ್ಲಿ ಸದಸ್ಯರ ಸಂಖ್ಯೆ ಹೆಚ್ಚಿತ್ತು. ಕುಟುಂಬಗಳಲ್ಲಿ ಒಬ್ಬರಿಗೊಬ್ಬರು ಗೌರವ ಕೊಡುತ್ತಲೇ ತಮ್ಮ ಕುಟುಂಬಗಳನ್ನು ಒಟ್ಟುಗೂಡಿಸಿಕೊಂಡು ನಡೆಯುತ್ತಿದ್ದರು. ಶಿಕ್ಷಣ ಹೆಚ್ಚಿದಂತೆ, ವಿದ್ಯಾವಂತರು ಹೆಚ್ಚಿದಂತೆಲ್ಲಾ ಕುಟುಂಬಗಳು ಸಂಕೀರ್ಣವಾದವು ಎಂದರು.

ಅಮ್ಮನ ಕುರಿತಾದ ಕೆಲವು ಹಾಡುಗಳನ್ನು ಸುಶ್ರಾವ್ಯವಾಗಿ ಹಾಡಿದರು. ಅಮ್ಮನ ಪಾತ್ರವನ್ನು ಬಗೆ ಬಗೆಯಾಗಿ ವಿವರಿಸಿದರು.

ಪೊಲೀಸ್ ಇಲಾಖೆಯ ನಿವೃತ್ತ ಅಧಿಕಾರಿ ಸುಶೀಲಮ್ಮ ಮಾತನಾಡಿ, ಕುಟುಂಬಗಳಲ್ಲಿ ಆಗುತ್ತಿರುವ ವಿದ್ಯಮಾನಗಳು, ಇತ್ತೀಚಿನ ಬೆಳವಣಿಗೆಗಳನ್ನು ವಿವರಿಸುತ್ತಾ ಕುಟುಂಬದಲ್ಲಿ ಪ್ರೀತಿ ಮತ್ತು ಸಹನೆ ಕಾಣೆಯಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು.

ಕರ್ನಾಟಕ ಬ್ಯಾಂಕ್ ನಿವೃತ್ತ ಎಜಿಎಂ ಕೆ.ಜೆ.ಮಂಜುನಾಥ್ ಮಾತನಾಡಿ, ತಾಯಿ ಎಂದರೆ ಅದಕ್ಕೊಂದು ವಿಶೇಷ ಮಹತ್ವವಿದೆ. ಬದುಕಿನ ಶಕ್ತಿಯಾಗಿ, ಕುಟುಂಬದ ಕೀರ್ತಿಯಾಗಿ ತಾಯಿ ಸ್ಥಾನ ವಿಶೇಷವಾದದ್ದು. ಈ ಗೌರವ ಸ್ಥಾನವನ್ನು ಎಂದೆಂದಿಗೂ ಉಳಿಸುವಂತಹ ಕಾರ್ಯಗಳು ಆಗಬೇಕು ಎಂದರು.

ಜಿಲ್ಲಾಸ್ಪತ್ರೆಯ ನಿವೃತ್ತ ಅಧಿಕಾರಿ ಪ್ರಾಣೇಶ್, ವಿವಿಧ ಸಂಘಟನೆಗಳ ಪ್ರಮುಖರಾದ ರಾಧಾನಾರಾಯಣ್, ಶೈಲಜಾ ಮಂಜುನಾಥ್, ಗಂಗಲಕ್ಷ್ಮಿ, ಸ್ವರ್ಣಲತಾ, ಜಯಮ್ಮ, ಉಮಾಮಹೇಶ್, ರಾಜಶೇಖರ್ ಇವರೆಲ್ಲ ಕುಟುಂಬ ಮತ್ತು ತಾಯಂದಿರ ಪಾತ್ರದ ಬಗ್ಗೆ ತಮ್ಮದೇ ಆದ ಅನುಭವಗಳನ್ನು ಹಂಚಿಕೊಂಡರು. ಸಾಂತ್ವನ ಕೇಂದ್ರದ ಯುವರಾಣಿ ಹಾಗೂ ಸ್ಥಳೀಯ ಮಂಡಳಿಗಳ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಜಯನಗರ ಪಾಲಿಕೆ ಬಜಾರ್‌ ಮಳಿಗೆಗಳ ಇ-ಹರಾಜು ಮೂಲಕ ವಿತರಿಸಿ: ಮಹೇಶ್ವರ್ ರಾವ್ ಸೂಚನೆ
ರಸ್ತೆ ಅಪಘಾತ ಸೈಕಲ್‌ ಸವಾರ ಸಾವು