ಧಾರವಾಡ: ಐದು ವರ್ಷದ ಅಂಗವಿಕಲ ಬಾಲಕಿಯನ್ನು ಕತ್ತು ಕುಯ್ದು ಗುರುವಾರ ಹತ್ಯೆಗೈದ ಪ್ರಕರಣದಲ್ಲಿ ಶಂಕೆ ನಿಜವಾಗಿದ್ದು, ತಾಯಿಯೇ ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿ ಬರುತ್ತಿರುವ ಹಿನ್ನೆಲೆಯಲ್ಲಿ ಮಗುವನ್ನು ಬೀಭತ್ಸ ರೀತಿಯಲ್ಲಿ ಹತ್ಯೆಗೈದಿದ್ದಾಗಿ ದೂರು ದಾಖಲಾಗಿದೆ.
ಗುರುವಾರ ರಾತ್ರಿ ಜ್ಯೋತಿಯನ್ನು ಪೊಲೀಸರು ಸಂಶಯದ ಮೇಲೆ ಕರೆದಂತಾಗ ಕರುಳು ಹಿಂಡುವ ರೀತಿಯಲ್ಲಿ ಅಳುತ್ತಿದ್ದಳು. ಈ ಮಹಿಳೆಯ ಅಳು ನೋಡಿದರೆ, ಪಾಪಾ ಯಾವುದೋ ತೊಂದರೆಯಾಗಿದೆ ಎಂದು ಭಾವಿಸಬೇಕು. ಆದರೆ, ವಿಚಾರಣೆ ನಂತರ ಆಕೆ ಮಾಡಿರುವ ಕೃತ್ಯ ಕೇಳಿ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ. ತರಕಾರಿ ಕತ್ತರಿಸುವ ಈಳಿಗೆಯಿಂದ ವಿಕಲಚೇತನ ಮಗುವಿನ ಕತ್ತು ಕುಯ್ದು ಹತ್ಯೆ ಮಾಡಿದ್ದು ಪೊಲೀಸ್ ತನಿಖೆಯಿಂದ ಬಯಲಾಗಿದೆ.
ಏಳು ವರ್ಷಗಳ ಹಿಂದೆ ಸವದತ್ತಿಯ ಕಲ್ಲಯ್ಯ ಹಿರೇಮಠ ಹಾಗೂ ಕಮಲಾಪುರ ಬಡಾವಣೆಯ ಜ್ಯೋತಿ ಪ್ರೀತಿಸಿ ಮದುವೆಯಾಗಿದ್ದರು. ಈ ದಂಪತಿಗೆ ಐದು ವರ್ಷಗಳ ಹಿಂದೆ ಅವಳಿ-ಜವಳಿ ಹೆಣ್ಣು ಮಕ್ಕಳಾಗಿದ್ದವು. ಅದರಲ್ಲಿ ಒಂದು ಹೆಣ್ಣು ಮಗು ಸಹನಾಳಿಗೆ ಎರಡೂ ಕಾಲುಗಳ ಸ್ವಾದೀನ ಇರಲಿಲ್ಲ. ಕೊಂಚ ಮಂದಬುದ್ಧಿಯವಳೂ ಆಗಿದ್ದಳು. ದಂಪತಿ ಮಧ್ಯೆ ಜಗಳ ಶುರುವಾಗಿ ಅದು ವಿಚ್ಛೇದನ ವರೆಗೂ ಹೋಯಿತು.ಕೊನೆಗೆ ಕಲ್ಲಯ್ಯನಿಂದ ವಿವಾಹ ವಿಚ್ಛೇದನ ಪಡೆದ ಜ್ಯೋತಿ ಮಕ್ಕಳೊಂದಿಗೆ ಬಂದು ತಾಯಿಯ ಮನೆಯಲ್ಲಿಯೇ ವಾಸವಾಗಿದ್ದಳು. ಎರಡು ವರ್ಷಗಳ ಹಿಂದೆ ಹುಬ್ಬಳ್ಳಿಯ ನವನಗರದ 22 ವರ್ಷದ ರಾಹುಲ್ ತೆರದಾಳ ಯುವಕನೊಂದಿಗೆ ಸ್ನೇಹ ಬೆಳೆಸಿಕೊಂಡ ಜ್ಯೋತಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಗುರುವಾರ ಸಂಜೆ ರಾಹುಲ್ ಮನೆಗೆ ಬಂದಿದ್ದ. ಇದೇ ವೇಳೆ ಇಬ್ಬರೂ ಸೇರಿ ಸಹನಾಳ ಕತ್ತು ಕತ್ತರಿಸಲಾಗಿದೆ. ಮಗು ಮೇಲಿಂದ ಬಿದ್ದಿದೆ ಎಂದು ಜ್ಯೋತಿ ಜಿಲ್ಲಾಸ್ಪತ್ರೆಗೆ ಹೋಗಿದ್ದಳು. ಆದರೆ, ಅನುಮಾನಗೊಂಡ ಪೊಲೀಸರು ವಿಚಾರಣೆ ನಡೆಸಿದಾಗ ತಾಯಿ ಜ್ಯೋತಿಯೇ ತನ್ನ ಪ್ರಿಯಕರನೊಂದಿಗೆ ಸೇರಿ ಮಗುವಿನ ಕತ್ತನ್ನು ಕೊಯ್ದಿರುವುದು ಖಚಿತವಾಗಿದೆ.