ಬಾಗಿಲು ತೆರೆಯದ ಬಹು ನಿರೀಕ್ಷಿತ ಕ್ರೀಡಾ ಸಂಕೀರ್ಣ!

KannadaprabhaNewsNetwork |  
Published : May 04, 2026, 02:00 AM IST
₹ 52 ಕೋಟಿ ವೆಚ್ಚದಲ್ಲಿ  ಧಾರವಾಡದಲ್ಲಿ ನಿರ್ಮಿಸಿರುವ ಕ್ರೀಡಾ ಸಂಕೀರ್ಣ | Kannada Prabha

ಸಾರಾಂಶ

ಮಾ. 14ರಂದು ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಂದ ಉದ್ಘಾಟನೆಗೊಂಡ ಕ್ರೀಡಾ ಸಂಕೀರ್ಣ ಈ ವರೆಗೂ ಆರಂಭವಾಗದೆ ಇರುವುದು ಕ್ರೀಡಾಪಟುಗಳಿಗೆ ನಿರಾಸೆ ಮೂಡಿಸಿದೆ.

ಬಸವರಾಜ ಹಿರೇಮಠ

ಧಾರವಾಡ:

ಜಿಲ್ಲೆಯ ಕ್ರೀಡಾ ಪ್ರತಿಭೆಗಳ ಹಲವು ವರ್ಷಗಳ ಕನಸು ಇನ್ನೇನು ನನಸಾಯ್ತು... ಜತೆಗೆ ಸುಮಾರು ಹತ್ತು ವರ್ಷಗಳಿಂದ ಈಜುಗೊಳಕ್ಕಾಗಿ ಕಾಯ್ದಿದ್ದಕ್ಕೂ ಸಾರ್ಥಕ ಆಯ್ತು ಎಂದುಕೊಳ್ಳುತ್ತಿದ್ದವರಿಗೆ ನಿರಾಸೆ ಆವರಿಸಿದೆ. ₹ 52 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಸುಸಜ್ಜಿತ ಕ್ರೀಡಾ ಸಂಕೀರ್ಣ ಉದ್ಘಾಟನೆಗೊಂಡು ಒಂದೂವರೆ ತಿಂಗಳಾದರೂ ಇನ್ನೂ ಬಾಗಿಲು ತೆರೆದಿಲ್ಲ.

ಮಾ. 14ರಂದು ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಂದ ಈ ಕ್ರೀಡಾ ಸಂಕೀರ್ಣ ಉದ್ಘಾಟನೆಗೊಂಡಿತ್ತು. ಕೆಲವೇ ದಿನಗಳಲ್ಲಿ ಈ ಸಂಕೀರ್ಣದಲ್ಲಿರುವ ಅಂತಾರಾಷ್ಟ್ರೀಯ ಸೌಲಭ್ಯವುಳ್ಳ ಈಜುಗೊಳ ಸೇರಿ ಹಲವು ಕ್ರೀಡಾ ಚಟುವಟಿಕೆ ಶುರುವಾಗಲಿವೆ ಎಂಬ ನಿರೀಕ್ಷೆ ಇತ್ತು.

ಈಗಾಗಲೇ ವಿಳಂಬವಾಗಿ ನಿರ್ಮಿಸಿರುವ ಕ್ರೀಡಾ ಸಂಕೀರ್ಣದ ಪ್ರಯೋಜನ ಪಡೆಯಲು ಕ್ರೀಡಾ ಪ್ರತಿಭೆಗಳು ಕಾತರದಿಂದ ಕಾಯುತ್ತಿದ್ದರು. ಪ್ರಮುಖವಾಗಿ ಬೇಸಿಗೆ ಕಾಲವಿದ್ದು, ಈಜುಗೊಳಕ್ಕಾಗಿ ಮಕ್ಕಳಾದಿಯಾಗಿ ಧಾರವಾಡ ಜನತೆ ಚಾತಕಪಕ್ಷಿಯಂತೆ ಎದುರು ನೋಡುತ್ತಿದ್ದಾರೆ. ಆದರೆ, ಕ್ರೀಡಾ ಸಂಕೀರ್ಣದ ನಿರ್ವಹಣೆ ಯಾರಿಗೆ ನೀಡಬೇಕು ಎಂಬುದೇ ಇನ್ನೂ ಅಂತಿಮವಾಗಿಲ್ಲ. ಈ ಹಿನ್ನೆಲೆಯಲ್ಲಿ ಕ್ರೀಡಾ ಸಂಕೀರ್ಣದ ಬಾಗಿಲು ತೆರೆದಿಲ್ಲ.

ಜಿಲ್ಲೆಯಲ್ಲಿ ಕ್ರೀಡಾಪಟುಗಳಿಗೆ ಪ್ರತ್ಯೇಕ ಕ್ರೀಡಾ ಸಂಕೀರ್ಣವಿಲ್ಲದೆ ತೀವ್ರ ತೊಂದರೆಯಾಗಿತ್ತು. ಈ ಸಮಸ್ಯೆ ಮನಗಂಡು ಈ ಮೊದಲಿದ್ದ ಈಜುಗೊಳದ ಸ್ಥಳದಲ್ಲಿಯೇ ಅಂತಾರಾಷ್ಟ್ರೀಯ ಮಟ್ಟದ ಈಜುಕೊಳ ಮತ್ತು ಕ್ರೀಡಾ ಸಂಕೀರ್ಣ ನಿರ್ಮಿಸಲಾಗಿದೆ. ಎನ್‌ಎಂಡಿಸಿ ಮತ್ತು ಒಎನ್‌ಜಿಸಿ ಕಂಪನಿಗಳ ಸಿಎಸ್ಆರ್‌ ಅನುದಾನದಲ್ಲಿ ₹ 52 ಕೋಟಿ ವೆಚ್ಚದಲ್ಲಿ 1.6 ಎಕರೆ ವಿಶಾಲ ಜಾಗದಲ್ಲಿ ಸಂಕೀರ್ಣ ನಿರ್ಮಾಣ ಮಾಡಲಾಗಿದೆ.

ಏನೆಲ್ಲ ಸೌಲಭ್ಯ?

ಈಜುಕೋಳದ ಕೆಳ ಮಹಡಿಯಲ್ಲಿ ಈಜುಕೊಳದ ನೀರು ಸಂಸ್ಕರಣಾ ಘಟಕ, ಸ್ನಾನಗೃಹ, ಕಾರ್ಯಾಲಯ, ಕೇರಂ, ಚೆಸ್, ಈ ತರಹದ ಕ್ರೀಡೆಗಳಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಮೊದಲ ಮಹಡಿಯಲ್ಲಿ ಕಬಡ್ಡಿ, ಕುಸ್ತಿ, ಟೆಕ್ವಾಂಡೋ, ಟೇಬಲ್ ಟೆನ್ನಿಸ್, ಜಿಮ್ನಾಸ್ಟಿಕ್, ವೀಕ್ಷಕರ ಗ್ಯಾಲರಿ ಸೇರಿದಂತೆ ಇನ್ನಿತರ ಸೌಲಭ್ಯಗಳಾದ ಶೌಚಾಲಯ ವ್ಯವಸ್ಥೆ, ಕ್ರೀಡಾಪಟುಗಳಿಗೆ ಡಾರ್ಮಿಟೆರಿ ವ್ಯವಸ್ಥೆ ಇದೆ.

ನೆಲಮಹಡಿಯಲ್ಲಿ ಕಾರ್ಯಾಲಯ, ಶೂಟಿಂಗ್ ಆರ್ಚರಿ ಇದ್ದು ಇದರೊಂದಿಗೆ ಕಾರ್, ಬೈಕ್‌ಗಳಿಗೆ ಪ್ರತ್ಯೇಕ ಪಾರ್ಕಿಂಗ್, ಕ್ಯಾಂಟಿನ್ ವ್ಯವಸ್ಥೆ ಇದೆ. ಕ್ರೀಡಾಂಗಣದ ಮುಂಭಾಗದ ರಸ್ತೆಗೆ ಹೊಂದಿಕೊಂಡು 8 ಮಳಿಗೆ, ಕ್ರೀಡಾಂಗಣದ ಒಳಗಡೆ ವೀಕ್ಷಕರ ಗ್ಯಾಲರಿ, ಅಲ್ಲದೇ, ಸಿಬ್ಬಂದಿ ವಸತಿಗೃಹ, ಸೆಕ್ಯುರಿಟಿ ಕ್ಯಾಬಿನ್, ಟಿಕೆಟ್ ಕೌಂಟರ್ ಸಹ ಇದೆ.

ಯಾವಾಗ ಆರಂಭ?

ಒಟ್ಟಾರೆ ಬಹೂಪಯೋಗಿ ಕ್ರೀಡಾ ಸಂಕೀರ್ಣ ಇದಾಗಿದ್ದು, ಬೇಸಿಗೆ ಮುಗಿಯುವ ಒಳಗೆ ಕ್ರೀಡಾ ಸಂಕೀರ್ಣ ಕ್ರೀಡಾಪಟುಗಳಿಗೆ ಮುಕ್ತವಾಗಬೇಕು. ಇಲ್ಲದಿದ್ದರೆ ಕ್ರೀಡಾ ಸಂಕೀರ್ಣ ಪ್ರಯೋಜನ ಈ ವರ್ಷಕ್ಕೆ ಅಷ್ಟಕ್ಕಷ್ಟೇ ಎಂದು ಕ್ರೀಡಾಸಕ್ತರು ಆಡಳಿತ ವ್ಯವಸ್ಥೆ ವಿರುದ್ಧ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಕೋಟ್‌...ರವಾಡಕ್ಕೆ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಕಾಂಪ್ಲೆಕ್ಸ್‌ ತಂದು ಕೊಟ್ಟಿದ್ದೇವೆ. ಅದರ ನಿರ್ವಹಣೆಗೆ ಜಿಲ್ಲಾಡಳಿತವು ಸಂಘ-ಸಂಸ್ಥೆಗಳಿಗೆ ನೀಡಲು ಸಹ ಉದ್ಘಾಟನೆ ದಿನವೇ ಸೂಚಿಸಲಾಗಿದೆ. ಇಷ್ಟಾಗಿಯೂ ಈ ಬಗ್ಗೆ ಜಿಲ್ಲಾಧಿಕಾರಿ ಕ್ರಮಕೈಗೊಳ್ಳದೆ ಇರುವುದು ನಮಗೂ ಬೇಸರ ಮೂಡಿಸಿದೆ. ಶೀಘ್ರ ಕ್ರೀಡಾ ಸಂಕೀರ್ಣ ಕ್ರೀಡಾಪಟುಗಳಿಗೆ ಮುಕ್ತ ಮಾಡಲು ತಾವು ಸೂಚನೆ ನೀಡಲಾಗುವುದು.

ಅರವಿಂದ ಬೆಲ್ಲದ, ಶಾಸಕರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಎಸ್‌ವೈ ಅಭಿಮಾನೋತ್ಸವಕ್ಕೆ ಜಿಲ್ಲೆಯಿಂದ ೫೦ ಸಾವಿರ ಅಭಿಮಾನಿಗಳು
ಶ್ರಮಿಕರೇ ದೇಶದ ನಿಜವಾದ ಶಿಲ್ಪಿಗಳು