- ಅಕ್ರಮ ಸೇತುವೆ ನಿರ್ಮಿಸಿ ಮರಳು ಸಾಗಣೆ । ನಿದ್ದೆಯಿಂದ ಎಚ್ಚೆತ್ತ ಇಲಾಖೆ ಅಧಿಕಾರಿಗಳು: ಕಾರ್ಯಾಚರಣೆ ಶುರು - ದಾವಣಗೆರೆ, ಶಿವಮೊಗ್ಗ ಜಿಲ್ಲೆಗಳ ಕಂದಾಯ, ಗಣಿ-ಭೂ ವಿಜ್ಞಾನ, ಪೊಲೀಸ್ ಇಲಾಖೆಗಳಿಂದ ಜಂಟಿ ಕಾರ್ಯಾಚರಣೆ
ಕನ್ನಡಪ್ರಭ ವಾರ್ತೆ ದಾವಣಗೆರೆ
ಗಣಿ ಮತ್ತು ಭೂ ವಿಜ್ಞಾನ ಸಚಿವರ ತವರು ಜಿಲ್ಲೆಯಲ್ಲೇ ತುಂಗಭದ್ರಾ ನದಿಯಲ್ಲಿ ಅಕ್ರಮ ಮರಳು ದಂಧೆ ಬೇರು ಬಿಡುತ್ತಿದೆ. ಆದರೆ, ಅಕ್ರಮಕ್ಕೆ ಕಡಿವಾಣ ಹಾಕಬೇಕಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗುತ್ತಿದೆ.ಜಿಲ್ಲೆಯ ಹೊನ್ನಾಳಿ- ನ್ಯಾಮತಿ ತಾಲೂಕು, ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಗಡಿಯಲ್ಲಿ ಅನಧಿಕೃತ, ಅಕ್ರಮ ಮರಳು ದಂಧೆ ಹೆಚ್ಚುತ್ತಿದೆ. ಹರಿಹರ, ಹೊನ್ನಾಳಿ, ನ್ಯಾಮತಿ ತಾಲೂಕಿನ ನದಿ ಪಾತ್ರದಲ್ಲಿ ಅನಧಿಕೃತ ಮರಳು ದಂಧೆ ನಡೆಯುತ್ತಿದೆ. ಈ ದಂಧೆಗೆಂದೇ ಹನಗವಾಡಿ ಬಳಿ ಅಕ್ರಮವಾಗಿ ಸೇತುವೆಯನ್ನೇ ಕಟ್ಟಿಕೊಂಡಿದ್ದಾರೆ. ನ್ಯಾಮತಿ ತಾಲೂಕಿನ ಮಳಲಿ ಸೇರಿದಂತೆ ಅನೇಕ ಕಡೆ ನದಿ ತಟದಲ್ಲೇ ಅಕ್ರಮ ಮರಳು ಸಂಗ್ರಹಿಸಿ, ಕಾನೂನು ಹಾಗೂ ಇಲಾಖೆಯ ಭಯವೇ ಇಲ್ಲದಂತೆ ಮರಳು ದಂಧೆ ಅವ್ಯಾಹತವಾಗಿ ಸಾಗುತ್ತಿದೆ.
ಸಿಮೆಂಟ್ ಪೈಪ್‌ಗಳು, ಸೈಜುಕಲ್ಲುಗಳ ಸೇತುವೆ!:ಅಕ್ರಮ ಮರಳು ದಂಧೆಗೆ ನದಿಯೊಡಲಲ್ಲೇ ಬೃಹದಾಕಾರದ ಸಿಮೆಂಟ್ ಪೈಪ್‌ಗಳು, ದೊಡ್ಡ ಸೈಜು ಕಲ್ಲುಗಳು, ಮಣ್ಣು ಬಳಸಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಿಕೊಂಡಿದ್ದಾರೆ. ಇಷ್ಟೆಲ್ಲಾ ಆಗಿದ್ದರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮೈಮರೆತಿದೆ. ಅಕ್ರಮ ಸೇತುವೆ ನಿರ್ಮಿಸಿದ್ದನ್ನು ಗಮನಿಸಿದರೆ ಇಲಾಖೆ ಅಧಿಕಾರಿಗಳು ಏನು ಮಾಡುತ್ತಿದ್ದಾರೆಂಬ ಪ್ರಶ್ನೆ ಸಹಜವಾಗಿಯೇ ಎಲ್ಲರ ಕೆರಳಿಸಿದೆ. ನೈಸರ್ಗಿಕವಾಗಿ ಹರಿಯುವ ನದಿಯ ಮಾರ್ಗ, ದಿಕ್ಕನ್ನೇ ಬದಲಿಸಿ, ಮರಳು ದಂಧೆಯವರು ಅದನ್ನು ತಮ್ಮ ಲಾಭದ ದಂಧೆಯಾಗಿ ಮಾಡಿಕೊಳ್ಳುತ್ತಿದ್ದಾರೆ. ಈ ಮೂಲಕ ಕಾನೂನಿನ ವಿರುದ್ಧ ಸಾಗುತ್ತ, ಪ್ರಕೃತಿಗೆ ಸೆಡ್ಡು ಹೊಡೆಯುತ್ತಿದ್ದಾರೆ.
ಕಡೆಗೂ ಜಂಟಿ ಕಾರ್ಯಾಚರಣೆ:ಶಿವಮೊಗ್ಗ ಜಿಲ್ಲೆಯ ಗಡಿಭಾಗ, ದಾವಣಗೆರೆ ಜಿಲ್ಲೆಯ ನದಿ ಪಾತ್ರದ ಅನೇಕ ತೋಟಗಳಲ್ಲಿ, ಹೊಲಗಳಲ್ಲಿ, ಖಾಸಗಿ ಜಾಗಗಳಲ್ಲಿ, ನದಿ ಪಾತ್ರದಲ್ಲಿ ಮರಳಿನ ಸ್ಟಾಕ್ ಯಾರ್ಡ್ ಮಾಡಿಕೊಂಡು, ದಂಧೆ ಮಾಡುತ್ತಿದ್ದಾರೆ. ಅನಧಿಕೃತ ಸೇತುವೆ, ಮರಳು ದಂಧೆ ವಿರುದ್ಧ ಮಾಧ್ಯಮಗಳು, ಸಾಮಾಜಿಕ ಕಾರ್ಯಕರ್ತರು ಪ್ರಶ್ನೆ ಮಾಡುತ್ತಿದ್ದಂತೆಯೇ ಎಚ್ಚೆತ್ತ ಶಿವಮೊಗ್ಗ-ದಾವಣಗೆರೆ ಜಿಲ್ಲೆಗಳ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಂದಾಯ ಇಲಾಖೆ, ಪೊಲೀಸ್ ಇಲಾಖೆಗಳು ಜಂಟಿ ಕಾರ್ಯಾಚರಣೆಗೆ ಇಳಿದಿದ್ದಾರೆ. ನದಿ ಹರಿವಿನ ದಿಕ್ಕನ್ನೇ ಬದಲಿಸಿದ್ದ ತಾತ್ಕಾಲಿಕ ಸೇತುವೆಯನ್ನು ತೆರವುಗೊಳಿಸುವ ಕಾರ್ಯ ಕೈಗೊಂಡಿದ್ದಾರೆ.
ಕುಂಭಕರ್ಣ ನಿದ್ದೆಯಿಂದ ಎಚ್ಚೆತ್ತಂತಿರುವ ಕಂದಾಯ, ಗಣಿ ಮತ್ತು ಭೂ ವಿಜ್ಞಾನ ಹಾಗೂ ಪೊಲೀಸ್ ಇಲಾಖೆಗಳ ಅಧಿಕಾರಿಗಳು ಕಣ್ಣೊರೆಸುವ ದಾಳಿ, ಕಾರ್ಯಾಚರಣೆ ಕೈಗೊಳ್ಳಬಾರದು. ಸರ್ಕಾರ, ಇಲಾಖೆ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಅಕ್ರಮ ಮರಳು ದಂಧೆಕೋರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತರು, ಸಾರ್ವಜನಿಕರು ಜಿಲ್ಲಾ ಆಡಳಿತ, ಪೊಲೀಸ್ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಗಳಿಗೆ ಒಕ್ಕೊರಲಿನಿಂದ ಒತ್ತಾಯಿಸಿದ್ದಾರೆ. ಈ ಬಗ್ಗೆ ತೃಪ್ತಿಕರ ಕ್ರಮಗಳನ್ನು ಸರ್ಕಾರದಿಂದ ನಡೆಯುವುದೇ ಎಂಬುದನ್ನು ಪರಿಸರ ಪ್ರೇಮಿಗಳು ಎದುರು ನೋಡುತ್ತಿದ್ದಾರೆ.- - -
-7ಕೆಡಿವಿಜಿ5: ದಾವಣಗೆರೆ ಜಿಲ್ಲೆಯ ತುಂಗಭದ್ರಾ ನದಿಯೊಡಲಲ್ಲಿ ಅಕ್ರಮ ಮರಳು ದಂಧೆಕೋರರು ನಿರ್ಮಿಸಿದ್ದ ತಾತ್ಕಾಲಿಕ ಸೇತುವೆ ಸ್ಥಳಕ್ಕೆ ಕಂದಾಯ, ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಅಧಿಕಾರಿಗಳು ಜಂಟಿ ದಾಳಿ ನಡೆಸಿ ಕಾರ್ಯಾಚರಣೆ ಆರಂಭಿಸಿದರು. -7ಕೆಡಿವಿಜಿ6: ಮರಳು ಸಾಗಿಸಲು ಅಕ್ರಮವಾಗಿ ನಿರ್ಮಿಸಿದ್ದ ಅಕ್ರಮ ಸೇತುವೆ ಸ್ಥಳ.