ತಲೆ ಮೇಲೆ ಕಲ್ಲು ಹೊತ್ತು ವಿನೂತನ ಪ್ರತಿಭಟನೆ

KannadaprabhaNewsNetwork |  
Published : Dec 13, 2024, 12:50 AM IST
2ಎ ಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದ ಪಂಚಮಸಾಲಿ ಸಮಾಜದ ಬಾಂಧವರ ಮೇಲೆ ಸರಕಾರ ಪೊಲೀಸರಿಂದ ಲಾಠಿ ಪ್ರಹಾರ ನಡೆಸಿರುವುದನ್ನು ಖಂಡಿಸಿ ವಿವಿಧ ಸಂಘಟನೆಗಳ ಮುಖಂಡರು ಉಪ ತಹಸೀಲ್ದಾರ ಬಸವರಾಜ ಕನ್ನೂರ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ರಾಜ್ಯ ಗೃಹ ಸಚಿವ ಜಿ.ಪರಮೇಶ್ವರ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು

ಗದಗ: ಬೆಳಗಾವಿ ಸುವರ್ಣ ಸೌಧದ ಎದುರು 2ಎ ಮೀಸಲಾತಿಗಾಗಿ ಪಂಚಮಸಾಲಿ ಸಮಾಜದ ಬಾಂಧವರು ಜಯ ಮೃತ್ಯುಂಜಯ ಶ್ರೀಗಳ ನೇತೃತ್ವದಲ್ಲಿ ನಡೆಸಿದ ಪ್ರತಿಭಟನಾ ಹೋರಾಟ ವೇಳೆ ಪೊಲೀಸರು ಲಾಠಿ ಪ್ರಹಾರ ನಡೆಸಿರುವುದನ್ನು ಖಂಡಿಸಿ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಗುರುವಾರ ವಿವಿಧ ಸಂಘಟನೆಗಳ ಮುಖಂಡರು ಪಂಚಮಸಾಲಿ ಸಮಾಜದ ಹೋರಾಟದ ಪಂಜಿಗೆ ಜ್ವಾಲೆ ಅರ್ಪಿಸಿ,ಒಂದು ಗಂಟೆಗೂ ಅಧಿಕ ಕಾಲ ತಲೆಯ ಮೇಲೆ ಕಲ್ಲು ಹೊತ್ತು ಸರ್ಕಾರದ ದ್ವಿಮುಖ ನೀತಿ ಖಂಡಿಸಿ, ವಿನೂತನ ಪ್ರತಿಭಟನೆ ಮೂಲಕ ಸರ್ಕಾರಕ್ಕೆ ಪರೋಕ್ಷ ಎಚ್ಚರಿಕೆ ನೀಡಿದರು.

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ನಡೆದ ಪ್ರತಿಭಟನೆ ವೇಳೆ ಸರ್ಕಾರ ಸಮಾಜದ ಮುಖಂಡರ ಮೇಲೆ ಪೊಲೀಸರಿಂದ ಲಾಠಿ ಪ್ರಹಾರ ನಡೆಸುವ ಮೂಲಕ ಹೋರಾಟ ಹತ್ತಿಕ್ಕುವ ಯತ್ನ ಮಾಡಿರುವುದು, ಹೋರಾಟದಲ್ಲಿ ಪಾಲ್ಗೊಂಡ ಪಂಚಮಸಾಲಿ ಮುಖಂಡರಿಗೆ ರಕ್ತ ಬರುವಂತೆ ಪೊಲೀಸರು ಹಲ್ಲೆ ಮಾಡಿರುವುದು ಅಕ್ಷಮ್ಯ. ಸರ್ಕಾರ ಬೇಷರತ್ತಾಗಿ ಪಂಚಮಸಾಲಿ ಸಮಾಜದ ಕ್ಷಮೆ ಕೇಳಬೇಕು. ಮುಖ್ಯಮಂತ್ರಿಗಳು ಕೂಡಲೇ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಿ ಘೋಷಣೆ ಮಾಡಬೇಕು ಎಂದು ವಿವಿಧ ಸಂಘಟನೆಗಳ ಮುಖಂಡರು ಆಗ್ರಹಿಸಿದರು.

ಇಂಡಿಯನ್ ಪೊಲಿಟಿಕಲ್ ಕಾಂಗ್ರೆಸ್ ಪಾರ್ಟಿಯ ರಾಜ್ಯಾಧ್ಯಕ್ಷ ಎಸ್.ಎಸ್. ರಡ್ಡೇರ ಮಾತನಾಡಿ, ಶಾಂತಿಯುತ ಹೋರಾಟ ಮಾಡುತ್ತಿದ್ದ ಹೋರಾಟಗಾರರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದು, ರಾಜ್ಯ ಗೃಹ ಸಚಿವ ಜಿ.ಪರಮೇಶ್ವರ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ನವಕರ್ನಾಟಕ ಜನಪರ ಅಭಿವೃದ್ಧಿ ವೇದಿಕೆ ರಾಜ್ಯಾಧ್ಯಕ್ಷ ಪಿ. ಸುಬ್ರಮಣ್ಯ ರೆಡ್ಡಿ ಮಾತನಾಡಿ, ಹೋರಾಟ ನಡೆಸುತ್ತಿದ್ದ ಹೋರಾಟಗಾರರನ್ನು ಮುಖ್ಯಮಂತ್ರಿಗಳು ಕರೆದು ಅವರ ಸಮಸ್ಯೆ ಚರ್ಚಿಸದೇ ಅವರ ಮೇಲೆ ಲಾಠಿ ಚಾರ್ಜ ಮಾಡಿಸಿರುವುದು ಘೋರ ಅನ್ಯಾಯ. ಇದು ಕೇವಲ ಪಂಚಮಸಾಲಿ ಸಮಾಜದ ಹೋರಾಟಗಾರರಿಗೆ ಕೊಟ್ಟ ಲಾಠಿ ಏಟಲ್ಲ, ಇಡೀ ಸರ್ವ ಹೋರಾಟಗಾರರಿಗೂ ಸರ್ಕಾರ ಮಾಡಿದ ಅವಮಾನ ಎಂದ ಆಕ್ರೋಶ ವ್ಯಕ್ತಪಡಿಸಿದರು.

ಮುಂಡರಗಿ ತಾಲೂಕು ಸಾರ್ವಜನಿಕ ಹೋರಾಟ ಸಮಿತಿಯ ಸಂಚಾಲಕ ಬಸವರಾಜ ನವಲಗುಂದ ಮಾತನಾಡಿ, ಶೈಕ್ಷಣಿಕ ಅನುಕೂಲಕ್ಕಾಗಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವುದು ಅವಶ್ಯವಿದೆ. ಬೆಳಗಾವಿಯಲ್ಲಿ ಪಂಚಮಸಾಲಿ ಸಮಾಜದ 2ಎ ಹೋರಾಟಗಾರರ ಮೇಲೆ ಲಾಠಿ ಪ್ರಹಾರ ಮಾಡಿದ್ದು, ಅಕ್ಷಮ್ಯ ಅಪರಾಧ. ಇದನ್ನು ಖಂಡಿಸುತ್ತೇವೆ ಎಂದರು.

ಬಗರ್‌ಹುಕುಂ ಸಾಗುವಳಿದಾರರ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಬಸವಣ್ಣೆಯ್ಯ ಹಿರೇಮಠ ಮಾತನಾಡಿ, ಬ್ರಿಟೀಷರನ್ನು ಎದುರಿಸಿ ಸ್ವಾತಂತ್ರ್ಯ ಕಹಳೆ ಮೊಳಗಿಸಿದ ಪಂಚಮಸಾಲಿ ಸಮಾಜದ ವೀರಮಾತೆ ಕಿತ್ತೂರು ಚನ್ನಮ್ಮನವರ ಸಮಾಜ ಬಾಂಧವರು ಮೂಲತಃ ರೈತರು, ದೇಶಕ್ಕೆ ಅನ್ನ ನೀಡುವ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಯುವ ಮುಖಂಡ ಮಹೇಶ ದಾಸರ, ಪ್ರವೀಣ್ ಶೆಟ್ಟಿ ಬಣದ ಕರವೇ ಜಿಲ್ಲಾಧ್ಯಕ್ಷ ವೆಂಕಟೇಶ ಬೇಲೂರು, ನವಕರ್ನಾಟಕ ಜನಪರ ವೇದಿಕೆ ರಾಜ್ಯ ಪದಾಧಿಕಾರಿ ಶಿವಾನಂದ ಹಿರೇಮಠ, ಯು.ಆರ್. ಭೂಸನೂರಮಠ, ಹೋರಾಟಗಾರರ ಮೇಲೆ ಹಲ್ಲೆ ನಡೆಸಿರುವ ಸರ್ಕಾರದ ಕ್ರಮ ಖಂಡಿಸಿದರು.

ನವಕರ್ನಾಟಕ ಜನಪರ ಅಭಿವೃದ್ಧಿ ವೇದಿಕೆಯ ಎಂ.ಎಸ್.ಪರ್ವತಗೌಡ್ರ, ಪ್ರಭಾಕರ ಹೆಬಸೂರ, ಕರವೇ ಮಂಜುನಾಥ ಶಾಂತಗೇರಿ, ಇಂಡಿಯನ್ ಪೊಲಿಟಿಕಲ್ ಕಾಂಗ್ರೆಸ್ ಪಾರ್ಟಿಯ ಪದಾಧಿಕಾರಿಗಳಾದ ಮಹಾದೇವಯ್ಯ ಹಿರೇಮಠ, ಗಣೇಶ ಚಲವಾದಿ, ರತ್ನಾ ಪೂಜಾರ, ರತ್ನಾ ಹಿರೇಮಠ, ಜಿಪಂ ಮಾಜಿ ಸದಸ್ಯ ಎಸ್.ಬಿ. ಕಲಕೇರಿ, ರೈತ ಸಂಘದ ಅಧ್ಯಕ್ಷ ಶಂಕರಗೌಡ ಜಾಯನಗೌಡ್ರ, ಬಸಪ್ಪ ವಡ್ಡರ ಮುಂತಾದವರು ಇದ್ದರು.

ವಿವಿಧ ಸಮಾಜದ ಮುಖಂಡರು ಉಪ ತಹಸೀಲ್ದಾರ ಬಸವರಾಜ ಕನ್ನೂರ ಮೂಲಕ ರಾಜ್ಯಪಾಲರಿಗೆ ಮನವಿ ಅರ್ಪಿಸಿದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ