ಕನ್ನಡಪ್ರಭ ವಾರ್ತೆ ಮಂಗಳೂರು
ಗೃಹಲಕ್ಷ್ಮಿ ಸೇರಿದಂತೆ ಐದು ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಯಾರೊಬ್ಬ ಅರ್ಹ ಫಲಾನುಭವಿಯೂ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಗ್ಯಾರಂಟಿಗಳನ್ನು ಪ್ರತಿಯೊಬ್ಬರಿಗೂ ತಲುಪಿಸಲು ಗ್ರಾಪಂ ಮಟ್ಟದಲ್ಲಿ ನೋಡಲ್ ಅಧಿಕಾರಿಯನ್ನು ನೇಮಕ ಮಾಡಲಾಗುವುದು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್ ತಿಳಿಸಿದ್ದಾರೆ.ನಗರದ ಜಿಪಂ ಸಭಾಂಗಣದಲ್ಲಿ ಬುಧವಾರ ರಾಜ್ಯದಲ್ಲೇ ಮೊದಲ ಬಾರಿಗೆ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಗ್ಯಾರಂಟಿ ಯೋಜನೆಗಳು ಬಹುತೇಕ ಫಲಾನುಭವಿಗಳನ್ನು ತಲುಪಿದೆ. ತಾಂತ್ರಿಕ ಕಾರಣಗಳಿಂದ ಕೆಲವು ಮಂದಿಗೆ ಇನ್ನೂ (ಮುಖ್ಯವಾಗಿ ಗೃಹಲಕ್ಷ್ಮಿ) ತಲುಪಿಲ್ಲ. ಬಡವರ ಸ್ವಾಭಿಮಾನ ಮತ್ತು ಉದ್ಧಾರಕ್ಕಾಗಿ ಇರುವ ಗ್ಯಾರಂಟಿಯನ್ನು ಪ್ರತಿ ಅರ್ಹರನ್ನು ಪತ್ತೆ ಹಚ್ಚಿ ನೀಡಲಿದ್ದೇವೆ ಎಂದು ಪುಷ್ಪಾ ಅಮರನಾಥ್ ಹೇಳಿದರು.ಸಮಸ್ಯೆಗೆ ಪರಿಹಾರ:ಗೃಹ ಸಾಲ ಇತ್ಯಾದಿ ಸಾಲ ಪಡೆದುಕೊಂಡವರು ಆದಾಯ ತೆರಿಗೆ ಪಾವತಿದಾರರು ಎಂದು ಆನ್‌ಲೈನ್‌ನಲ್ಲಿ ತಾನಾಗೇ ನಮೂದಾಗುತ್ತಿದೆ. ಇದರಿಂದ ಅನೇಕರು ಗೃಹಲಕ್ಷ್ಮಿ ಯೋಜನೆಯಿಂದ ವಂಚಿತರಾಗುತ್ತಿದ್ದಾರೆ. ಈ ಸಮಸ್ಯೆಯನ್ನೂ ಗಂಭೀರವಾಗಿ ಪರಿಗಣಿಸಲಾಗಿದ್ದು, ಸರ್ಕಾರದ ಮಟ್ಟದಲ್ಲಿ ಸಮಸ್ಯೆ ನೀಗಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ಅನ್ನಭಾಗ್ಯ ಯೋಜನೆಯಲ್ಲಿ ಅನೇಕರಿಗೆ ಬೆರಳಚ್ಚು ಮ್ಯಾಚ್ ಆಗದೆ ಸಮಸ್ಯೆಯಾಗಿದೆ. ಬೆರಳಚ್ಚು ಮ್ಯಾಚ್ ಆಗದೆ ಇದ್ದರೂ ಅಕ್ಕಿ ನೀಡಲು ಸೂಚನೆ ನೀಡಲಾಗಿದೆ. ಅಂಥ ಫಲಾನುಭವಿಗಳ ಕಣ್ಣಿನ ರೆಟಿನಾ ಸ್ಕ್ಯಾನ್ ಮಾಡುವ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ಪುಷ್ಪಾ ಅಮರನಾಥ್ ಹೇಳಿದರು.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ., ಜಿಪಂ ಸಿಇಒ ಡಾ.ಆನಂದ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ ಮತ್ತಿತರರು ಇದ್ದರು.
ಗ್ಯಾರಂಟಿ ಬೇಡವಾದರೆ ವಾಪಸ್‌ಗೆ ಅವಕಾಶಗೃಹಲಕ್ಷ್ಮಿ ಸೇರಿದಂತೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವುದು ನಮ್ಮ ಗುರಿ. ಆದರೆ ಯಾರಿಗೆ ಈ ಯೋಜನೆಗಳ ಅಗತ್ಯವಿಲ್ಲ ಅನಿಸುತ್ತದೆಯೋ ಅಂಥವರು ಸ್ವಯಂ ಪ್ರೇರಣೆಯಿಂದ ಯೋಜನೆಯಿಂದ ವಾಪಸಾಲು ಅವಕಾಶ ಕಲ್ಪಿಸುವ ಚಿಂತನೆ ನಡೆಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಬಳಿ ಮಾತುಕತೆ ನಡೆಸಲಾಗುವುದು ಎಂದು ಪುಷ್ಪಾ ಅಮರನಾಥ್ ತಿಳಿಸಿದರು.ಎರಡು ತಿಂಗಳ ಗೃಹಲಕ್ಷ್ಮೀ ಏಕಕಾಲಕ್ಕೆ ಜಮೆ
ದ.ಕ. ಜಿಲ್ಲೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಗೃಹಲಕ್ಷ್ಮೀ ಯೋಜನೆ ಕಂತು ಫಲಾನುಭವಿಗಳಿಗೆ ತಲುಪಿಲ್ಲ. ಈ ಎರಡೂ ತಿಂಗಳ ಕಂತುಗಳನ್ನು ಶೀಘ್ರದಲ್ಲೇ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುತ್ತದೆ ಎಂದು ಪುಷ್ಪಾ ಅಮರನಾಥ್ ಹೇಳಿದರು.