ಅಪೌಷ್ಟಿಕತೆ ಹೋಗಲಾಡಿಸಲು ಕೂಸಿನ ಮನೆ ಜಾರಿ

KannadaprabhaNewsNetwork |  
Published : Jan 01, 2024, 01:15 AM IST
ಮಮ | Kannada Prabha

ಸಾರಾಂಶ

ಬಡತನದ ವಿಷವರ್ತುಲ ಎಂಬ ಸರಪಳಿಯ ಕೊಂಡಿಯನ್ನು ಬಿಡಿಸಲು ತಾಯಿ ಮತ್ತು ಮಕ್ಕಳ ಆರೈಕೆ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಕೂಸಿನ ಮನೆ ಅತ್ಯಂತ ಪ್ರಮುಖ ಪಾತ್ರ ವಹಿಸಲಿದೆ

ಕನ್ನಡಪ್ರಭ ವಾರ್ತೆ ಬ್ಯಾಡಗಿ

ಬಡತನದ ವಿಷವರ್ತುಲ ಎಂಬ ಸರಪಳಿಯ ಕೊಂಡಿಯನ್ನು ಬಿಡಿಸಲು ತಾಯಿ ಮತ್ತು ಮಕ್ಕಳ ಆರೈಕೆ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ "ಕೂಸಿನ ಮನೆ " ಅತ್ಯಂತ ಪ್ರಮುಖ ಪಾತ್ರ ವಹಿಸಲಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಮಲ್ಲಿಕಾರ್ಜುನ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಹಾವೇರಿ, ತಾಪಂ ಬ್ಯಾಡಗಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಪಟ್ಟಣದ ಸಾಮರ್ಥ್ಯ ಸೌಧದಲ್ಲಿ ಆಯೋಜಿಸಲಾದ "ಕೂಸಿನ ಮನೆ " ಕೇರ್ ಟೇಕರ್ಸ್‌ಗಳ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ನರೇಗಾ ಕೂಲಿಕಾರ್ಮಿಕರು ಕೆಲಸದ ಸ್ಥಳಕ್ಕೆ ಮಕ್ಕಳನ್ನು ಕರೆದುಕೊಂಡು ಬರುವುದು ಮತ್ತು ಬಡ ಕಾರ್ಮಿಕರು ತಮ್ಮ ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ಕೆಲಸಕ್ಕೆ ಹೋಗುವುದು ಇದರಿಂದ ಮಕ್ಕಳ ಪಾಲನೆ ಪೋಷಣೆ ಅಸಾಧ್ಯ ಎಂಬ ನಿರ್ಧಾರಕ್ಕೆ ಬಂದ ಹಿರಿಯ ಅಧಿಕಾರಿಗಳು ಇದಕ್ಕೆ ಸೂಕ್ತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ, ಅಪೌಷ್ಟಿಕತೆ ಹೋಗಲಾಡಿಸುವ ನಿಟ್ಟಿನಲ್ಲಿ ಪ್ರತಿ ಗ್ರಾಮದಲ್ಲಿ ಕೂಸಿನ ಮನೆ ಪ್ರಾರಂಭಿಸುತ್ತಿದ್ದಾರೆ. ಹೀಗಾಗಿ 3 ವರ್ಷದೊಳಗಿನ ಮಕ್ಕಳು ಸದರಿ ಮನೆಯಲ್ಲಿ ಮನೆಯಲ್ಲಿ ಆರೈಕೆಯಾಗಲ್ಲಿದ್ದಾರೆ ಎಂದರು.

ತರಬೇತಿ ಪಡೆದ ತಾವೆಲ್ಲರೂ ಸರ್ಕಾರದ ಇಲಾಖೆಯ ಮಾರ್ಗಸೂಚಿಯಂತೆ ಕಾರ್ಯನಿರ್ವಹಿಸಬೇಕು, ಶಿಶುಗಳನ್ನು ಉತ್ತಮ ರೀತಿಯಲ್ಲಿ ಆರೈಕೆ ಮಾಡಬೇಕು, ಮಕ್ಕಳಿಗೆ ಆಹಾರ, ಸ್ವಚ್ಛತೆ ಮತ್ತು ಆರೋಗ್ಯಕ್ಕೆ ಪ್ರಥಮ ಆದ್ಯತೆ ನೀಡಿ ತಾಲೂಕಿನ ಕೂಸಿನ ಮನೆಗಳು ರಾಜ್ಯದಲ್ಲಿಯೇ ಮಾದರಿಯಾಗುವಂತೆ ಪ್ರತಿಯೊಬ್ಬರು ಶ್ರಮಿಸಲು ಕರೆ ನೀಡಿದರು.

ಮೊದಲನೇ ಹಂತದಲ್ಲಿ ಬುಡಪನಹಳ್ಳಿ, ಗುಂಡೇನಹಳ್ಳಿ ಹಾಗೂ ಕುಮ್ಮೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 30 ಜನ ಕೇರ್‌ ಟೇಕರ್‌ಗಳಿಗೆ ತರಬೇತಿಯಾಗಿದ್ದು, ಎರಡನೇ ಹಂತದಲ್ಲಿ 18 ಗ್ರಾಮ ಪಂಚಾಯಿತಿ ವ್ಯಾಪ್ತಿಯ 180 ಕೇರ್ ಟೇಕರ್‌ಗಳಿಗೆ 3 ವಿಭಾಗಗಳಲ್ಲಿ ತರಬೇತಿ ಪ್ರಾರಂಭಿಸುವುದಾಗಿ ತಿಳಿಸಿದರು.

ತಾಲೂಕು ಐಇಸಿ ಸಂಯೋಜಕ ಹಾಗೂ ತರಬೇತಿದಾರ ಕುಮಾರಯ್ಯ ಚಿಕ್ಕಮಠ ಮಾತನಾಡಿ, ಕೂಸಿನ ಮನೆಗೆ ದಾಖಲಾಗುವ 3 ವರ್ಷದೊಳಗಿನ ಮಕ್ಕಳ ಲಾಲನೆ, ಪಾಲನೆ ಹಾಗೂ ಅಪೌಷ್ಟಿಕತೆ ನಿವಾರಣೆಗೆ ಕೈಗೊಳ್ಳಬೇಕಾದ ಕ್ರಮಗಳು ಹಾಗೂ ಕೇರ್ ಟೆಕರ್ಸ್‌ಗಳ ಕರ್ತವ್ಯಗಳು ಮತ್ತು ಜವಾಬ್ದಾರಿಗಳ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ತಾಪಂ ವ್ಯವಸ್ಥಾಪಕ ಪ್ರಕಾಶ ಹಿರೇಮಠ, ತಾಂತ್ರಿಕ ಸಂಯೋಜಕ ಸಂತೋಷ್ ನಾಯಕ್, ತಾಲೂಕು ಐಇಸಿ ಸಂಯೋಜಕ ಶಾನವಾಜ್ ಜಿಣಗಿ, ಸ್ನೇಹ ಸದನದ ಸದಸ್ಯೆ ಗ್ಲೋರಿಯಾ ತೆರೆಸಿಟಾ, ಗ್ರಾಮಕಾಯಕ ಮಿತ್ರರು ಉಪಸ್ಥಿತರಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ