ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಅಂದ ಹೆಚ್ಚಿಸಿದ ಚಿತ್ತಾರ!

KannadaprabhaNewsNetwork |  
Published : Oct 10, 2025, 01:01 AM IST
ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿ ರೈಲು ನಿಲ್ದಾಣದಲ್ಲಿರುವ ವಿಶ್ವದ ಅತೀ ಉದ್ದದ ಪ್ಲಾಟ್‌ಫಾರ್ಮ್‌ನ ಗೋಡೆಯ ಮೇಲೆ ಬಣ್ಣಬಣ್ಣದ ಚಿತ್ತಾರ ಬಿಡಿಸುತ್ತಿರುವ ರೆವಲ್ಯೂಶನ್‌ ಮೈಂಡ್‌ ತಂಡದ ಸದಸ್ಯರು. | Kannada Prabha

ಸಾರಾಂಶ

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ನ 1507 ಮೀಟರ್‌ ಉದ್ದದ ಗೋಡೆಯ ಮೇಲೆ ರೆವಲ್ಯೂಶನ್‌ ಮೈಂಡ್‌ ತಂಡವೊಂದು ಬಣ್ಣ-ಬಣ್ಣದ ಚಿತ್ತಾರ ಬಿಡಿಸುತ್ತಿದೆ.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ: ವಿಶ್ವದಲ್ಲಿಯೇ ಅತೀ ಉದ್ದದ ಪ್ಲಾಟ್‌ಫಾರ್ಮ್‌ ಹೊಂದಿರುವ ಇಲ್ಲಿನ "ಶ್ರೀ ಸಿದ್ಧಾರೂಢ ಸ್ವಾಮಿ ರೈಲು ನಿಲ್ದಾಣ "ವು ಈಗ ಮತ್ತೊಂದು ವಿಶಿಷ್ಟ ಕಾರ್ಯದೊಂದಿಗೆ ಗುರುತಿಸಿಕೊಳ್ಳುತ್ತಿದೆ. ಇದೇ ಪ್ಲಾಟ್‌ಫಾರ್ಮ್‌ನ 1507 ಮೀಟರ್‌ ಉದ್ದದ ಗೋಡೆಯ ಮೇಲೆ "ರೆವಲ್ಯೂಶನ್‌ ಮೈಂಡ್‌ " ತಂಡವೊಂದು ಬಣ್ಣ-ಬಣ್ಣದ ಚಿತ್ತಾರ ಬಿಡಿಸುತ್ತಿದೆ.

ಈ ತಂಡ "ನನ್ನ ನಿಲ್ದಾಣ ನನ್ನ ಕರ್ತವ್ಯ " ಘೋಷವಾಕ್ಯದಡಿ ನೈಋತ್ಯ ರೈಲ್ವೆ ಸಹಯೋಗದಡಿ ಪ್ಲಾಟ್‌ಫಾರ್ಮ್‌ನ ಗೋಡೆಗಳ ಮೇಲೆ ಸ್ವಚ್ಛ ಭಾರತ ಅಭಿಯಾನ, ನಗರ ಸೌಂದರೀಕರಣದ ಕುರಿತು ಜಾಗೃತಿ ಮೂಡಿಸುವ ವರ್ಣರಂಜಿತ ಚಿತ್ರಗಳನ್ನು ಬಿಡಿಸುತ್ತಿದೆ.

ನಿತ್ಯವೂ ಲಕ್ಷಾಂತರ ಪ್ರಯಾಣಿಕರು ಭೇಟಿ ನೀಡುವ ಈ ರೈಲು ನಿಲ್ದಾಣದಲ್ಲಿ ಸ್ವಚ್ಛತೆಯೊಂದಿಗೆ ಹಸಿರು ಪರಿಸರ ಕಾಪಾಡಿಕೊಳ್ಳುವ ಧ್ಯೇಯದೊಂದಿಗೆ ಹಾಗೂ ಪ್ರಯಾಣಿಕರು ಎಲ್ಲೆಂದರಲ್ಲಿ ಉಗುಳುವುದು, ಕಸ ಹಾಕುವುದನ್ನು ತಡೆಯಲು ಸೆ. 28ರಿಂದ ಈ ವಿಶಿಷ್ಟ ಅಭಿಯಾನ ಆರಂಭಿಸಲಾಗಿದೆ. ನಿಲ್ದಾಣವು ಸ್ವಚ್ಛತೆಯಿಂದ ಕಾಣುವುದರೊಂದಿಗೆ ಜನರಲ್ಲಿ ಶುಚಿತ್ವದ ಕುರಿತು ಜಾಗೃತಿ ಮೂಡಿಸುವ ಉದ್ದೇಶ ಹೊಂದಲಾಗಿದೆ.

500 ಮೀಟರ್‌ ಪೂರ್ಣ: ಸೆ. 28ರಂದು 60ಕ್ಕೂ ಅಧಿಕ ಚಿತ್ರಕಲಾವಿದರ ತಂಡ ಒಂದೇ ದಿನದಲ್ಲಿ 500 ಮೀಟರ್‌ಗೂ ಅಧಿಕ ಉದ್ದದ ಗೋಡೆಯ ಮೇಲೆ ಬಣ್ಣದ ಚಿತ್ತಾರ ಪೂರ್ಣಗೊಳಿಸಿದೆ. ಇನ್ನುಳಿದ 1007 ಮೀಟರ್‌ ಉದ್ದದ ಗೋಡೆಯನ್ನು ಅ. 12ರಂದು ವಿಶಿಷ್ಟ ಅಭಿಯಾನದ ಮೂಲಕ ಒಂದೇ ದಿನಕ್ಕೆ ಪೂರ್ಣಗೊಳಿಸಲು ತೀರ್ಮಾನಿಸಿದೆ. ಹಾಗೊಂದು ವೇಳೆ ಪೂರ್ಣಗೊಂಡಿದ್ದೇ ಆದಲ್ಲಿ 1507 ಮೀಟರ್‌ ಉದ್ದದ ಗೋಡೆಯನ್ನು ಕೇವಲ 2 ದಿನಗಳಲ್ಲಿ ಪೂರ್ಣಗೊಳಿಸಿದ ಸಂಸ್ಥೆ ಎಂಬ ದಾಖಲೆಗೆ ಈ ತಂಡ ಪಾತ್ರವಾಗಲಿದೆ.

200 ಲೀಟರ್‌ ಬಣ್ಣ: ಇಷ್ಟೊಂದು ಉದ್ದದ ಗೋಡೆಗೆ ಬಣ್ಣ ತುಂಬಲು 200 ಲೀಟರ್‌ ಬಣ್ಣ ಬೇಕಾಗಿದೆ. ಚಿತ್ರ ಬಿಡಿಸಲು ಬೇಕಾದ ಬಣ್ಣ ಹಾಗೂ ಇನ್ನಿತರೆ ಸಲಕರಣೆಗಳನ್ನು ನೈಋತ್ಯ ರೈಲ್ವೆ ಪೂರೈಸುತ್ತಿದೆ. ಅ. 12ರಂದು ಒಂದೇ ದಿನ 1007 ಮೀಟರ್‌ ಉದ್ದದ ಗೋಡೆಗೆ ಚಿತ್ತಾರ ಬಿಡಿಸಲು ರೆವಲ್ಯೂಶನ್‌ ಮೈಂಡ್ಸ್‌ನ ತಂಡ ಸಿದ್ಧತೆ ಮಾಡಿಕೊಂಡಿದೆ.

ಜಾಗೃತಿ ಕಾರ್ಯ: ಕಳೆದ ನಾಲ್ಕು ವರ್ಷಗಳಿಂದ ರೆವಲ್ಯೂಷನ್ ಮೈಂಡ್ಸ್‌ನ ತಂಡವು ಹುಬ್ಬಳ್ಳಿ-ಧಾರವಾಡದಲ್ಲಿರುವ ಎಲ್ಲ ಪ್ರಮುಖ ಸರ್ಕಾರಿ ಕಚೇರಿಗಳ ಗೋಡೆಗಳಿಗೆ ಪರಿಸರ, ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವ ಚಿತ್ತಾರ ಬಿಡಿಸಿದೆ. ಸಾಮಾಜಿಕ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸಲು ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಸಹಯೋಗದೊಂದಿಗೆ ಈ ಚಿತ್ರಕಲೆಯನ್ನು ಮುಂದುವರಿಸಿಕೊಂಡು ಬರಲಾಗುತ್ತಿದೆ ಎಂದು ತಂಡದ ಸಂಸ್ಥಾಪಕ ಅಧ್ಯಕ್ಷ ವಿನಾಯಕ ಜೋಗಾರಿಶೆಟ್ಟರ "ಕನ್ನಡಪ್ರಭ "ಕ್ಕೆ ತಿಳಿಸಿದರು.ರೈಲು ನಿಲ್ದಾಣ ಸೌಂದರೀಕರಣ ಮಾಡುವುದರೊಂದಿಗೆ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ. ಈ ಕುರಿತು ಪ್ರಯಾಣಿಕರಲ್ಲೂ ಜಾಗೃತಿ ಮೂಡಲಿ ಎಂಬ ಉದ್ದೇಶದಿಂದ ವಿಶ್ವದ ಅತಿ ಉದ್ದದ ಪ್ಲಾಟ್‌ಫಾರ್ಮ್‌ನ ಗೋಡೆಗಳಿಗೆ ಬಣ್ಣ-ಬಣ್ಣದ ಚಿತ್ತಾರ ಬರೆಸಲಾಗುತ್ತಿದೆ ಎಂದು ನೈಋತ್ಯ ರೈಲ್ವೆಯ ಪಶ್ಚಿಮ ವಿಭಾಗದ ಹಿರಿಯ ವಿಭಾಗೀಯ ಅಭಿಯಂತರ ಅನಿಲಕುಮಾರ ಹೇಳಿದರು.

PREV

Recommended Stories

ಸಂಪುಟ ಪುನರ್‌ ರಚನೆ ಸುಳಿವು : ದಲಿತ ಸಚಿವರ ಸಭೆ!
ಶೂದ್ರ ಶ್ರೀನಿವಾಸ್‌ ಸೇರಿ ಐವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ