ಶಾಂತಿಯುತವಾಗಿ ಜರುಗಿದ ಪ್ರಜಾತಂತ್ರ ಹಬ್ಬ

KannadaprabhaNewsNetwork | Published : Apr 27, 2024 1:00 AM

ಸಾರಾಂಶ

ಲೋಕಸಭಾ ಚುನಾವಣೆಗೆ ಕ್ಷೇತ್ರ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದ ಮತದಾನ ಯಾವುದೇ ಅಹಿತಕರ ಘಟನೆಗಳು ಜರುಗದೆ ಶಾಂತಿಯುತವಾಗಿ ಯಶಸ್ವಿಗೊಂಡಿತು.

ಮೊಳಕಾಲ್ಮುರು: ಲೋಕಸಭಾ ಚುನಾವಣೆಗೆ ಕ್ಷೇತ್ರ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದ ಮತದಾನ ಯಾವುದೇ ಅಹಿತಕರ ಘಟನೆಗಳು ಜರುಗದೆ ಶಾಂತಿಯುತವಾಗಿ ಯಶಸ್ವಿಗೊಂಡಿತು.

ಕ್ಷೇತ್ರ ವ್ಯಾಪ್ತಿಯ ದೇವ ಸಮುದ್ರ, ಕಸಬಾ, ನಾಯಕನಹಟ್ಟಿ, ತಳಕು ಸೇರಿದಂತೆ ನಾಲ್ಕು ಹೋಬಳಿಗಳ ಗ್ರಾಮಗಳಲ್ಲಿ ಬೆಳಗ್ಗೆಯಿಂದಲೇ ಮತಗಟ್ಟೆಗಳ ಕಡೆ ಹೆಜ್ಜೆ ಹಾಕಿದ ಮತದಾರರು ಉತ್ಸಾಹದಿಂದಲೇ ಮತ ಚಲಾಯಿಸಿದರು. ಬೆಳಗ್ಗೆಯಿಂದಲೇ ಆರಂಭಗೊಂಡ ಮತದಾನ 12ರ ನಂತರ ನೀರಸವಾಗಿತ್ತು. ಬಿರು ಬಿಸಿಲಿನ ತಾಪಕ್ಕೆ ಹೆದರಿ ಕೆಲ ಮತದಾರರು ಬೆಳಗ್ಗೆಯೇ ಮತದಾನ ಮಾಡಿದರೆ ಇನ್ನು ಕೆಲವರು ಮಧ್ಯಾನ್ಹದ ನಂತರ ಮತಗಟ್ಟೆಗೆ ಆಗಮಿಸಿದರು. ಇದರಿಂದಾಗಿ ಬಹುತೇಕ ಗ್ರಾಮಗಳಲ್ಲಿ ಮಧ್ಯಾನದ ನಂತರ ಮತದಾನ ಚುರುಕಾಗಿ ಸಾಗಿತು.

ಬೆಳಗ್ಗೆ 7ಕ್ಕೆ ಆರಂಭಗೊಂಡ ಮತದಾನ 9 ಗಂಟೆಗೆ ಶೇ.10.28ರಷ್ಟು, 11 ಗಂಟೆಗೆ ಶೇ.26.77, 1 ಗಂಟೆಗೆ ಶೇ.44.28, 3 ಗಂಟೆಗೆ 56.66ರಷ್ಟು ಮತದಾರರು ಮತದನವಾಗಿತ್ತು. ನಂತರ ನೀರಸವಾದ ಮತದಾನ 3 ಗಂಟೆಯಿಂದ ಚುರುಕಿನಿಂದ ಸಾಗಿ 5 ಗಂಟೆಗೆ 70.56ರಷ್ಟು ಮತದಾನ ನಡೆಯಿತು. ತಾಲೂಕಿನ ಬಿಜಿಕೆರೆ, ಕೊಂಡ್ಲಹಳ್ಳಿ, ರಾಂಪುರ, ದೇವ ಸಮುದ್ರ ಸೇರಿದಂತೆ ಕೆಲ ಗ್ರಾಮಗಳ ಮತಗಟ್ಟೆಗಳಲ್ಲಿ 5ರ ನಂತರವೂ ಮತದಾನ ಮುಂದುರೆದಿತ್ತು.

ರಾಂಪುರ 12, ಕೋನಾಪುರ 32, ಮೇಗಳ ಹಟ್ಟಿ 74, ಮೊಳಕಾಲ್ಮುರು 84, ಕೊಂಡ್ಲಹಳ್ಳಿ ಬೂತ್ ನಂಬರ್ 120 ಮತಗಟ್ಟೆಗಳನ್ನು ಪಿಂಕ್ ಮತ ಗಟ್ಟೆಗಳನ್ನಾಗಿ ಸ್ಥಾಪಿಸಲಾಗಿತ್ತು. ಪಟ್ಟಣ ವ್ಯಾಪ್ತಿಯ ಆಂಧ್ರ ಗಡಿ ಭಾಗದ ಎದ್ದಲ ಬೊಮ್ಮಯ್ಯನ ಹಟ್ಟಿಯಲ್ಲಿನ ವಿಕಲ ಚೇತನರ ಮತಗಟ್ಟೆಯಲ್ಲಿ ವಿಕಲ ಚೇತನರು ಉತ್ಸಾಹದಿಂದ ಮತ ಚಲಾಯಿಸಿದರು.ಮೊಳಕಾಲ್ಮುರು ಪಟ್ಟಣದ ಬೂತ್ 87ರ ಯುವ ಮತಗಟ್ಟೆಯಲ್ಲಿ ಬಹುತೇಕ ಯುವಕರು ಮೊದಲ ಬಾರಿ ಮತ ಹಾಕಿದ ಸಂಭ್ರಮ ಸ್ನೇಹಿತರೊಂದಿಗೆ ಹಂಚಿಕೊಂಡರು. ಬೂತ್ 85ರ ಮಾದರಿ ಮತಗಟ್ಟೆಯಲ್ಲಿ ಚಿತ್ರದುರ್ಗದ ಕಲ್ಲಿನ ಕೋಟೆ ಬಿಂಬಿಸುವಂತ ಕಮಾನು ನಿರ್ಮಿಸಿ ಮತದಾರರನ್ನು ಸ್ವಾಗತಿಸುವ ರೀತಿಯಲ್ಲಿ ಸಿಂಗರಿಸಿದ್ದರು. ಜತೆಗೆ ಬಹುತೇಕ ಪರಿಶಿಷ್ಟ ಜನಾಂಗವೇ ಹೆಚ್ಚಾಗಿ ವಾಸಿಸುವ ಕೆಳಗಳ ಕಣಿವೆ ಗ್ರಾಮದಲ್ಲಿ ಸ್ತಾಪಿಸಲಾಗಿದ್ದ ಗಿರಿಜನ ಮತಗಟ್ಟೆಯಲ್ಲಿ ಅಲ್ಲಿನ ಮತದಾರರು ಬೆಳಗ್ಗೆಯಿಂದಲೇ ಮತದಾನಕ್ಕೆ ಆಗಮಿಸಿದ್ದು, ವಿಶೇಷವಾಗಿತ್ತು. ಮಹಿಳೆಯರು ಮತ್ತು ಪುರುಷರು ಪ್ರತ್ಯೇಕ ಸರತಿ ಸಾಲಲ್ಲಿ ನಿಂತು ಮತದಾನ ಮಾಡಿದರು.

ಪ್ರತಿ ಹಳ್ಳಿಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ವಾಹನಗಳ ಮೂಲಕ ಮತದಾರರನ್ನು ಮತಗಟ್ಟೆ ಸಮೀಪಕ್ಕೆ ಕರೆತರುವುದು ಸಾಮಾನ್ಯವಾಗಿ ಕಂಡುಬಂತು. ಅಹಿತಕರ ಘಟನೆಗಳು ಜರುಗದಂತೆ ಬಿಗಿ ಪೋಲೀಸ್ ಬಂದೋಬಸ್ತ್‌ ಕೈಗೊಳ್ಳಲಾಗಿತ್ತು.

ತಾಲೂಕಿನ ಬೊಮ್ಮಕ್ಕನ ಹಳ್ಳಿ, ವೆಂಕಟಾಪುರ 2 ಊಡೇವು ಹಾಗೂ ಕ್ಷೇತ್ರ ವ್ಯಾಪ್ತಿ ಬುಕ್ಲೂರಳ್ಳಿ, ಜಾಗನೂರಹಟ್ಟಿ, ಕುದಾಪುರ, ಬೆಲ್ಲದಾರಹಟ್ಟಿ, ದೊಡ್ಡ ಉಳ್ಳಾರ್ತಿ ಕೆಲ ಮತಗಟ್ಟೆಗಳಲ್ಲಿ ಮತಯಂತ್ರಗಳಲ್ಲಿ ಉಂಟಾದ ತಾಂತ್ರಿಕ ದೋಷ ಕಂಡು ಬಂದ ಪರಿಣಾಮ ತಕ್ಷಣವೇ ಬದಲಿ ಮತಯಂತ್ರಗಳನ್ನು ಸ್ಥಾಪಿಸಿ ಮತದಾನಕ್ಕೆ ಅನುವು ಮಾಡಿಕೊಡಲಾಯಿತು. ಉಳಿದಂತೆ ಕ್ಷೇತ್ರ ವ್ಯಾಪ್ತಿಯಲ್ಲಿ ಶಾಂತಿಯುತವಾಗಿ ಮತದಾನ ನಡೆಯಿತು.

Share this article