ಗುಳೇದಗುಡ್ಡಕ್ಕೆ ಮರೀಚಿಕೆಯಾದ ಶಾಶ್ವತ ನ್ಯಾಯಾಲಯ!

KannadaprabhaNewsNetwork |  
Published : May 18, 2024, 12:37 AM IST
 ಫೋಟೋ: 16ಜಿಎಲ್ ಡಿ3- ಗುಳೇದಗುಡ್ಡ ಪುರಸಭೆ ಮಾಲೀಕತ್ವದಲ್ಲಿರುವ  ನ್ಯಾಯಾಲಯ ಕಟ್ಟಡ | Kannada Prabha

ಸಾರಾಂಶ

ಗುಳೇದಗುಡ್ಡ: ಗುಳೇದಗುಡ್ಡ ತಾಲೂಕು ಕೇಂದ್ರವಾಗಿದ್ದರೂ ಶಾಶ್ವತ ನ್ಯಾಯಾಲಯ ಸೇರಿದಂತೆ ಮೂಲಕಸೌಕರ್ಯಗಳು ಮರೀಚಿಕೆಯಾಗಿವೆ.

ಕನ್ನಡಪ್ರಭವಾರ್ತೆ ಗುಳೇದಗುಡ್ಡ

ಗುಳೇದಗುಡ್ಡ ತಾಲೂಕು ಕೇಂದ್ರವಾಗಿದ್ದರೂ ಹಲವಾರು ಸೌಲಭ್ಯಗಳ‍ು ಇಲ್ಲಿನ ಜನತೆಗೆ ಇಂದಿಗೂ ಮರೀಚಿಕೆಯಾಗಿವೆ. 2019ರಲ್ಲಿ ತಾಲೂಕು ಕೇಂದ್ರವಾಗಿ ಘೋಷಣೆ ಮಾಡಿದಾಗ ಇಲ್ಲಿನ ಜನತೆ ತುಂಬಾ ಹರ್ಷ ವ್ಯಕ್ತಪಡಿಸಿದ್ದರು. ಎಲ್ಲ ಅಗತ್ಯ ಸರ್ಕಾರಿ ಸೇವೆಗಳು ಸ್ಥಳೀಯವಾಗಿ ಲಭ್ಯವಾಗಲಿವೆ ಎಂದು ನಿಟ್ಟುಸಿರು ಬಿಟ್ಟಿದ್ದರು. ಆದರೆ, ತಾಲೂಕು ಘೋಷಣೆಯಾಗಿ ಹಲವು ವರ್ಷಗಳು ಕಳೆದರೂ ಸೌಲಭ್ಯಗಳು ಮರೀಚಿಕೆಯಾಗಿಯೇ ಉಳಿದಿವೆ. ಹತ್ತು ವರ್ಷಗಳ ಹಿಂದೆ ಸ್ಥಾಪಿತವಾದ ಇಲ್ಲಿನ ಸಂಚಾರಿ ನ್ಯಾಯಾಲಯ ಇಂದಿಗೂ ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗದ ನೋವು ಜನರಿಗಿದೆ.ಬೇಕಿಗೆ ಶಾಶ್ವತ ನ್ಯಾಯಾಲಯ:ತಾಲೂಕು ಕೆಂದ್ರವಾಗಿ 5 ವರ್ಷಗಳು ಗತಿಸಿವೆ. ಆದರೆ, ಪಟ್ಟಣದಲ್ಲಿ 2014ರಲ್ಲಿಯೇ ಸಂಚಾರಿ ನ್ಯಾಯಾಲಯ ಸ್ಥಾಪಿಸಲಾಗಿದೆ. ಬರುವ ಜೂನ್ 7ಕ್ಕೆ ಹತ್ತು ವರ್ಷ ಪೂರ್ಣಗೊಂಡರೂ ಇನ್ನು ಶಾಶ್ವತ ನ್ಯಾಯಾಲಯವಾಗಿ ಪರಿವರ್ತನೆಯಾಗದಿರುವುದು ತಾಲೂಕಿನ ಜನರಲ್ಲಿ ನೋವಿದೆ. 2014ರಲ್ಲಿ ಸರ್ಕಾರ ಪಟ್ಟಣದ ಪುರಸಭೆಯ ಕಟ್ಟಡದಲ್ಲಿ ತಾತ್ಕಾಲಿಕ ಕೋರ್ಟ್‌ ಸ್ಥಾಪಿಸಲು ಸ್ಥಳಾವಕಾಶ ಒದಗಿಸಿತು. ಆದರೆ, ಈ ಕಟ್ಟಡ ಜಾಗ ತೀರಾ ಚಿಕ್ಕದಾಗಿದೆ. 10 ವರ್ಷಗಳ ಹಿಂದೆಯೇ ತಾತ್ಕಾಲಿಕವಾಗಿ ಈ ಕಟ್ಟಡವನ್ನು ಪಟ್ಟಣದ ಪ್ರಮುಖರು ಆಯ್ಕೆ ಮಾಡಿದ್ದರು.

ಅದು ಇಂದಿಗೂ ಅಲ್ಲಿಯೇ ಮುಂದುವರಿದಿದೆ. ವಿಶಾಲವಾದ ಮತ್ತು ದೊಡ್ಡದಾದ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಜಾಗದ ಕೊರತೆ ಇದೆ. ಸದ್ಯದ ಸ್ಥಳದಲ್ಲಿ ವಾಹನ ನಿಲುಗಡೆಗೆ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಕಕ್ಷಿದಾರರು ಮತ್ತು ಸಾರ್ವಜನಿಕರು ವಕೀಲರೊಂದಿಗೆ ಚರ್ಚಿಸಲು ಬಂದರೆ, ರಸ್ತೆಯಲ್ಲಿ ನಿಂತು ಮಾತನಾಡುವ ಸ್ಥಿತಿ ಇದೆ.

ಪ್ರಕರಣಗಳ ಇತ್ಯರ್ಥ ವಿಳಂಬ: ವಾರದಲ್ಲಿ ಕೇವಲ ಎರಡು ದಿನ ಮಾತ್ರ ಕೋರ್ಟ್‌ ಕಲಾಪ ನಡೆಸಲಾಗುತ್ತಿದೆ. ಹೀಗಾಗಿ ತಾಲೂಕಿನ ಎಲ್ಲ ಕಕ್ಷಿದಾರರಿಗೂ ಮತ್ತು ಸಾರ್ವಜನಿಕರಿಗೆ ತೊಂದರೆಯಾಗಿದೆ. ಕೆಲ ಸಣ್ಣ ಪುಟ್ಟ ವ್ಯಾಜ್ಯದ ಪ್ರಕರಣಗಳು ಈ ನ್ಯಾಯಾಲಯದಲ್ಲಿ ಹತ್ತಾರು ವರ್ಷಗಳಿಂದ ಇತ್ಯರ್ಥವಾಗುತ್ತಿಲ್ಲ. ಹೀಗಾಗಿ ಸಾರ್ವಜನಿಕರು ನ್ಯಾಯಾಲಯ ಕಾರ್ಯವೈಖರಿಗೆ ಬೇಸತ್ತು ಹೋಗಿ, ಸರ್ಕಾರ ಕೂಡಲೇ ಶಾಶ್ವತ ನ್ಯಾಯಾಲಯ ಸ್ಥಾಪಿಸಬೇಕು ಎಂದು ಅಗ್ರಹಿಸಿದ್ದಾರೆ.

ಪೂರ್ಣ ಪ್ರಮಾಣದ ನ್ಯಾಯಾಲಯ ಆರಂಭಿಸಲು ಮತ್ತು ಶಾಶ್ವತ ವಿಶಾಲವಾದ ಕಟ್ಟಡ ಕಟ್ಟಲು ಒಂದು ವರ್ಷದ ಹಿಂದೆಯೇ ಹೈಕೋರ್ಟ್‌ ನ್ಯಾಯಾಧೀಶರು ಹಾಗೂ ಮೂರು ತಿಂಗಳ ಹಿಂದೆ ಜಿಲ್ಲಾ ಸತ್ರ ನ್ಯಾಯಾಧೀಶರು ಪಟ್ಟಣದ ಬಸ್ ನಿಲ್ದಾಣದ ಎದುರಿನ ಪೆಟ್ರೋಲ್ ಬಂಕ್ ಹಿಂದುಗಡೆ ಮತ್ತು ಸಮೀಪದ ಪರ್ವತಿ ಗ್ರಾಮದ ಹತ್ತಿರ ಸ್ಥಳ ಪರೀಶೀಲನೆ ಮಾಡಿದರೂ ಇಂದಿಗೂ ಸ್ಥಳ ಅಂತಿಮವಾಗಿಲ್ಲ.

ಇದು ಇಲ್ಲಿನ ರಾಜಕೀಯ ಮುಖಂಡರ ಇಚ್ಚಾಶಕ್ತಿಯ ಕೊರತೆ ಎಂದು ಜನ ಹೇಳುತ್ತಾರೆ. ಪಟ್ಟಣದಲ್ಲಿ ಪೂರ್ಣ ಪ್ರಮಾಣದ ನ್ಯಾಯಾಲಯ ಅವಶ್ಯಕತೆಯಿದೆ. ಶಾಶ್ವತ ನ್ಯಾಯಾಲಯ ಸ್ಥಾಪಿಸಿದರೆ ಅನುಕೂಲವಾಗುತ್ತದೆ ಎಂದು ಪಟ್ಟಣದ ಅನೇಕರು ನೋವಿನಿಂದ ಹೇಳುತ್ತಾರೆ.ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾನೂನು ಸಚಿವರಾದ ಎಚ್.ಕೆ.ಪಾಟೀಲರಿಗೆ ಮನವಿ ನೀಡಿದರೂ ಯಾವುದೇ ಸಕಾರಾತ್ಮಕ ಕ್ರಮ ಕೈಗೊಂಡಿಲ್ಲ. ಹೈಕೋರ್ಟ್‌ ಪೂರ್ಣಪೀಠ ನ್ಯಾಯಾಲಯ ಸ್ಥಾಪಿಸಲು ಸರ್ಕಾರಕ್ಕೆ ನಿರ್ದೇಶನ ನೀಡಿದರೂ ಪ್ರಯೋಜನವಾಗಿಲ್ಲ. ಕೂಡಲೇ ಪಟ್ಟಣದಲ್ಲಿ ಶಾಶ್ವತ ನ್ಯಾಯಾಲಯ ಸ್ಥಾಪಿಸಬೇಕು.

- ಎಸ್.ಆರ್. ಬರಹಣಾಪೂರ, ಅಧ್ಯಕ್ಷರು, ವಕೀಲರ ಸಂಘ ಗುಳೇದಗುಡ್ಡ

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...