ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಗುರುವಾರ ವಿಧಾನಸೌಧದಲ್ಲಿ ನಡೆದ ಬರಗಾಲದ ವಿಶೇಷ ಅಧಿವೇಶನದಲ್ಲಿ ಮುದ್ದೇಬಿಹಾಳ ಸೇರಿದಂತೆ ಉತ್ತರ ಕರ್ನಾಟಕದ ರೈತರ ಸಂಕಷ್ಟಗಳನ್ನು ಸದನದ ಗಮನಕ್ಕೆ ತಂದ ಅವರು, ಈ ಭಾಗದ ರೈತರಿಗೆ ಬರ ಹೊಸದೇನಲ್ಲ. ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣದಲ್ಲಿ ಏರುಪೇರು ಉಂಟಾಗುತ್ತಿದ್ದು, ಕೃಷಿ, ಕುಡಿಯುವ ನೀರು ಹಾಗೂ ಜಾನುವಾರುಗಳ ಮೇಲೂ ಅದರ ನೇರ ಪರಿಣಾಮ ಬೀರುತ್ತಿದೆ. ಈ ವರ್ಷ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದ್ದು, ಇದನ್ನು ಸಾಮಾನ್ಯ ಬರಗಾಲವೆಂದು ಪರಿಗಣಿಸದೇ ಗಂಭೀರ ವಿಪತ್ತು ನಿರ್ವಹಣೆಯ ದೃಷ್ಟಿಯಿಂದ ನೋಡಬೇಕು ಎಂದು ಸಲಹೆ ನೀಡಿದರು.
ಕರ್ನಾಟಕದಲ್ಲಿ ಬರ ನಿರ್ಧಾರ ಪ್ರಕ್ರಿಯೆ ಹಂತ ಹಂತವಾಗಿ ನಡೆಯುತ್ತಿದ್ದು, ಕಡ್ಡಾಯ ಸೂಚಕಗಳು, ಪರಿಣಾಮ ಸೂಚಕಗಳು ಹಾಗೂ ಅಂತಿಮವಾಗಿ ನೆಲಮಟ್ಟದ ಪರಿಶೀಲನೆ ಆಧರಿಸಿ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗುತ್ತಿದೆ. ಸೆ.22ರಂದು ರಾಜ್ಯ ಸರ್ಕಾರ ಹೊರಡಿಸಿದ ಆದೇಶದ ಪ್ರಕಾರ ಹೆಚ್ಚುವರಿ 53 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ವಿಜಯಪುರ ಜಿಲ್ಲೆಯ ಮುದ್ದೇಬಿಹಾಳವೂ ತೀವ್ರ ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಸೇರಿದೆ. ಈ ಮೌಲ್ಯಮಾಪನ ಜೂನ್ 1ರಿಂದ ಸೆಪ್ಟೆಂಬರ್ 16ರವರೆಗಿನ ಪರಿಸ್ಥಿತಿ ಆಧರಿಸಿದೆ.ರಿಮೋಟ್ ಸೆನ್ಸಿಂಗ್ ವ್ಯವಸ್ಥೆಯಲ್ಲಿ ವಾಸ್ತವಾಂಶ ಪ್ರತಿಬಿಂಬಿಸಲಿ:ಬರ ಘೋಷಣೆಯಲ್ಲಿ ಉಪಗ್ರಹ ಆಧಾರಿತ ಮಾಹಿತಿ, ಸಸ್ಯಾವರಣದ ಸ್ಥಿತಿ, ಮಣ್ಣಿನ ತೇವಾಂಶ, ಮಳೆ ಪ್ರಮಾಣ ಸೇರಿದಂತೆ ವಿವಿಧ ವೈಜ್ಞಾನಿಕ ಸೂಚಕಗಳನ್ನು ಬಳಸಲಾಗುತ್ತಿದೆ. ಬೆಳೆ ಆರೋಗ್ಯವನ್ನು ಅಳೆಯಲು ಎನ್‌ಡಿವಿಐ ಸೇರಿದಂತೆ ಉಪಗ್ರಹ ಆಧಾರಿತ ಮಾಹಿತಿಯನ್ನೂ ಪರಿಗಣಿಸಲಾಗುತ್ತದೆ. ಬಳಿಕ ಅರ್ಹ ತಾಲೂಕುಗಳಲ್ಲಿ ನೆಲಮಟ್ಟದ ಪರಿಶೀಲನೆ ನಡೆಸಲಾಗುತ್ತದೆ.
ಸಮಗ್ರ ವರದಿ ಹಾಗೂ ನೆಲಮಟ್ಟದ ಪರಿಶೀಲನೆಯ ಆಧಾರದ ಮೇಲೆ ಮುದ್ದೇಬಿಹಾಳ ಮತ್ತು ತಾಳಿಕೋಟೆ ತಾಲೂಕುಗಳು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರ್ಪಡೆಯಾಗಿರುವುದು ಸ್ವಾಗತಾರ್ಹ. ಆದರೆ ಮುಂದಿನ ದಿನಗಳಲ್ಲಿ ರೈತರಿಗೆ ಪರಿಹಾರ ತಡವಾಗದಂತೆ ಬರ ಮೌಲ್ಯಮಾಪನ ಪ್ರಕ್ರಿಯೆಯಲ್ಲಿರುವ ತಾಂತ್ರಿಕ ಸಮಸ್ಯೆಗಳನ್ನು ಮೊದಲೇ ಪರಿಹರಿಸಬೇಕು ಎಂದರು.
ಸೂರ್ಯಕಾಂತಿ, ಸೋಯಾಬೀನ್, ಸಿರಿಧಾನ್ಯಗಳು ಸೇರಿದಂತೆ ಸ್ಥಳೀಯ ಹವಾಮಾನಕ್ಕೆ ಹೊಂದಿಕೊಳ್ಳುವ ಬೆಳೆಗಳ ಬಗ್ಗೆ ರೈತರಿಗೆ ಮಾರ್ಗದರ್ಶನ ನೀಡಬೇಕು. ಕೇವಲ ಬೆಳೆ ಬದಲಾವಣೆ ಹೇಳುವುದಷ್ಟೇ ಅಲ್ಲದೆ, ಉತ್ತಮ ಬೀಜ, ಮಾರುಕಟ್ಟೆ, ಬೆಳೆ ವಿಮೆ, ತಾಂತ್ರಿಕ ಸಲಹೆ ಮತ್ತು ಖರೀದಿ ವ್ಯವಸ್ಥೆಯನ್ನೂ ಸರ್ಕಾರ ಬಲಪಡಿಸಬೇಕು ಎಂದು ಅವರು ಹೇಳಿದರು.
ಮುದ್ದೇಬಿಹಾಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಕೃಷಿ ಮತ್ತು ಕುಡಿಯುವ ನೀರಿನ ದೃಷ್ಟಿಯಿಂದ ಜಲಾಶಯಗಳ ನೀರಿನ ಲಭ್ಯತೆ ಅತ್ಯಂತ ಮಹತ್ವದ್ದಾಗಿದೆ. ಆಲಮಟ್ಟಿ ಹಿನ್ನೀರಿನ ಮಟ್ಟದಲ್ಲಿ ಗಣನೀಯ ಇಳಿಕೆಯಾಗಿದ್ದರೆ ಅದರ ಪರಿಣಾಮ ನಾರಾಯಣಪುರ ಜಲಾಶಯದ ಮೇಲೂ ಬೀರುವ ಸಾಧ್ಯತೆಯಿದೆ.
ರೈತರ ಕಣ್ಣೀರು ಒರೆಸಲು ಕೇಂದ್ರ–ರಾಜ್ಯ ಸಮನ್ವಯ ಅಗತ್ಯ:ಬರ ಪರಿಹಾರವೆಂದರೆ ಕೇವಲ ಪರಿಹಾರಧನ ನೀಡುವುದಕ್ಕೆ ಸೀಮಿತವಾಗಬಾರದು. ಬೆಳೆ ನಷ್ಟ ಪರಿಹಾರ, ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ಉದ್ಯೋಗಾವಕಾಶ, ಬೆಳೆ ವಿಮೆ, ಕೃಷಿ ಸಾಲದ ಒತ್ತಡ ಮತ್ತು ಮುಂದಿನ ಹಂಗಾಮಿಗೆ ಅಗತ್ಯವಿರುವ ಬಿತ್ತನೆ ಬೀಜಗಳಂತಹ ಎಲ್ಲ ಅಂಶಗಳನ್ನು ಸಮಗ್ರವಾಗಿ ಪರಿಗಣಿಸಬೇಕು.