ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್‌ ಸಮಸ್ಯೆಗೆ ಶಾಶ್ವತ ಪರಿಹಾರ

KannadaprabhaNewsNetwork | Published : Mar 27, 2025 1:09 AM

ಸಾರಾಂಶ

ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್‌, ಸಫಾಯಿ ಕರ್ಮಚಾರಿಗಳ ಸಮಸ್ಯೆಗಳನ್ನು ಜಿಲ್ಲೆಯಲ್ಲಿ ಶಾಶ್ವತವಾಗಿ ಪರಿಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹೇಳಿದ್ದಾರೆ.

- ಜಿಲ್ಲಾಧಿಕಾರಿ ಗಂಗಧರ ಸ್ವಾಮಿ ಭರವಸೆ । ಮಾಹಿತಿ ಸಂಗ್ರಹಣೆ- ಅರಿವು ಮೂಡಿಸುವ ಜಿಲ್ಲಾಮಟ್ಟದ ಕಾರ್ಯಾಗಾರ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್‌, ಸಫಾಯಿ ಕರ್ಮಚಾರಿಗಳ ಸಮಸ್ಯೆಗಳನ್ನು ಜಿಲ್ಲೆಯಲ್ಲಿ ಶಾಶ್ವತವಾಗಿ ಪರಿಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹೇಳಿದರು.

ನಗರದ ಡಿಸಿ ಕಚೇರಿ ತುಂಗಭದ್ರಾ ಸಭಾಂಗಣದಲ್ಲಿ ಬುಧವಾರ ಕರ್ನಾಟಕ ಸಫಾಯಿ ಕರ್ಮಚಾರಿಗಳ ಆಯೋಗ ಮತ್ತು ಅಭಿವೃದ್ಧಿ ನಿಗಮ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ನಗರಾಭಿವೃದ್ಧಿ ಕೋಶ, ಪಾಲಿಕೆ, ಸಮಾಜ ಕಲ್ಯಾಣ ಇಲಾಖೆ ಆಯೋಜಿಸಿದ್ದ ಗುರುತಿಸಲ್ಪಟ್ಟ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್‌ಗೆ ಪುನರ್ವಸತಿ ಕಲ್ಪಿಸುವ ಕುರಿತ ಮಾಹಿತಿ ಸಂಗ್ರಹಣೆ ಮತ್ತು ಅರಿವು ಮೂಡಿಸುವ ಜಿಲ್ಲಾಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲಾಡಳಿತವು ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್‌ ಸಮಸ್ಯೆ ಪರಿಹರಿಸಲು ಜಿಲ್ಲಾಡಳಿತ ಒಂದು ತಂಡವಾಗಿ ಕಾರ್ಯ ನಿರ್ವಹಿಸುತ್ತಿದೆ. ಅಲ್ಲದೇ, ಜಿಲ್ಲೆಯ ಜನಪ್ರತಿನಿಧಿಗಳು ಸಹ ಸಮಾಜದ ಬಗ್ಗೆ ಅತಿ ಹೆಚ್ಚು ಕಾಳಜಿ ವಹಿಸಿದ್ದಾರೆ. ಕೇಂದ್ರ, ರಾಜ್ಯ ಸರ್ಕಾರ, ಆಯೋಗದ ಮೂಲಕ ನೇರ ಸಾಲ, ಸ್ವಾವಲಂಬಿ ಸಾರಥಿ ಯೋಜನೆ, ಉದ್ಯೋಗ ಸಾಲ ಸೇರಿದಂತೆ ವಿವಿಧ ರೀತಿಯಲ್ಲಿ ಧನಸಹಾಯ ನೀಡುತ್ತಿವೆ. ಇದನ್ನೆಲ್ಲಾ ಸಮರ್ಪಕವಾಗಿ ಬಳಸಿ, ಸಮಾಜದಲ್ಲಿ ಉತ್ತಮ ನಾಗರೀಕರಾಗಿ ಬಾಳಬೇಕು ಎಂದು ತಿಳಿಸಿದರು.

ವಿದ್ಯೆಗಿಂತ ದೊಡ್ಡದು ಬೇರೇನೂ ಇಲ್ಲ. ಸರ್ಕಾರ ನೀಡುವ ಸೌಲಭ್ಯ ಬಳಸಿಕೊಂಡು, ಮಕ್ಕಳನ್ನು ವಿದ್ಯಾವಂತರಾಗಿ ಮಾಡಬೇಕು. ಎಲ್ಲರೂ ಕೆಎಎಸ್, ಐಎಎಸ್‌, ಐಪಿಎಸ್ ಅಧಿಕಾರಿಗಳಾಗಲಿಲ್ಲ ಎಂದರೂ ಜೀವನ ನಿರ್ವಹಣೆ ಮಾಡುವ ಕೌಶಲ್ಯ ಹಾಗೂ ಸಾಮಾಜಿಕ ಜ್ಞಾನ ಪಡೆಯುತ್ತಾರೆ. ಮಕ್ಕಳಿಗಾಗಿ ಆಸ್ತಿ ಮಾಡಬೇಡಿ, ಮಕ್ಕಳನ್ನೇ ಸಮಾಜದ ಆಸ್ತಿಯಾಗಿ ಮಾಡಿ ಎಂದು ಸಲಹೆ ನೀಡಿದರು.

ಜಿಪಂ ಸಿಇಒ ಸುರೇಶ ಬಿ. ಇಟ್ನಾಳ್ ಮಾತನಾಡಿ, ಜಿಲ್ಲೆಯ ಗ್ರಾಮೀಣ ಭಾಗದಲ್ಲಿ 14 ಸ್ಕ್ಯಾವೆಂಜರ್ಸ್‌ ಗುರುತಿಸಿದ್ದು, 6 ಜನರಿಗೆ ವಸತಿ ಸೌಕರ್ಯ ಕಲ್ಪಿಸಿದೆ. ಉಳಿದ 8 ಜನರಿಗೆ ಶೀಘ್ರವೇ ವಸತಿ ಸೌಲಭ್ಯ ಕಲ್ಪಿಸಲಾಗುವುದು. ಕಳೆದ ವರ್ಷ ಮೊರಾರ್ಜಿ, ಕಿತ್ತೂರು ರಾಣಿ ಚನ್ನಮ್ಮ ಇತರೆ ವಸತಿ ಶಾಲೆಗಳಲ್ಲಿ 6ರಿಂದ 9ನೇ ತರಗತಿ, ಪಿಯುಸಿಯ 50 ಮಕ್ಕಳಿಗೆ ವಸತಿ ಶಾಲೆಗಳಿಗೆ ನೇರ ಪ್ರವೇಶ ಕಲ್ಪಿಸಲಾಗಿದೆ. ಜಿಲ್ಲಾ ಸಚಿವರು, ಸಂಸದರ ಮಾರ್ಗದರ್ಶನದಲ್ಲಿ ಸ್ಪರ್ಧಾತ್ಮಕ ತರಬೇತಿ, ಪದವೀಧರರಿಗೆ ಅನುಕೂಲ ಆಗುವಂತೆ ವೃತ್ತಿಪರ ಕೌಶಲ್ಯಧಾರಿತ ತರಬೇತಿ ಆಯೋಜಿಸಿದೆ. ವಿದ್ಯಾರ್ಥಿಗಳು ಸದುಪಯೋಗ ಪಡೆಯಬೇಕು. ಸಾರ್ವಜನಿಕರು ಕೂಡ ಸರ್ಕಾರದ ಯೋಜನೆ ಸದ್ಬಳಕೆ ಮಾಡಿಕೊಂಡು ಸಮಾಜದಲ್ಲಿ ಉತ್ತಮ ನಾಗರೀಕರಾಗಿ ಬಾಳಬೇಕು ಎಂದರು.

ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷೆ ಚಂದ್ರಕಲಾ, ವ್ಯವಸ್ಥಾಪಕ ಕುಮಾರ, ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಮೇಲ್ವಿಚಾರಣಾ ಸಮಿತಿ ಸದಸ್ಯ ಓಬಳೇಶ, ನಾಮ ನಿರ್ದೇಶಿತ ಸದಸ್ಯ ಶಂಕರ, ಮಂಜುಳಾ, ರಘುಪತಿ, ಜಿಪಂ ಯೋಜನಾ ನಿರ್ದೇಶಕ ಮಹಾಂತೇಶ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ನಾಗರಾಜ, ಇತರರು ಇದ್ದರು.

ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್‌ಗೆ ನೇರ ಸಾಲ, ಉದ್ಯಮಶೀಲತಾ ಯೋಜನೆಯಡಿ ಸಾಲ ಮಂಜೂರಾತಿ ಪತ್ರ ನೀಡಲಾಯಿತು. ಡಿಪ್ಲೊಮಾ ಪದವಿ ಪಡೆದ ವಿದ್ಯಾರ್ಥಿಗಳಿಗೆ ಪಾಲಿಕೆಯಿಂದ ಲ್ಯಾಪ್ ಟಾಪ್, 366 ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್‍ಗೆ ಗುರುತಿನ ಚೀಟಿ, ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್‌ಗಳ 25 ಮಕ್ಕಳಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಪ್ರವೇಶಾತಿ ಪತ್ರ ಸ್ಥಳದಲ್ಲೇ ನೀಡಲಾಯಿತು. ವಸತಿ ನಿರ್ಮಾಣಕ್ಕಾಗಿ ವಸತಿ ಯೋಜನೆಯಡಿ ಸಹಾಯಧನ ಮಂಜೂರು ಮಾಡಲಾಗಿದೆ. ಆರೋಗ್ಯ ಇಲಾಖೆಯಿಂದ ಆಯುಷ್ಮಾನ್ ಕಾರ್ಡ್ ನೀಡಲಾಯಿತು.

- - -

ಕೋಟ್‌

ಸಮಸ್ಯೆ ಆಲಿಸಲು ಜಿಲ್ಲಾಡಳಿತ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಉತ್ತಮ ಬೆಳವಣಿಗೆ. ತಾವು ತಮಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಕೇಳಿ ಪಡೆದುಕೊಳ್ಳಬೇಕು. ಅಧಿಕಾರಿಗಳು ಸಹ ಮಾನವೀಯತೆ, ಅಂತಃಕರಣದಿಂದ ಕೆಲಸ ನಿರ್ವಹಿಸಿದಲ್ಲಿ ಈ ಯೋಜನೆ ಸಫಲವಾಗುವುದು

- ಚಂದ್ರಶೇಖರ, ಬೆಂಗಳೂರು

- - -

-26ಕೆಡಿವಿಜಿ5:

ಕಾರ್ಯಾಗಾರದಲ್ಲಿ ಡಿಸಿ ಜಿ.ಎಂ.ಗಂಗಾಧರಸ್ವಾಮಿ ಮಕ್ಕಳಿಗೆ ಸೌಲಭ್ಯ ವಿತರಿಸಿದರು.

Share this article