ಕುಕನೂರು: ತಾಲೂಕಿನ ಚಿಕ್ಕೇನಕೊಪ್ಪ ಗ್ರಾಮದಲ್ಲಿ ಮೇಕೆಗಳನ್ನು ಮೇಯಿಸಿಕೊಂಡು ಬರಲು ಹೋಗಿದ್ದ ವ್ಯಕ್ತಿಗೆ ವಿದ್ಯುತ್ ಹೈಟೆನ್ಷನ್ ವೈರ್ ತಗುಲಿ ಗುರುವಾರ ಮೃತಪಟ್ಟ ಘಟನೆ ಜರುಗಿದೆ.
ರೈತರ ಜಮೀನಿನಲ್ಲಿ ೩೩ ಕೆವಿ ವಿದ್ಯುತ್ ಲೈನ್‌ನ್ನು ವಿಂಡ್ ಪವರ್ ಕಂಪನಿಯವರು ಹಾಕಿದ್ದಾರೆ. ಆದರೆ, ಅನೇಕ ಕಡೆ ಹೈಟೆನ್ಷನ್ ವೈಯರ್ ಬಳಿಯೇ ಮರಗಳಿವೆ. ಮರಗಳ ಟೊಂಗೆಗಳನ್ನು ಕತ್ತರಿಸುವ ಕೆಲಸ ಮಾಡಿಲ್ಲ. ಅಲ್ಲದೇ ಯಾವುದೇ ಸೂಚನಾ ಫಲಕಗಳನ್ನು ಹಾಕಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಮೃತ ಈರಪ್ಪ ಕುಟುಂಬಕ್ಕೆ ವಿಂಡ್ ಪವರ್ ಕಂಪನಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಕುಕನೂರು ಪೊಲೀಸ್ ಠಾಣೆಯಲ್ಲಿ ಮೃತ ಈರಪ್ಪ ಅವರ ಮಗ ಭೀರಪ್ಪ ಕುರಿ ವಿಂಡ್ ಕಂಪನಿಯವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.ಬಾರದ ಕಂಪನಿಯವರು, ಶವ ನೀಡಲು ನಿರಾಕರಿಸಿದ ಗ್ರಾಮಸ್ಥರು: ವಿಂಡ್ ಕಂಪನಿಯವರು ಸ್ಥಳಕ್ಕೆ ಬರಬೇಕು. ಆನಂತರ ಈರಪ್ಪ ಕುರಿ ಶವವನ್ನು ಮರಣೋತ್ತರ ಪರೀಕ್ಷೆಗೆ ತೆಗೆದುಕೊಳ್ಳಬೇಕು. ವಿಂಡ್ ಕಂಪನಿಯವರು ಬರಲೇಬೇಕು ಎಂದು ಗ್ರಾಮಸ್ಥರು ಈರಪ್ಪ ಕುರಿ ಅವರ ಶವವನ್ನು ಪೊಲೀಸರು ಮುಟ್ಟದಂತೆ ತಾಕೀತು ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಶುಕ್ರವಾರ ಮಧ್ಯಾಹ್ನ 2 ಗಂಟೆ ವರೆಗೂ ಕಾದರೂ ವಿಂಡ್ ಕಂಪನಿಯವರು ಬಾರದ ಕಾರಣ ಅವರ ವಿರುದ್ಧ ಈರಪ್ಪ ಕುರಿ ಅವರ ಪುತ್ರ ಭೀರಪ್ಪ ಪ್ರಕರಣ ದಾಖಲಿಸಿದರು. ಆನಂತರ ಶವ ಪರೀಕ್ಷಾ ಕಾರ್ಯಕ್ಕೆ ಪೊಲೀಸರು ಶವವನ್ನು ತೆಗೆದುಕೊಂಡು ಬಂದರು.