ಸಾಧನೆಯಿಂದ ಮನುಷ್ಯನ ಜೀವನ ಸಾರ್ಥಕ: ಮೀನಾಕ್ಷಿ

KannadaprabhaNewsNetwork |  
Published : Mar 23, 2025, 01:33 AM IST
22ಕೆಎಂಎನ್‌ಡಿ-11ನಾಗಮಂಗಲ ಮಾದರಿ ಉನ್ನತ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಆಯೋಜಿಸಿದ್ದ 1993 ರಿಂದ 2000ನೇ ಸಾಲಿನ ಹಿರಿಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಮತ್ತು ಗುರುವಂದನಾ ಕಾರ್ಯಕ್ರಮದಲ್ಲಿ ಅಂದಿನ ಶಿಕ್ಷಕಿಯರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ವಿದ್ಯಾರ್ಥಿ ಜೀವನ ಬಹಳ ಸುಂದರ, ಸಂಭ್ರಮ ಮತ್ತು ಮಹತ್ವವಾದದ್ದು. ಆ ದಿಸೆಯಲ್ಲಿ ನೀವು ತೆಗೆದುಕೊಂಡ ನಿರ್ಧಾರಗಳು ಹಾಗೂ ನಿಮ್ಮ ಸುತ್ತಮುತ್ತಲ ವಾತಾವರಣದಿಂದ ಶಾಲೆಯಲ್ಲಿ ವಿದ್ಯೆ ಕಲಿತು ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸ್ಥಾನ ಅಲಂಕರಿಸಲು ಸಾಧ್ಯವಾಗಿದೆ.

ಕನ್ನಡಪ್ರಭವಾರ್ತೆ ನಾಗಮಂಗಲ

ಗುರು ಹಿರಿಯರು ಹಾಗೂ ಪೋಷಕರ ಮಾರ್ಗದರ್ಶನ ಮತ್ತು ಸತತ ಪ್ರಯತ್ನ, ಪರಿಶ್ರಮ ಇದ್ದರೆ ಜೀವನದಲ್ಲಿ ಏನಾದರೊಂದು ಸಾಧನೆ ಮಾಡಬಹುದು. ಸಾಧನೆಯಿಂದ ಮಾತ್ರ ಮನುಷ್ಯನ ಜೀವನ ಸಾರ್ಥಕಗೊಳ್ಳುತ್ತದೆ ಎಂದು ನಿವೃತ್ತ ಶಿಕ್ಷಕಿ ಮೀನಾಕ್ಷಿ ಹೇಳಿದರು.

ಪಟ್ಟಣದ ಮಾದರಿ ಉನ್ನತ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ 1993 ರಿಂದ 2000ನೇ ಸಾಲಿನ ಹಿರಿಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಮತ್ತು ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ಮಾತನಾಡಿ, ಗುರುಗಳಿಂದ ವಿದ್ಯೆ ಕಲಿತ ವಿದ್ಯಾರ್ಥಿಗಳು ಉನ್ನತ ಸ್ಥಾನಕ್ಕೆ ಹೋದಾಗ ಗುರುಗಳ ಬೋಧನೆ ಪರಿಶ್ರಮಕ್ಕೆ ಪ್ರತಿಫಲ ಸಿಕ್ಕಂತಾಗುತ್ತದೆ. ಜೊತೆಗೆ ವಿದ್ಯಾರ್ಥಿಗಳ ಪ್ರಗತಿಯನ್ನು ಕಂಡು ಪೋಷಕರಷ್ಟೇ ಗುರುಗಳು ಹೆಮ್ಮೆ ಪಡುತ್ತಾರೆ ಎಂದರು.

ವಿದ್ಯಾರ್ಥಿ ಜೀವನ ಬಹಳ ಸುಂದರ, ಸಂಭ್ರಮ ಮತ್ತು ಮಹತ್ವವಾದದ್ದು. ಆ ದಿಸೆಯಲ್ಲಿ ನೀವು ತೆಗೆದುಕೊಂಡ ನಿರ್ಧಾರಗಳು ಹಾಗೂ ನಿಮ್ಮ ಸುತ್ತಮುತ್ತಲ ವಾತಾವರಣದಿಂದ ಶಾಲೆಯಲ್ಲಿ ವಿದ್ಯೆ ಕಲಿತು ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸ್ಥಾನ ಅಲಂಕರಿಸಲು ಸಾಧ್ಯವಾಗಿದೆ ಎಂದರು.

ವಿದ್ಯಾರ್ಥಿಗಳ ಪ್ರೀತಿ ಅಭಿಮಾನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನೀವು ಇಂದು ಹಲವು ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದೀರಿ. ನಿಮ್ಮ ಬಾಲ್ಯದ ನೆನಪುಗಳನ್ನು ಸ್ಮರಿಸಿಕೊಂಡು ಇಲ್ಲಿಗೆ ಬಂದಿರುವ ನಿಮಗೆ ಒಳ್ಳೆಯದಾಗಲಿ. ನಮ್ಮಿಂದ ವಿದ್ಯೆ ಕಲಿತು ಎತ್ತರಕ್ಕೆ ಬೆಳೆದು ನಮ್ಮನ್ನು ಆಹ್ವಾನಿಸಿ ಸನ್ಮಾನಿಸುತ್ತಿರುವುದು ತುಂಬಾ ಸಂತೋಷದ ವಿಷಯ. ನನ್ನ ವೃತ್ತಿ ಜೀವನದಲ್ಲಿ ಶಾಲೆಯನ್ನು ಮರೆಯಲು ಸಾಧ್ಯವಿಲ್ಲ ಎಂದರು.

ನಿವೃತ್ತ ಶಿಕ್ಷಕಿ ಜಯಮ್ಮ ಮಾತನಾಡಿ, ವರ್ಷಗಳು ಕಳೆದರೂ ವಿದ್ಯೆ ಕಲಿಸಿದ ಶಿಕ್ಷಕರು ಮತ್ತು ಶಾಲೆಯನ್ನು ನೆನಪಿಸಿಕೊಳ್ಳುತ್ತಿರುವ ಹಿರಿಯ ವಿದ್ಯಾರ್ಥಿಗಳ ಕಾಳಜಿ ಎಂದಿಗೂ ಮರೆಯಲು ಸಾಧ್ಯವಿಲ್ಲ. ಶಾಲೆಗೆ ಮರಳಿ ಬಂದು ನೆನಪುಗಳನ್ನು ಸ್ಮರಣೀಯವಾಗಿಸಿರುವ ನಮ್ಮ ಪ್ರೀತಿಯ ವಿದ್ಯಾರ್ಥಿಗಳಿಗೆ ನಾನು ಋಣಿಯಾಗಿದ್ದೇನೆ ಎಂದರು.

ಮತ್ತೋರ್ವ ನಿವೃತ್ತ ಶಿಕ್ಷಕಿ ಗಿರಿಜಮ್ಮ ಮಾತನಾಡಿ, ಈ ಶಾಲೆ ಸುಮಾರು 50 ವರ್ಷಗಳಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದೆ. ಆದರೆ, ದಿನಕಳೆದಂತೆ ಶಾಲೆಯಲ್ಲಿ ಮಕ್ಕಳ ದಾಖಲಾತಿ ಕುಸಿಯುತ್ತಿರುವುದು ಬೇಸರದ ಸಂಗತಿ.

ಹಿರಿಯ ವಿದ್ಯಾರ್ಥಿಗಳು ಆಸಕ್ತಿ ವಹಿಸಿ ದಾಖಲಾತಿ ಹೆಚ್ಚಿಸುವ ಜೊತೆಗೆ ನಿಮ್ಮ ಕೈಲಾದ ನೆರವನ್ನು ಶಾಲೆಗೆ ನೀಡುವ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸಹಕಾರ ನೀಡಬೇಕು ಎಂದು ಹಿರಿಯ ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದರು.

ಶಾಲೆಯ ಶಿಕ್ಷಕಿ ರತ್ನಮ್ಮ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದರು. ಇದೇ ವೇಳೆ ನಿಧನರಾಗಿರುವ ಶಿಕ್ಷಕಿ ಶಾಂತಲಕ್ಷ್ಮಿ ಅವರಿಗೆ ಹಿರಿಯ ವಿದ್ಯಾರ್ಥಿಗಳು ಸಂತಾಪ ಸೂಚಿಸಿದರು. ನಂತರ 1993 ರಿಂದ 2000ನೇ ಸಾಲಿನಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದ್ದ ರತ್ನಮ್ಮ, ಗಿರಿಜಮ್ಮ, ಮೀನಾಕ್ಷಿ, ಜಯಮ್ಮ ಅವರನ್ನು ಹಿರಿಯ ವಿದ್ಯಾರ್ಥಿಗಳು ಸನ್ಮಾನಿಸಿದರು. ಬಳಿಕ ಹಿರಿಯ ವಿದ್ಯಾರ್ಥಿಗಳು ತಮ್ಮ ಪರಿಚಯ ಮಾಡಿಕೊಳ್ಳುವ ಜೊತೆಗೆ ಶಾಲಾ ದಿನಗಳ ಕುರಿತು ಮಾತನಾಡಿದರು.

ಹಿರಿಯ ವಿದ್ಯಾರ್ಥಿಗಳಾದ ಚನ್ನಕೇಶವ, ವಿನಾಯಕ್, ನಾಗೇಂದ್ರ, ವೀಣಾ, ಶ್ರೀಕಾಂತ್, ಇಸ್ಮಾಯಿಲ್, ಸುನಿಲ್, ನಾಗಭೂಷಣ್, ಶ್ಯಾಮ್, ಧನಲಕ್ಷ್ಮಿ, ರಾಘವೇಂದ್ರ, ಅರುಣ್, ರೇಖಾ, ತುಳಸಿ, ವಿದ್ಯಾ, ರಘು, ಲತಾ, ಭಾನುಮತಿ, ನಾಗೇಶ್ ಬಾಬು, ಅಶ್ವಿನಿ, ವಿದ್ಯಾಶ್ರೀ, ವೀಣಾ, ಭಾನುಮತಿ, ಪಾರ್ಥ, ನಾಗೇಶಬಾಬು ಸೇರಿದಂತೆ ಹಲವರು ಇದ್ದರು.

PREV

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?